ಶುಕ್ರವಾರ, ಫೆಬ್ರವರಿ 28, 2020
19 °C
ರಸ್ತೆ ನಿರ್ಮಾಣಕ್ಕೆ 1 ಎಕರೆ 10 ಗುಂಟೆ ನೀಡಲು ಒಪ್ಪಿಗೆ

ವೀರಸಂದ್ರ ಕೆರೆ ಒತ್ತುವರಿ ತೆರವಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಹೆಬ್ಬಗೋಡಿಯ ವೀರಸಂದ್ರ ಕೆರೆಯ ಒತ್ತುವರಿ ತೆರವಿಗೆ ಕೂಡಲೇ ಸರ್ವೆ ನಡೆಸಬೇಕು. ಈ ಸಂಬಂಧ ವಾರದೊಳಗೆ ಸಭೆ ನಡೆಸಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್‌.ಶಿವಮೂರ್ತಿ ಹೇಳಿದರು.

ಅವನತಿಯ ಅಂಚು ತಲುಪಿದ್ದ ವೀರಸಂದ್ರ ಕೆರೆಯನ್ನು ಟೈಟನ್‌ ಕಂಪನಿ ಪುನರುಜ್ಜೀವನಗೊಳಿಸುತ್ತಿದೆ. ಈ ಕುರಿತು ಕಂಪನಿ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಒಪ್ಪಂದ ಮಾಡಿಕೊಂಡಿವೆ. ಕೆರೆ ಪುನರುಜ್ಜೀವನಕ್ಕೆ ಒತ್ತುವರಿ ಅಡ್ಡಿಯಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಬುಧವಾರ ವರದಿ ಪ್ರಕಟವಾಗಿತ್ತು. ಜಿಲ್ಲಾಧಿಕಾರಿ ಅವರು ಬುಧವಾರ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.

ಕೆರೆಯ ಪಶ್ಚಿಮ ದಿಕ್ಕಿನಲ್ಲಿ ಇನ್ನೊಂದು ರಸ್ತೆ ನಿರ್ಮಿಸುವಂತೆ ಕೋರಿ ಹೆಬ್ಬಗೋಡಿ ನಗರಸಭೆಯವರು ಜಿಲ್ಲಾಧಿಕಾರಿ ಅವರಿಗೆ ಪತ್ರ
ಬರೆದಿದ್ದರು. ರಸ್ತೆ ನಿರ್ಮಾಣಕ್ಕೆ 1 ಎಕರೆ 10 ಗುಂಟೆ ಜಾಗ ಬೇಕಿದೆ. 25ಅಡಿ ಅಗಲದ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆರೆ ರಕ್ಷಣೆಗೆ ನಾವೆಲ್ಲ ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ಒತ್ತುವರಿದಾರರ ಪಟ್ಟಿಯಲ್ಲಿ ನಮ್ಮನ್ನೇ ಜಿಲ್ಲಾಡಳಿತ ಸೇರಿಸಿದೆ. ನಾನು ಯಾವುದೇ ಒತ್ತುವರಿ ಮಾಡಿಲ್ಲ. ಕೆಲವರು ಅಧಿಕಾರಿಗಳು ದುರುದ್ದೇಶದಿಂದ ನನ್ನ ಹೆಸರು ಸೇರಿಸಿದ್ದಾರೆ’ ಎಂದು ಹೆಬ್ಬಗೋಡಿ ನಗರಸಭೆಯ ಉಪಾಧ್ಯಕ್ಷ ರಾಜೇಂದ್ರಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)