ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಬಸ್ ಗುದ್ದಿ ಪ್ರಯಾಣಿಕ ಸಾವು

ನಿಲ್ದಾಣದ ರಸ್ತೆಯಲ್ಲಿ ಹೊರಟಿದ್ದ ವೃದ್ಧ; ಅತೀ ವೇಗದ ಚಾಲನೆಯಿಂದ ಅಪಘಾತ
Published 4 ಏಪ್ರಿಲ್ 2024, 16:08 IST
Last Updated 4 ಏಪ್ರಿಲ್ 2024, 16:08 IST
ಅಕ್ಷರ ಗಾತ್ರ

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿರುವ ಕೇಂದ್ರ ಬಸ್‌ ನಿಲ್ದಾಣದಲ್ಲಿ ಗುರುವಾರ ಮಧ್ಯಾಹ್ನ ಅಪಘಾತ ಸಂಭವಿಸಿದ್ದು, ಕೆಎಸ್‌ಆರ್‌ಟಿಸಿ ಬಸ್ ಗುದ್ದಿ ಪ್ರಯಾಣಿಕ ಗಂಗಾರೆಡ್ಡಿ (85) ಮೃತಪಟ್ಟಿದ್ದಾರೆ.

‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಂಗಾರೆಡ್ಡಿ, ಬೆಂಗಳೂರಿನ ಬಸವೇಶ್ವರನಗರದ 4ನೇ ಹಂತದಲ್ಲಿ ನೆಲೆಸಿದ್ದರು. ತಮ್ಮೂರಿಗೆ ಹೋಗಲು ಬಸ್‌ ನಿಲ್ದಾಣಕ್ಕೆ ಬಂದಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ’ ಎಂದು ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಕೆಎಸ್‌ಆರ್‌ಟಿಸಿ ಬಸ್ ಚಾಲಕ ರಾಘವೇಂದ್ರನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡು, ಚಾಲಕನನ್ನು ಬಂಧಿಸಲಾಗಿದೆ. ಬಸ್‌ ಸಹ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಕೈಚೀಲ ಹಿಡಿದುಕೊಂಡಿದ್ದ ಗಂಗಾರೆಡ್ಡಿ, ಬಸ್ ನಿಲ್ದಾಣದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಚಿಕ್ಕಮಗಳೂರು ವಿಭಾಗದ ಮೂಡಿಗೆರೆ ಡಿಪೊಗೆ ಸೇರಿದ್ದ ಬಸ್‌ (ಕೆಎ 18 ಎಫ್‌ 0948), ಅದೇ ರಸ್ತೆಯಲ್ಲಿ ಬಂದಿತ್ತು. ಚಾಲಕ, ಸರ್ವೀಸ್ ರಸ್ತೆಯಿಂದ ನಿಲ್ದಾಣದ ಪ್ಲಾಟ್‌ಫಾರ್ಮ್‌ಗೆ ಹೋಗಲು ಅತೀ ವೇಗದಲ್ಲಿ ಬಸ್‌ ಚಲಾಯಿಸಿದ್ದ. ಇದೇ ಸಂದರ್ಭದಲ್ಲಿ ಬಸ್‌, ಗಂಗಾರೆಡ್ಡಿ ಅವರಿಗೆ ಗುದ್ದಿತ್ತು.’

‘ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಗಂಗಾರೆಡ್ಡಿ, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಹೋಗಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಲಕರ ನಿರ್ಲಕ್ಷ್ಯ: ಪ್ರಾಣ ಭಯದಲ್ಲಿ ಪ್ರಯಾಣಿಕರು’

ಮೆಜೆಸ್ಟಿಕ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ನಿಲ್ದಾಣಗಳಲ್ಲಿ ಸಂಚರಿಸಲು ಪ್ರಯಾಣಿಕರು ಭಯಪಡುವ ಪರಿಸ್ಥಿತಿ ಇದೆ. ಹಲವು ಚಾಲಕರು ಅತೀ ವೇಗದಲ್ಲಿ ನಿರ್ಲಕ್ಷ್ಯದಿಂದ ಬಸ್ ಚಲಾಯಿಸುತ್ತಿದ್ದು ಈ ಬಗ್ಗೆ ದೂರು ನೀಡಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲವೆಂಬ ಆರೋಪವಿದೆ.

‘ನಗರದ ಹೃದಯ ಭಾಗದಲ್ಲಿರುವ ನಿಲ್ದಾಣಕ್ಕೆ ನಿತ್ಯವೂ ಲಕ್ಷಕ್ಕೂ ಹೆಚ್ಚು ಜನರು ಬಂದು ಹೋಗುತ್ತಾರೆ. ನಿಲ್ದಾಣಕ್ಕೆ ಬರುವ ಹಾಗೂ ನಿಲ್ದಾಣದಿಂದ ಹೋಗುವ ಬಸ್‌ಗಳು ಅತೀ ವೇಗದಲ್ಲಿ ಸಾಗುತ್ತವೆ. ಇದರಿಂದಾಗಿ ನಿಲ್ದಾಣದಲ್ಲಿ ನಿಗದಿತ ಪ್ಲಾಟ್‌ಫಾರ್ಮ್‌ ಹಾಗೂ ಇತರೆಡೆ ಹೋಗಲು ಜನರು ಭಯಪಡುತ್ತಿದ್ದಾರೆ’ ಎಂದು ಪ್ರಯಾಣಿಕ ರಮೇಶ್ ದೂರಿದರು.

‘ಬಹುತೇಕರು ತಮ್ಮ ಮಕ್ಕಳು ವೃದ್ಧರನ್ನು ಕರೆದುಕೊಂಡು ಕುಟುಂಬ ಸಮೇತರಾಗಿ ನಿಲ್ದಾಣಕ್ಕೆ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಉಪ್ಪಾರಪೇಟೆ ಸಂಚಾರ ಠಾಣೆ ಪೊಲೀಸರಿಗೂ ಮಾಹಿತಿ ಇದೆ. ನಿಲ್ದಾಣದಲ್ಲಿ ಕೆಲ ತಾತ್ಕಾಲಿಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಇವುಗಳನ್ನು ಚಾಲಕರು ಪಾಲಿಸುತ್ತಿಲ್ಲ’ ಎಂದು ಆರೋಪಿಸಿದರು.

ನಿಲ್ದಾಣದಲ್ಲಿ ಸಂಭವಿಸಿದ್ದ ಕೆಲ ಅಪಘಾತಗಳು

* 2023 ಡಿಸೆಂಬರ್ 25: ಮೆಜೆಸ್ಟಿಕ್ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಗುದ್ದಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು.

* ಜುಲೈ 25: ಮೆಜೆಸ್ಟಿಕ್‌ ಕೇಂದ್ರ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ ಗುದ್ದಿ ಪ್ರಯಾಣಿಕರೊಬ್ಬರು ಮೃತಪಟ್ಟಿದ್ದರು.

* 2021 ಜುಲೈ 29: ಮೆಜೆಸ್ಟಿಕ್ ಕೇಂದ್ರ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಚಾಲಕ ನಿಂಗಪ್ಪ (45) ಮೃತಪಟ್ಟಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT