ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಅಭಿವೃದ್ಧಿಗಾಗಿ ಆರ್ಥಿಕ ನೆರವು: ಕೇಂದ್ರಕ್ಕೆ ಮನವಿ

ಆಂಧ್ರದಿಂದ ಕೃಷ್ಣಾ ನೀರು; ಮಧ್ಯಸ್ಥಿಕೆಗೆ ಆಗ್ರಹ
Last Updated 7 ಜುಲೈ 2021, 9:47 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಗ್ರಾಮೀಣ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿರುವ ಕೆರೆಗಳ ಹೂಳೆತ್ತುವುದಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಂಗಳವಾರ ಇಲ್ಲಿ ಕೇಂದ್ರದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಭೇಟಿ ಮಾಡಿ ಈ ಕುರಿತ ಮನವಿ ಸಲ್ಲಿಸಿದ ಅವರು, ಬರಪೀಡಿತವಾದ ಈ ಜಿಲ್ಲೆಗಳಲ್ಲಿ ಫ್ಲೋರೈಡ್‌ಯುಕ್ತ ಅಂತರ್ಜಲದ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಮಳೆ ನೀರನ್ನು ಸಂಗ್ರಹಿಸಲು ನೆರವಾಗಬೇಕು ಎಂದು ಆಗ್ರಹಿಸಿದರು.

ಈ ಜಿಲ್ಲೆಗಳ ಜನತೆಗೆ ಆಂಧ್ರದಿಂದ ಕೃಷ್ಣಾ ನದಿಯ ನೀರನ್ನು ಕುಡಿಯಲು ಪೂರೈಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಗಡಿ ಜಿಲ್ಲೆಗಳ ಜನರ ನೆರವಿಗೆ ಬರುವಂತೆ ಆಂಧ್ರಪ್ರದೇಶ ಸರ್ಕಾರದೊಂದಿಗೆ ಅಗತ್ಯವಿರುವ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವಂತೆಯೂ ಅವರು ಕೋರಿದರು.

ರಾಜ್ಯದ ನೀರಾವರಿ ಯೋಜನೆಗಳಿಗೆ ಹಣಕಾಸಿನ ನೆರವು ನೀಡಬೇಕು. ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಕೈಗೆತ್ತಿಕೊಳ್ಳಲಾದ ಎತ್ತಿನಹೊಳೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ನೀಡಬೇಕು ಎಂದು ಅವರು ಮನವಿ ಮಾಡಿದರು.

ನಂತರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್‌ ಅವರನ್ನು ಭೇಟಿ ಮಾಡಿದ ಡಾ.ಸುಧಾಕರ್‌, ರಾಜ್ಯದ ವಿವಿಧೆಡೆ ನಿಮ್ಹಾನ್ಸ್‌ ಹಾಗೂ ಕಿದ್ವಾಯಿ ಸ್ಮಾರಕ ಕ್ಯಾನ್ಸರ್‌ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಲಸಿಕೆ ವಿತರಣೆಗೆ ಮನವಿ:
ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್‌ ಅವರನ್ನು ನಂತರ ಭೇಟಿ ಮಾಡಿ ಸಾರ್ವಜನಿಕ ಆರೋಗ್ಯ ನೀತಿಯ ಕುರಿತು ಚರ್ಚಿಸಿದ ಸಚಿವರು, ರಾಜ್ಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್‌–19 ಲಸಿಕೆ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT