ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಗ್ಗೆರೆಯ ವಿದ್ಯುತ್ ಪರಿವರ್ತಕ ಸ್ಫೋಟ: ಗುಜರಿ ಅಂಗಡಿ, ಮನೆಗಳಿಗೆ ಬೆಂಕಿ

Published 14 ಅಕ್ಟೋಬರ್ 2023, 20:27 IST
Last Updated 14 ಅಕ್ಟೋಬರ್ 2023, 20:27 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಎರಡು ಕಡೆ ಶನಿವಾರ ಬೆಂಕಿ ಅವಘಡಗಳು ಸಂಭವಿಸಿದ್ದು, ಗುಜರಿ ಅಂಗಡಿ– ಮನೆಗಳು ಹಾಗೂ ಅಗರಬತ್ತಿ ಕಾರ್ಖಾನೆಯಲ್ಲಿ ಹಾನಿ ಉಂಟಾಗಿದೆ.

ಲಗ್ಗೆರೆಯ ಚಾಮುಂಡಿ ನಗರದ ಹೈ ಟೆನ್ಶನ್ ಲೈನ್ ಸ್ಟ್ರೀಟ್‌ನಲ್ಲಿರುವ ವಿದ್ಯುತ್ ಪರಿವರ್ತಕ (ಟ್ರಾನ್ಸ್‌ಫಾರ್ಮರ್) ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದ್ದು, ಗುಜರಿ ಅಂಗಡಿ ಹಾಗೂ ಅಕ್ಕ–ಪಕ್ಕದ ಮನೆಗಗಳಿಗೆ ಬೆಂಕಿ ವ್ಯಾಪಿಸಿ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.

ಶನಿವಾರ ಮಧ್ಯಾಹ್ನ ವಿದ್ಯುತ್‌ ಪರಿವರ್ತಕ ಏಕಾಏಕಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತ್ತು. ಪಕ್ಕದಲ್ಲಿದ್ದ ಗುಜರಿ ಅಂಗಡಿಯ ವಸ್ತುಗಳಿಗೂ ಬೆಂಕಿ ತಗುಲಿ ಉರಿಯಲಾರಂಭಿಸಿತ್ತು. ದಟ್ಟ ಹೊಗೆ ಆವರಿಸಿಕೊಂಡಿತ್ತು. ಗುಜರಿ ಅಂಗಡಿಯ ಅಕ್ಕ– ಪಕ್ಕದಲ್ಲಿರುವ ಎರಡು ಮನೆಗಳಿಗೂ ಬೆಂಕಿಯ ಬಿಸಿ ತಾಗಿತ್ತು.

ಕೆಲ ನಿಮಿಷಗಳಲ್ಲಿ ಗುಜರಿ ವಸ್ತಗಳೆಲ್ಲವೂ ಸುಟ್ಟು ಕರಕಲಾದವು. ಮನೆಗಳ ಹೊರಭಾಗದಲ್ಲಿದ್ದ ವಸ್ತುಗಳಿಗೆ ಬೆಂಕಿ ತಾಗಿತ್ತು. ಬೆಂಕಿಯ ತಾಪಕ್ಕೆ ಕಿಟಕಿ ಗಾಜುಗಳು ಒಡೆದಿದ್ದವು. ಶೆಡ್‌ ಹಾಗೂ ಗೋಡೆಗಳು ಬಿರುಕು ಬಿಟ್ಟಿದ್ದವು. ಮಾಹಿತಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

‘ಹಲವು ವರ್ಷಗಳ ಹಿಂದೆ ವಿದ್ಯುತ್ ಪರಿವರ್ತಕ ಅಳವಡಿಸಲಾಗಿದೆ. ಇದಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಶೆಡ್ ನಿರ್ಮಿಸಿ ಗುಜರಿ ಅಂಗಡಿ ತೆರೆದು, ಹಳೇ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಜೊತೆಗೆ, ಅಕ್ಕ–ಪಕ್ಕದಲ್ಲಿ ಮನೆಗಳೂ ಇವೆ’ ಎಂದು ಸ್ಥಳೀಯರು ಹೇಳಿದರು.

‘ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಆತಂಕ ಉಂಟಾಗಿತ್ತು. ದಟ್ಟ ಹೊಗೆ ಇಡೀ ಪ್ರದೇಶವನ್ನು ಆವರಿಸಿತ್ತು. ಮನೆಯಿಂದ ಹೊರಗೆ ಓಡಿ ಬಂದ ಜನ ಸುರಕ್ಷಿತ ಸ್ಥಳಕ್ಕೆ ಹೋಗಿದ್ದರು. ಅವಘಡದಿಂದ ಸಾಕಷ್ಟು ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಸಾವು–ನೋವು ವರದಿಯಾಗಿಲ್ಲ’ ಎಂದು ತಿಳಿಸಿದರು.

ಆಸರೆ ವೃದ್ಧಾಶ್ರಮದಲ್ಲಿ ಆತಂಕ: ‘ಬೆಂಕಿ ಹೊತ್ತಿಕೊಂಡಿದ್ದ ಗುಜರಿ ಅಂಗಡಿ ಸಮೀಪದಲ್ಲಿ, ಆಸರೆ ವೃದ್ಧಾಶ್ರಮದ ಕಟ್ಟಡವಿದೆ. ಅಲ್ಲಿದ್ದ ವೃದ್ಧರು, ಅವಘಡದಿಂದ ಆತಂಕಗೊಂಡಿದ್ದರು. ಸಿಬ್ಬಂದಿ ಹಾಗೂ ಸ್ಥಳೀಯರು, ಎಲ್ಲ ವೃದ್ಧರನ್ನು ಬೇರೆಡೆ ಸ್ಥಳಾಂತರಿಸಿದರು’ ಎಂದು ಸ್ಥಳೀಯರು ಹೇಳಿದರು.

ರಾಜಗೋಪಾಲನಗರ ಪೊಲೀಸರು, ‘ಅವಘಡದಿಂದ ಗುಜರಿ ಅಂಗಡಿ ಸಂಪೂರ್ಣ ಸುಟ್ಟಿದೆ. ಅಕ್ಕ–ಪಕ್ಕದ ಮನೆಗಳಿಗೂ ಹಾನಿಯಾಗಿದೆ. ಸ್ಥಳೀಯರ ಹೇಳಿಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹಾನಿ ಎಷ್ಟಾಗಿದೆ ? ಎಂಬುದರ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದರು.

ಅಗರಬತ್ತಿ ತಯಾರಿಕೆ ಘಟಕದಲ್ಲಿ ಬೆಂಕಿ: ವಿಜಯನಗರ ಬಳಿಯ ಪೈಪ್‌ಲೈನ್ ರಸ್ತೆಯಲ್ಲಿರುವ ಅಗರಬತ್ತಿ ತಯಾರಿಕೆ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಘಟಕದ ಎದುರು ನಿಲ್ಲಿಸಲಾಗಿದ್ದ 8 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ.

‘ಶನಿವಾರ ಬೆಳಿಗ್ಗೆ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲಾರಂಭಿಸಿತ್ತು. ಘಟಕದ ಹೊರಗೂ ಬೆಂಕಿ ವ್ಯಾಪಿಸಿತ್ತು. ದ್ರಾವಣವೊಂದು ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದ ಬಗ್ಗೆ ಮಾಹಿತಿ ಇದೆ. ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಘಟಕದಲ್ಲಿದ್ದ ಕಾರ್ಮಿಕರು ಹೊರಗೆ ಹೋಗಿದ್ದರು. ಹೀಗಾಗಿ, ಯಾವುದೇ ಸಾವು ನೋವು ಸಂಭವಿಸಿಲ್ಲ. ದ್ವಿಚಕ್ರ ವಾಹನಗಳು ಸುಟ್ಟಿದ್ದು, ಮಾಲೀಕರಿಂದ ಹೇಳಿಕೆ ಪಡೆಯಬೇಕಿದೆ’ ಎಂದರು.

ಬೆಂಕಿ ಅವಘಡ ಸಂಭವಿಸಿದ್ದ ಅಗರಬತ್ತಿ ತಯಾರಿಕೆ ಘಟಕವನ್ನು ಯುವಕರಿಬ್ಬರು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ
ಬೆಂಕಿ ಅವಘಡ ಸಂಭವಿಸಿದ್ದ ಅಗರಬತ್ತಿ ತಯಾರಿಕೆ ಘಟಕವನ್ನು ಯುವಕರಿಬ್ಬರು ವೀಕ್ಷಿಸಿದರು – ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT