ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳ: ರೈತರ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ

ಕೃಷಿಕರಿಗೆ ಕೀಟಬಾಧೆ, ಬೆಳೆನಾಶ, ಆದಾಯ ಕುಸಿತದ ಆತಂಕ
Last Updated 26 ಅಕ್ಟೋಬರ್ 2019, 20:34 IST
ಅಕ್ಷರ ಗಾತ್ರ

ಬೆಂಗಳೂರು: ಫಸಲಿಗೆ ಕಾಡುವ ಕೀಟಬಾಧೆ, ಬೆಳೆ ನಾಶ ಮಾಡುತ್ತಿರುವ ಹವಾಮಾನ ವೈಪರೀತ್ಯ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಇಳುವರಿ, ಆದಾಯದ ಪ್ರಮಾಣ.

ಪ್ರಸಕ್ತ ದಿನಮಾನಗಳಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿವು. ವರ್ಷಪೂರ್ತಿ ದುಡಿದರೂ ನಿರೀಕ್ಷಿತ ಆದಾಯ ಕೈ ಸೇರದ್ದರಿಂದ ಕಂಗಾಲಾಗಿರುವ ರೈತರ ಸಮಸ್ಯೆಗಳಿಗೆ ಕೃಷಿ ಮೇಳದಲ್ಲಿ ‘ಆಪ್ತ ಸಮಾಲೋಚನಾ ಕೇಂದ್ರ’ ವೈಜ್ಞಾನಿಕ ಪರಿಹಾರದ ಭರವಸೆ ಮೂಡಿಸಿತು.

ರೈತರ ಪ್ರಶ್ನೆಗಳು ಹಾಗೂ ಸಮಸ್ಯೆಗಳನ್ನು ಆಲಿಸಿದ ಕೃಷಿ ವಿಶ್ವವಿದ್ಯಾಲಯದ ತಜ್ಞರು, ಉದಾಹರಣೆ ಹಾಗೂ ಮಾದರಿಗಳ ಸಮೇತ ಮಾಹಿತಿ ನೀಡಿದರು. ತಜ್ಞರು ಹಾಗೂ ಅನುಭವಿ ರೈತರು ಮುಖಾಮುಖಿಯಾಗಿದ್ದರಿಂದ ಸಂವಾದ , ಚರ್ಚೆ ಸಾಧ್ಯವಾಯಿತು.

ಇಳುವರಿ ಕುಸಿಯುತ್ತಿರುವ ಕುರಿತ ಸಮಸ್ಯೆಗಳಿಗೆ ಉತ್ತರಿಸಿದ ತಜ್ಞರು, ‘ನಿಮ್ಮೂರಿನ ಯಾವುದೋ ಅಂಗಡಿಯಲ್ಲಿ ಬೀಜ, ಗೊಬ್ಬರ, ಕೀಟನಾಶಕ ಖರೀದಿಸಿ ಬಳಸಬೇಡಿ. ತಜ್ಞರು ಹಾಗೂ ಅನುಭವಿ ರೈತರ ಸಲಹೆಯಂತೆ ಕೃಷಿ ಮಾಡಿ ಯಶಸ್ಸು ಸಿಗುತ್ತದೆ’ ಎಂದರು.

ರೈತರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ತಜ್ಞರು ದಾಖಲಿಸಿಕೊಂಡರು. ಆಸ್ಪತ್ರೆಯಲ್ಲಿ ನೀಡುವ ಚಿಕಿತ್ಸಾ ಚೀಟಿಯ ಮಾದರಿಯಲ್ಲೇ ಕೃಷಿ ಸಮಸ್ಯೆಗಳ ಪರಿಹಾರ ಕ್ರಮಗಳನ್ನು ಚೀಟಿಯಲ್ಲಿ ಬರೆದುಕೊಡಲಾಯಿತು.

‘ಬೆಳೆಯನ್ನು ತಿಂದು ಹಾಕುತ್ತಿರುವ ಕೀಟ ಹಾಗೂ ಕಳೆ ಬಗ್ಗೆ ಸೇರಿದ್ದ ರೈತರು ಆತಂಕ ವ್ಯಕ್ತಪಡಿಸಿದರು. ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುವುದು ಹೇಗೆ? ಅಂತರ್ಜಲ ಮಟ್ಟ ಹೆಚ್ಚಿಸಲು ಏನು ಮಾಡಬೇಕು? ಎಂಬ ಪ್ರಶ್ನೆಗಳು ಎದುರಾದವು’ ಎಂದು ಬೇಸಾಯ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಕೆ.ಎನ್‌.ಗೀತಾ ‘ಪ್ರಜಾವಾಣಿ’ಗೆ ತಿಳಿಸಿದರು.

ಕೀಟ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಸುಮಿತ್ರಾ, ‘ತೆಂಗು, ಅಡಿಕೆಗೆ ಸುಳಿ ಹೊಡೆಯುವ ಹುಳ ಹಾಗೂ ಕೆಂಪುಮೂತಿ ಹುಳದ ಕಾಟ ಶುರುವಾಗಿದೆ. ಟೊಮೆಟೊ ಬೆಳೆಯಲ್ಲೂ ‘ದಕ್ಷಿಣ ಅಮೆರಿಕ ಪಿನ್‌ವರ್ಬ್‌’ ಕೀಟ ಕಾಣಿಸಿಕೊಳ್ಳುತ್ತಿದೆ. ಇದರಿಂದ ಇಳುವರಿ ಕುಸಿಯುವ ಆತಂಕವಿದೆ. ಕೀಟಗಳ ಹತೋಟಿ ಕ್ರಮಗಳನ್ನು ವಿವರಿಸಲಾಯಿತು’ ಎಂದು ಹೇಳಿದರು.

ಕೃಷಿ ವಿಸ್ತರಣಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಮಧುಶ್ರೀ, ‘ಕಾಲಕ್ಕೆ ತಕ್ಕಂತೆ ಆದಾಯ ಪಡೆಯುವುದಕ್ಕಿಂತಲೂ ವರ್ಷಪೂರ್ತಿ ಆದಾಯ ಪಡೆಯಬೇಕೆಂಬ ಹಂಬಲ ರೈತರಲ್ಲಿದೆ. ಸಮಗ್ರ ಕೃಷಿ ಪದ್ಧತಿ ಬಗ್ಗೆ ರೈತರು ಸಲಹೆ ಪಡೆದರು’ ಎಂದು ತಿಳಿಸಿದರು.

ಮಣ್ಣು ಪರೀಕ್ಷೆಯಿಂದ ಪರಿಹಾರ:‘ಮಣ್ಣಿನ ಪರೀಕ್ಷೆ ಹಾಗೂ ಮಾದರಿ ಸಂಗ್ರಹ ಬಗ್ಗೆ ರೈತರಲ್ಲಿ ಮಾಹಿತಿ ಕೊರತೆ ಇದೆ. ಪರೀಕ್ಷೆ ಎಂದರೆ ಭೂಮಿಯ ಯಾವುದೋ ಸ್ಥಳದಿಂದ ಮುಷ್ಠಿ ಮಣ್ಣನ್ನು ಚೀಲದಲ್ಲಿ ಹಾಕಿಕೊಂಡು ಬರುತ್ತಾರೆ. ಆದರೆ, ಮಣ್ಣಿನ ಸಂಗ್ರಹಕ್ಕೂ ವೈಜ್ಞಾನಿಕ ಕ್ರಮವಿರುವುದು ಬಹುತೇಕರಿಗೆ ಗೊತ್ತಿಲ್ಲ. ಆ ಬಗ್ಗೆ ಅರಿವು ಮೂಡಿಸಿದೆವು’ ಎಂದು ಮಣ್ಣುವಿಜ್ಞಾನ ಹಾಗೂ ರಸಾಯನ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಎನ್‌.ಬಿ. ಪ್ರಕಾಶ್ ಹೇಳಿದರು.

ತಾರಸಿ ಉದ್ಯಾನಕ್ಕೂ ಕೀಟಬಾಧೆ
‘ಬೆಂಗಳೂರಿನಲ್ಲಿಯೂ ತಾರಸಿ ಉದ್ಯಾನ ಬಗ್ಗೆ ಆಸಕ್ತಿ ಬೆಳೆಯುತ್ತಿದೆ. ಆದರೆ, ಹಲವೆಡೆ ಕೀಟಬಾಧೆ ಕಾಣಿಸಿದೆ’ ಎಂದು ಸಹ ಪ್ರಾಧ್ಯಾಪಕಿ ಸುಮಿತ್ರಾ ಹೇಳಿದರು.

‘ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಳಿಗೆಗೆ ಭೇಟಿ ನೀಡಿದ್ದರು. ಮನೆಗೆ ಬೇಕಾದ ತರಕಾರಿ ಬೆಳೆಯುತ್ತೇವೆ. ಹುಳುಗಳ ಕಾಟದಿಂದ ಸಸಿಗಳು ಸಾಯುತ್ತಿವೆ. ಪರಿಹಾರ ಹೇಳಿ’ ಎಂದು ಕೇಳಿದರು.

‘ತಾರಸಿ ಮೇಲೆ ನಾಶಕ ಸಿಂಪಡಿಸಿದರೆ ದುಷ್ಪರಿಣಾಮ ಹೆಚ್ಚು. ಹೀಗಾಗಿ, ಸರಳ ಕ್ರಮಗಳ ಮೂಲಕವೇ ಕೀಟ ಹತೋಟಿ ಬಗ್ಗೆ ಹೇಳಿ ಕಳುಹಿಸಲಾಯಿತು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT