ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್‌ ಬಡ್ತಿಗೆ ಸಿಎಂ ಹೆಸರಲ್ಲಿ ₹4.5 ಕೋಟಿ ಲಂಚ: ಕೆಎಸ್‌ಆರ್ ದೂರು

Last Updated 29 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಜಿನಿಯರ್‌ಗಳ ಬಡ್ತಿಗೆ ಮುಖ್ಯಮಂತ್ರಿ ಹೆಸರಿನಲ್ಲೇ ₹4.50 ಕೋಟಿ ಲಂಚ ಪಡೆಯಲಾಗಿದೆ’ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆಎಸ್‌ಆರ್‌) ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳವಾರ ದೂರು ನೀಡಿದೆ.

ಬಿಬಿಎಂಪಿಯ 65 ಎಂಜಿನಿಯರ್‌ಗಳ ಬಡ್ತಿಗೆ ಸಂಬಂಧಿಸಿದ ಕಡತ ನಗರಾಭಿವೃದ್ಧಿ ಇಲಾಖೆಯಲ್ಲಿ ಬಾಕಿ ಇದೆ. ಸಹಾಯಕ ಎಂಜಿನಿಯರ್‌ (ಎ.ಇ) ಹುದ್ದೆಯಿಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) 40 ಹುದ್ದೆಗೆ, ಎಇಇ ಹುದ್ದೆಯಿಂದ ಕಾರ್ಯಪಾಲಕ ಎಂಜಿನಿಯರ್‌ (ಇ.ಇ) 7 ಹುದ್ದೆಗೆ, ಇ.ಇ ಹುದ್ದೆಯಿಂದ ಸೂಪರಿಂಟೆಂಡೆಂಟ್‌ ಎಂಜಿನಿಯರ್‌ (ಎಸ್‌.ಇ) 5 ಹುದ್ದೆಗೆ ಪಟ್ಟಿ ಬಾಕಿ ಉಳಿದುಕೊಂಡಿದೆ.

‘ಈ ಕಡತ ಅನುಮೋದಿಸಲು ಲಂಚ ಪಡೆಯಲಾಗುತ್ತಿದೆ. ನಿಮ್ಮ ಹೆಸರೇಳಿ ₹4.50 ಕೋಟಿ ಬೇಡಿಕೆ ಇಟ್ಟು ಹಣ ಪಡೆಯಲಾಗಿದೆ. ಎ.ಇ ಹುದ್ದೆಯಿಂದ ಎಇಇ ಹುದ್ದೆಗೆ ಬಡ್ತಿ ಪಡೆಯಲು ₹2 ಕೋಟಿ, ಎಇಇ ಹುದ್ದೆಯಿಂದ ಇ.ಇ ಹುದ್ದೆಗೆ ₹1 ಕೋಟಿ ಮತ್ತು ಇ.ಇ ಹುದ್ದೆಯಿಂದ ಎಸ್‌.ಇ ಹುದ್ದೆಗೆ ₹1.50 ಕೋಟಿ ಲಂಚದ ವ್ಯವಹಾರ ನಡೆದಿದೆ. ಉಪ ಕಾರ್ಯದರ್ಶಿ ಮಟ್ಟದ ಅಧಿಕಾರಿಯೊಬ್ಬರು ಇದರಲ್ಲಿ ಭಾಗಿಯಾಗಿದ್ದಾರೆ. ಈ ರೀತಿ ಅಪಾರ ಪ್ರಮಾಣದ ಲಂಚ ಪಾವತಿಸಲು ಬಿಬಿಎಂಪಿ ಎಂಜಿನಿಯರ್‌ಗಳು ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿದ್ದಾರೆ. ಸ್ವಲ್ಪ ಪ್ರಾಮಾಣಿಕತೆ ಉಳಿಸಿಕೊಂಡವರೂ ವಿಧಿಯಿಲ್ಲದೆ ಸಾಲ ಮಾಡಿ ಲಂಚ ನೀಡಿದ್ದಾರೆ’ ಎಂದು ಕೆಎಸ್‌ಆರ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್. ದೂರಿನಲ್ಲಿ ವಿವರಿಸಿದ್ದಾರೆ.

‘ಪದೇ ಪದೇ ಮುಖ್ಯಮಂತ್ರಿ ಮತ್ತು ಅವರ ಸಚಿವಾಲಯದ ಹೆಸರಿನಲ್ಲಿ ಹಣ ವಸೂಲಿ ನಡೆಯುತ್ತಲೇ ಇದೆ. ಆದರೂ, ಈ ಬಗ್ಗೆ ಯಾವುದೇ ಕ್ರಮ ಅಗದಿರುವುದು ಮುಖ್ಯಮಂತ್ರಿ ಸಚಿವಾಲಯದ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ’ ಎಂದು ತಿಳಿಸಿದ್ದಾರೆ.

‘ಬೆಂಗಳೂರಿನಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಆಡಳಿತ ಅಧೋಗತಿಗೆ ಹೋಗಿದೆ ಎಂದು ಪದೇ ಪದೇ ಹೈಕೋರ್ಟ್‌ ಛೀಮಾರಿ ಹಾಕುತ್ತಿದೆ. ಎಂಜಿನಿಯರ್‌ಗಳ ಬಡ್ತಿಯಲ್ಲಿ ನಡೆದಿರುವ ಹಣಕಾಸಿನ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT