ಭಾನುವಾರ, ಮೇ 9, 2021
18 °C

ಹಬ್ಬ ಮುಗಿಸಿ ಮರಳಿದ ಪ್ರಯಾಣಿಕರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ 9ನೇ ದಿನವಾದ ಗುರುವಾರವೂ ಮುಂದುವರಿದಿದ್ದು, ನಗರದಲ್ಲಿ ಬಿಎಂಟಿಸಿ ಬಸ್‌ಗಳಿಲ್ಲದೆ ಯುಗಾದಿ ಮುಗಿಸಿ ಮರಳಿದ ಪ್ರಯಾಣಿಕರು ಪರದಾಡಿದರು.

ಸಾಲು–ಸಾಲು ರಜೆಗಳನ್ನು ಮುಗಿಸಿ ಬಂದ ಪ್ರಯಾಣಿಕರು ಬೆಳಿಗಿನ ಜಾವದಿಂದಲೇ ನಗರಕ್ಕೆ ತಲುಪಿದರು. ಖಾಸಗಿ ಮತ್ತು ಸರ್ಕಾರಿ ಬಸ್ ಇಳಿದ ಪ್ರಯಾಣಿಕರು ಅಲ್ಲೊಂದು ಇಲ್ಲೊಂದು ಎಂಬಂತೆ ಓಡಾಡುತ್ತಿದ್ದ ಬಿಎಂಟಿಸಿ ಬಸ್‌ಗಳಿಗಾಗಿ ಕಾದರು.

ಆನೇಕಲ್, ಜಿಗಣಿ, ಚಂದಾಪುರ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆಗೆ ತೆರಳಲು ಖಾಸಗಿ ಬಸ್‌ಗಳಿದ್ದವು. ಆದರೆ, ಚಂದಾಪುರಕ್ಕೆ ತೆರಳಲು ಒಬ್ಬ ಪ್ರಯಾಣಿಕನಿಗೆ ₹ 100 ನಿಗದಿ ಮಾಡಲಾಗಿತ್ತು. ದರ ಹೆಚ್ಚಳದ ಬಗ್ಗೆ ಪ್ರಶ್ನಿಸಿದರೂ ಪ್ರಯೋಜನವಾಗದೆ ದುಬಾರಿ ದರದಲ್ಲೇ ಜನ ಪ್ರಯಾಣಿಸಿದರು.

‘ಮೂರು ಮಕ್ಕಳೊಂದಿಗೆ ಬಂದಿದ್ದೇವೆ. ಎಲೆಕ್ಟ್ರಾನಿಕ್ ಸಿಟಿಗೆ ತೆರಳಲು ₹ 500 ಬೇಕಾಗಿದೆ. ಕೂಲಿ ಕೆಲಸ ಮಾಡುವ ನಾವು ಅಷ್ಟೊಂದು ಹಣ ಎಲ್ಲಿಂದ ತರಬೇಕು’ ಎಂದು ದಂಪತಿ ಪ್ರಶ್ನಿಸಿದರು.

ಮನ ಬಂದಂತೆ ದರ ವಸೂಲಿ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಆರ್‌ಟಿಒ ಅಧಿಕಾರಿಗಳು, ಖಾಸಗಿ ಚಾಲಕರಿಗೆ ಎಚ್ಚರಿಕೆ ನೀಡಿದರು. ಹೆಚ್ಚು ದರ ಪಡೆಯುತ್ತಿದ್ದರೆ ವಾಹನಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.

‘ಸಾರಿಗೆ ಮುಷ್ಕರದ ಲಾಭವನ್ನು ಆಟೋ ಚಾಲಕರು ಪಡೆಯುತ್ತಿದ್ದಾರೆ. ಮೆಜೆಸ್ಟಿಕ್‌ನಿಂದ ನಿಮಾನ್ಸ್‌ಗೆ ತೆರಳಲು ಆಟೋ ಚಾಲಕರು ₹200 ಕೇಳುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು. ಮೆಟ್ರೊ ರೈಲಿನಲ್ಲೂ ಗುರುವಾರ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿತ್ತು. ಬೆಳಿಗ್ಗೆಯಿಂದಲೂ ಪ್ರಯಾಣಿಕರು ಸಾಲುಗಟ್ಟಿ ನಿಂತಿದ್ದರು.

ಮೇಣದ ಬತ್ತಿ ಹಿಡಿದು ಪ್ರತಿಭಟನೆ
ಸಾರಿಗೆ ಮುಷ್ಕರದ ಅಂಗವಾಗಿ ನೌಕರರು ನಗರದಲ್ಲಿ ಗುರುವಾರ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.

ಮೌರ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರ ಕೂಟ ನಿರ್ಧರಿಸಿತ್ತು. ಆದರೆ, ಅದಕ್ಕೆ ಪೊಲೀಸರು ಅನುಮತಿ ನೀಡದ ಕಾರಣ, ಗಾಂಧಿ ನಗರದಲ್ಲಿ ಮೇಣದ ಬತ್ತಿ ಹಿಡಿದು ಪ್ರತಿಭಟಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದ್ ನೌಕರರ ಪ್ರತಿಭಟನೆಗೆ ಸಾಥ್ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು