ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರಗಳ ಕೂಪವಾಗಿರುವ ಅಬಕಾರಿ ಇಲಾಖೆ: ಕೆಆರ್‌ಎಸ್‌ ಆರೋಪ

ವರ್ಗಾವಣಾ ಪ್ರಕ್ರಿಯೆ ವೇಳೆ ಭ್ರಷ್ಟಾಚಾರ
Last Updated 8 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಅಬಕಾರಿ ಇಲಾಖೆ ಎನ್ನುವುದು ಭ್ರಷ್ಟಾಚಾರದ ಕೂಪವಾಗಿದೆ. ಹುದ್ದೆ ಸೃಷ್ಟಿ, ವರ್ಗಾವಣೆ ಪ್ರಕ್ರಿಯೆಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಮತ್ತು ಇಲಾಖೆಯಲ್ಲಿ ಪಾರದರ್ಶಕ ವರ್ಗಾವಣಾ ನೀತಿಯನ್ನು ಜಾರಿಗೆ ತರಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ಒತ್ತಾಯಿಸಿದೆ.

‘ಇಲಾಖೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಭ್ರಷ್ಟಾಚಾರದ ಬಗ್ಗೆ, ಇಲಾಖೆಯಲ್ಲಿನ ಕೆಲವು ಪ್ರಾಮಾಣಿಕ ಅಧಿಕಾರಿಗಳೇ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಇದೇ ಪತ್ರವನ್ನು ನಮ್ಮ ಪಕ್ಷದ ಅಧ್ಯಕ್ಷ ರವಿಕೃಷ್ಣ ರೆಡ್ಡಿಯವರಿಗೂ ಕಳುಹಿಸಿದ್ದಾರೆ‘ ಎಂದು ಪಕ್ಷದ ಉಪಾಧ್ಯಕ್ಷ ಎಸ್.ಎಚ್. ಲಿಂಗೇಗೌಡ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬೆಂಗಳೂರಿನಲ್ಲಿ ಅನವಶ್ಯಕವಾಗಿ 300 ಹುದ್ದೆಗಳನ್ನು ಸೃಷ್ಟಿ ಮಾಡಿ, ಕೆಳಹಂತದ ನೌಕರರಿಂದ ಹಣ ಪಡೆದು ಅವರಿಗೆ ಬಡ್ತಿ ನೀಡಲಾಗಿದೆ. ಈ ಬಡ್ತಿಯಿಂದ ತೆರವಾಗಿರುವ ಕೆಳಹಂತದ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಸಚಿವ ಕೆ.ಗೋಪಾಲಯ್ಯ ಅವರ ಹಿಂಬಾಲಕರಿಗೆ ಮತ್ತು ಅವರು ಹೇಳಿದವರಿಗೆ ಕೆಲಸ ನೀಡಲು ಒತ್ತಡ ಹೇರಲಾಗುತ್ತಿದೆ’ ಎಂದೂ ಅವರು ದೂರಿದರು.

‘ಸಾರಾಯಿ ಅಂಗಡಿಗಳ ವಾರ್ಷಿಕ ಪರವಾನಗಿ ನವೀಕರಣ ಅಧಿಕಾರ ಮೊದಲು ಜಿಲ್ಲಾಧಿಕಾರಿಯವರಿಗೆ ಇತ್ತು. ಅಬಕಾರಿ ಕಾಯ್ದೆಗೆ ತಿದ್ದುಪಡಿ ತಂದು, ಈ ಅಧಿಕಾರವನ್ನು ಜಿಲ್ಲಾ ಅಬಕಾರಿ ಉಪ ಆಯುಕ್ತರಿಗೆ ನೀಡಲಾಗಿದೆ. ಈಗ ಪ್ರತಿ ನವೀಕರಣಕ್ಕೆ ₹20 ಸಾವಿರ ವಸೂಲಿ ಮಾಡಿಕೊಡುವಂತೆ ಅಬಕಾರಿ ಸಚಿವರಿಂದ ಒತ್ತಡ ಬರುತ್ತಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಪಕ್ಷದ ಕಾರ್ಯದರ್ಶಿ ರಘು ಜಾಣಗೆರೆ ಹೇಳಿದರು.

‘ರಾಜ್ಯದಲ್ಲಿ ಏಪ್ರಿಲ್‌ನಲ್ಲಿ ನಡೆದ ಉಪ ಚುನಾವಣೆ ವೇಳೆ ಪ್ರತಿ ಜಿಲ್ಲೆಯಿಂದ ₹15 ಲಕ್ಷದಿಂದ ₹20 ಲಕ್ಷದವರೆಗೆ ಅಬಕಾರಿ ಇಲಾಖೆಯಿಂದ ವಸೂಲಿ ಮಾಡಲಾಗಿದೆ. ಈ ಅವ್ಯವಹಾರಗಳ ಹಿಂದೆ ಬೆಂಗಳೂರಿನ ಅಬಕಾರಿ ಉಪ ಆಯುಕ್ತ ಜೆ. ಗಿರಿ ಮತ್ತು ನಾಗೇಶ್‌ ಎಂಬುವರ ಪಾತ್ರವಿರುವ ಬಗ್ಗೆ ಇಲಾಖೆಯ ಸಿಬ್ಬಂದಿ ದೂರಿದ್ದಾರೆ. ಇವರು ಹಲವು ವರ್ಷಗಳಿಂದ ಬೆಂಗಳೂರು ಕಚೇರಿಯಲ್ಲಿಯೇ ಇದ್ದು, ತಮ್ಮ ಹುದ್ದೆಯ ಕೆಲಸ ಕಾರ್ಯಗಳನ್ನು ಮಾಡದೆ, ಅವ್ಯವಹಾರದಲ್ಲಿಯೇ ನಿರತರಾಗಿದ್ದಾರೆ ಎಂಬ ಮಾಹಿತಿ ಇದೆ’ ಎಂದೂ ಅವರು ದೂರಿದರು.

‘ಎಲ್ಲ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ವಹಿಸಬೇಕು. ತಪ್ಪಿತಸ್ಥರನ್ನು ಕೆಲಸದಿಂದ ತೆಗೆದು ಹಾಕಬೇಕು. ಬೇಡಿಕೆಗೆ ಸರ್ಕಾರ ಮನ್ನಣೆ ನೀಡದಿದ್ದರೆ, ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಪಕ್ಷವು ಎಳೆ–ಎಳೆಯಾಗಿ ಸಾರ್ವಜನಿಕರ ಮುಂದಿಡಲಿದೆ ಮತ್ತು ತನಿಖೆ ನಡೆದು, ಭ್ರಷ್ಟರಿಗೆ ಶಿಕ್ಷೆ ಆಗುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದೂ ಅವರು ಎಚ್ಚರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT