ಶುಕ್ರವಾರ, ಸೆಪ್ಟೆಂಬರ್ 25, 2020
22 °C
ಸಂಭ್ರಮಿಸಿದ ಕೃಷ್ಣವೇಷಧಾರಿಗಳು; ದೇವಾಲಯಗಳಲ್ಲಿ ನೆರವೇರಿದ ವಿಶೇಷ ‍ಪೂಜೆ

ಮನೆಯಲ್ಲಿಯೇ ಕೃಷ್ಣನ ಲೀಲೆ ಸ್ಮರಣೆ; ದೇವಾಲಯಗಳಲ್ಲಿ ವಿಶೇಷ ‍ಪೂಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ನಡುವೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ನಗರದಲ್ಲಿ ಶ್ರದ್ಧಾ–ಭಕ್ತಿ ಮತ್ತು ಸಡಗರದಿಂದ ಮಂಗಳವಾರ ಆಚರಿಸಲಾಯಿತು.

ಇಸ್ಕಾನ್‌ ದೇವಸ್ಥಾನ, ಬಸವನಗುಡಿಯ ಪುತ್ತಿಗೆ ಮಠದ ಗೋವರ್ಧನಗಿರಿ ಗುಹಾಲಯ ಕ್ಷೇತ್ರ, ವಿದ್ಯಾಪೀಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಸೇರಿದಂತೆ ವಿವಿಧ ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಕೃಷ್ಣ, ರಾಧೆಯರ ವಿಗ್ರಹಗಳಿಗೆ ಹೂವು, ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಪೂಜೆಯೊಂ­ದಿಗೆ ಭಜನಾ ಕಾರ್ಯಕ್ರಮಗಳು ನೆರವೇರಿದವು. ಕೋವಿಡ್ ಕಾರಣ ಬೆರಳೆಣಿಕೆಯಷ್ಟು ಭಕ್ತರು ಸರತಿ ಸಾಲಿನಲ್ಲಿ ಪರಸ್ಪರ ಅಂತರ ಕಾಯ್ದುಕೊಂಡು, ಕೃಷ್ಣನ ದರ್ಶನ ಪಡೆದರು. ಆನ್‌ಲೈನ್‌ನಲ್ಲಿ ಕೂಡ ಪೂಜೆ ಹಾಗೂ ವಿವಿಧ ಕಾರ್ಯಕ್ರಮಗಳ ವೀಕ್ಷಣೆಗೆ ಅವಕಾಶ ನೀಡಲಾಗಿತ್ತು. 

ಭಜನೆ, ಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ರಾಧಾ–ಕೃಷ್ಣ ವೇಷಧಾರಣೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆನ್‌ಲೈನ್ ಮೂಲಕವೇ ದೇವಸ್ಥಾನದ ಆಡಳಿತ ಮಂಡಳಿಗಳು ನಡೆಸಿದವು. ಬಸವನಗುಡಿಯ ಗೋವರ್ಧನಗಿರಿ ಗುಹಾಲಯ ಕ್ಷೇತ್ರದಲ್ಲಿ ಸುಗುಣೇಂದ್ರ ತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಕಾರ್ಯಕ್ರಮಗಳು ನಡೆದವು. ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದಲ್ಲಿ ಬೆಳಿಗ್ಗೆ 7.30ಕ್ಕೆ ಸುವಿದ್ಯೇಂದ್ರ ತೀರ್ಥ ಶ್ರೀಪಾದರಿಂದ ಕೃಷ್ಣನಿಗೆ ತುಳಸಿ ಅರ್ಚನೆ ನಡೆಯಿತು. ರಾತ್ರಿ ಸಂಗೀತ, ಕಲ್ಪೋಕ್ತಿ ಪೂಜೆ, ಅರ್ಘ್ಯ ಪ್ರದಾನ ಮಾಡಲಾಯಿತು.

ಸಂಜಯನಗರದ ರಾಧಾಕೃಷ್ಣ ದೇವಸ್ಥಾನ, ದೊಡ್ಡ ಬೊಮ್ಮಸಂದ್ರದ ಕೃಷ್ಣ ದೇವಾಲಯ, ಇಂದಿರಾನಗರದ ಕೃಷ್ಣ ದೇವಾಲಯ, ಮಲ್ಲೇಶ್ವರದ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕಾಡುಗೊಂಡನಹಳ್ಳಿಯ ಲಕ್ಷ್ಮೀ ನರಸಿಂಹ ಮತ್ತು ವೇಣುಗೋಪಾಲ ಸ್ವಾಮಿ ದೇವಸ್ಥಾನ, ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಇಸ್ಕಾನ್‌ ದೇವಾಲಯ ಸೇರಿದಂತೆ ನಗರದ ವಿವಿಧ ಕೃಷ್ಣ ದೇವಾಲಯಗಳಲ್ಲಿ ಅಭಿಷೇಕ, ವಿಶೇಷ ಪೂಜೆ, ಅಲಂಕಾರಗಳು ನಡೆದವು.

ಕೃಷ್ಣನ ವೇಷಭೂಷಣ: ನಗರದಲ್ಲಿ ಬಹುತೇಕರು ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಮನೆಯಲ್ಲಿಯೇ ಆಚರಿಸಿದರು. ಆನ್‌ಲೈನ್‌ ಮೂಲಕವೇ ಪೂಜೆಗಳನ್ನು ಕಣ್ತುಂಬಿಕೊಂಡರು. ಪೋಷಕರು ಕಂದಮ್ಮಗಳಿಗೆ ರಾಧಾ–ಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದರು. ಮೈಗೆ ನೀಲಿಬಣ್ಣ, ತಲೆಗೆ ಕಿರೀಟ, ಕೈಯಲ್ಲಿ ಕೊಳಲು ಹಿಡಿದ ಪುಟಾಣಿಗಳು ಆನ್‌ಲೈನ್‌ ಮೂಲಕ ವಿವಿಧ ಸಂಸ್ಥೆಗಳು ನಡೆಸಿದ ಸ್ಪರ್ಧೆಗಳಲ್ಲಿ ಭಾಗವಹಿಸಿ, ಸಂಭ್ರಮಿಸಿದರು. 

ಆನ್‌ಲೈನ್‌ ಮೂಲಕ ಕೃಷ್ಣನ ಆರಾಧನೆ
ನಗರದ ಇಸ್ಕಾನ್‌ ದೇವಾಲಯದಲ್ಲಿ ಮುಂಜಾನೆಯಿಂದ ರಾತ್ರಿಯವರೆಗೂ ವಿವಿಧ ಕಾರ್ಯಕ್ರಮಗಳು ನಡೆದವು. ಭಕ್ತರು ಆನ್‌ಲೈನ್ ಮೂಲಕವೇ ಕೃಷ್ಣನ ಪೂಜೆ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಮುಂಜಾನೆ 6.30ಕ್ಕೆ ರಾಧಾಕೃಷ್ಣ ನೌಕಾವಿಹಾರ, 7.45ಕ್ಕೆ ಕೃಷ್ಣ ಜನ್ಮಾಷ್ಟಮಿ ಮಹಾ ಅಭಿಷೇಕ, 9.15ರ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರವಚನಗಳು ನಡೆದವು. ರಾತ್ರಿ 8ಕ್ಕೆ ಮತ್ತೊಮ್ಮೆ ಮಹಾಭಿಷೇಕ ನಡೆಸಲಾಯಿತು. ರಾತ್ರಿ 10.30ರವರೆಗೂ ನಿರಂತರ ಕಾರ್ಯಕ್ರಮಗಳು ಜರುಗಿದವು. ಯೂ ಟ್ಯೂಬ್ ಚಾನೆಲ್ ಮೂಲಕ ‘ಸ್ವಾಗತಂ ಕೃಷ್ಣ’ ಹೆಸರಿನಲ್ಲಿ ಎಲ್ಲ ಕಾರ್ಯಕ್ರಮಗಳನ್ನು ನೇರಪ್ರಸಾರ ಮಾಡಲಾಯಿತು.

‘ತಿಥಿಯ ಪ್ರಕಾರ ಬುಧವಾರ ಅಷ್ಟಮಿ ಬರಲಿದೆ. ಹಾಗಾಗಿ ದೇವಾಲಯದಲ್ಲಿ ಬುಧವಾರ ಕೂಡ ಬೆಳಿಗ್ಗೆ 6.30ರಿಂದ ರಾತ್ರಿಯವರೆಗೂ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಇರಲಿದ್ದು, ಅದರ ನೇರ ಪ್ರಸಾರ ಇರುತ್ತದೆ’ ಎಂದು ದೇವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಕುಲಶೇಖರ ಚೈತನ್ಯ ದಾಸ್‌ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು