ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಒತ್ತುವರಿ: ಸರ್ವೆಗೆ ಮುಂದಾಗದ ತಹಶೀಲ್ದಾರ್‌ಗಳು

ಹೈಕೋರ್ಟ್‌ ನಿರ್ದೇಶನದ ಕ್ರಿಯಾಯೋಜನೆಯಂತೆ ಬಿಬಿಎಂಪಿ ವತಿಯಿಂದ 30 ಕೆರೆಗಳ ಪಟ್ಟಿ ಸಲ್ಲಿಕೆ
Published 21 ಸೆಪ್ಟೆಂಬರ್ 2023, 0:59 IST
Last Updated 21 ಸೆಪ್ಟೆಂಬರ್ 2023, 0:59 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಎಂಜಿನಿಯರ್‌ಗಳು ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ವರದಿ ಸಲ್ಲಿಸಿದ್ದು, ಈವರೆಗೂ ತಹಶೀಲ್ದಾರ್‌ಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಹೈಕೋರ್ಟ್‌ ನಿರ್ದೇಶಿಸಿರುವಂತೆ 159 ಕೆರೆಗಳಲ್ಲಿರುವ ಒತ್ತುವರಿ ತೆರವಿಗೆ ಬಿಬಿಎಂಪಿ ಕ್ರಿಯಾಯೋಜನೆ ಅನುಷ್ಠಾನಗೊಳಿಸಿದೆ. ಆ ಪ್ರಕಾರ ಸೆಪ್ಟೆಂಬರ್‌ ಮೊದಲ ವಾರದಿಂದ ವಾರಕ್ಕೆ 10 ಕೆರೆಗಳಂತೆ ಈವರೆಗೂ 30 ಕೆರೆಗಳ ಪಟ್ಟಿ ಮಾಡಿ, ಆಯಾ ತಹಶೀಲ್ದಾರ್‌ಗಳಿಗೆ ರವಾನಿಸಲಾಗಿದೆ. 

ಕ್ರಿಯಾ ಯೋಜನೆಯಂತೆ 16 ವಾರಗಳಲ್ಲಿ 159 ಕೆರೆಗಳ ಒತ್ತುವರಿ ತೆರವು ಪ್ರಕ್ರಿಯೆ ಆರಂಭವಾಗಬೇಕು. ಒಂದು ಬಾರಿ ಪ್ರಕ್ರಿಯೆ ಆರಂಭವಾದ ಮೇಲೆ 70 ದಿನಗಳಲ್ಲಿ ಪೂರ್ಣಗೊಳ್ಳಬೇಕು. ಮೊದಲ ವಾರ (ಸೆ.5 ) 10 ಕೆರೆಗಳನ್ನು ಪಟ್ಟಿ ಮಾಡಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದಾದ ಮೇಲೆ ಎರಡನೇ ಹಾಗೂ ಮೂರನೇ ವಾರದ ಕೆರೆಗಳ ಒತ್ತುವರಿಯನ್ನು ಪಟ್ಟಿ ಮಾಡಿ, ಬಿಬಿಎಂಪಿ ಕೆರೆಗಳ ವಿಭಾಗದ ಆಯಾ ಕಾರ್ಯಪಾಲಕ ಎಂಜಿನಿಯರ್‌ಗಳು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದ್ದಾರೆ.

ಮೊದಲ ವಾರದಂದು ಸಲ್ಲಿಸಿದ ಒತ್ತುವರಿ ಪಟ್ಟಿಯ ಪ್ರಕ್ರಿಯೆಯನ್ನೇ ತಹಶೀಲ್ದಾರ್‌ ಅವರು ಆರಂಭಿಸಿಲ್ಲ. ಈ ವರದಿಯಂತೆ ಒತ್ತುವರಿಯನ್ನು ಗುರುತಿಸಿ, ಸರ್ವೆ ನಡೆಸಲು ತಹಶೀಲ್ದಾರ್‌ ಅವರು ಏಳು ದಿನಗಳಲ್ಲಿ ಆದೇಶ ಹೊರಡಿಸಬೇಕಿತ್ತು. ಆದರೆ, ಈವರೆಗೆ ಎಂಟೂ ವಲಯದಲ್ಲಿರುವ ಯಾವ ಕೆರೆಗೂ ಇಂತಹ ಯಾವುದೇ ಆದೇಶ ಹೊರಬಿದ್ದಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಕೆರೆಗಳ ಒತ್ತುವರಿ ತೆರವಿಗೆ ತಹಶೀಲ್ದಾರ್‌ಗಳು ಕ್ರಮ ಕೈಗೊಳ್ಳದಿರುವ ಬಗ್ಗೆ ಜಿಲ್ಲಾಧಿಕಾರಿ ದಯಾನಂದ ಅವರು ಪ್ರತಿಕ್ರಿಯಿಸಲಿಲ್ಲ.

ವಾರದ ಪಟ್ಟಿಯಲ್ಲಿರುವ ಕೆರೆಗಳು

ಮೊದಲನೇ ವಾರ (ಸೆ.5): ವೀರಸಾಗರ ಕೆರೆ ಭಟ್ಟರಹಳ್ಳಿ ಕೆರೆ ವೆಂಗಯ್ಯನಕೆರೆ ಶ್ರೀಗಂಧದ ಕಾವಲ್‌ ಕೆರೆ ದಾಸರಹಳ್ಳಿ (ಚೊಕ್ಕಸಂದ್ರ) ಕೆರೆ ಮಂಗಮ್ಮನಪಾಳ್ಯ ಕೆರೆ ಪುಟ್ಟೇನಹಳ್ಳಿ ಕೆರೆ (ಬ್ರಿಗೇಡ್‌ ಮಿಲೇನಿಯಂ ಬಳಿ) ಬೈರಸಂದ್ರ ಕೆಳಗಿನ ಕೆರೆ ನಾಯಂಡಹಳ್ಳಿ ಕೆರೆ ಕೆಂಪಾಂಬುಧಿ ಕೆರೆ. ಎರಡನೇ ವಾರ (ಸೆ.12): ಕಟ್ಟಿಗೇನಹಳ್ಳಿ ಕೆರೆ ಅಮೃತಹಳ್ಳಿ ಕೆರೆ ರಾಮಪುರ ಕೆರೆ ಚಿಕ್ಕಬೆಳ್ಳಂದೂರು ಕೆರೆ ಹೊಸಕೆರೆಹಳ್ಳಿ ಕೆರೆ ಬೂಸೆಗೌಡನ ಕೆರೆ ಬಾಗಲಗುಂಟೆ ಕೆರೆ ದೊರೆಕೆರೆ ಕೂಡ್ಲು ಚಿಕ್ಕಕೆರೆ– ಆನೇಕಲ್‌ ಬೈರಸಂದ್ರ– ಚಿಕ್ಕಪೇಟೆ ಕೆರೆ. ಮೂರನೇ ವಾರ (ಸೆ.19): ಅಗ್ರಹಾರ ಕೆರೆ ಪಟ್ಟಂದೂರು ಅಗ್ರಹಾರ ಕೆರೆ ಪಟ್ಟಂದೂರು ಕೆರೆ ಹಲಗೆವಡೇರಹಳ್ಳಿ ಕೆರೆ ಹೇರೋಹಳ್ಳಿ ಕೆರೆ ಅಬ್ಬಿಗೆರೆ ಕೆರೆ ದೊಡ್ಡಬಿದರಕಲ್ಲು– ನಾಗಸಂದ್ರ ಕೆರೆ ಕೊಡಿಗೆ ಸಿಂಗಸಂದ್ರ ಕೆರೆ ಸ್ಯಾಂಕಿ ಕೆರೆ ಮೇಸ್ತ್ರಿಪಾಳ್ಯ ಕೆರೆ.

ಕೆರೆ ನಿರ್ವಹಣೆ

ಆ್ಯಪ್‌ನಲ್ಲಿ ಮಾಹಿತಿ ಕೆರೆಗಳಲ್ಲಿ ಯಾವ ಕಾಮಗಾರಿಗಳು ನಡೆಯುತ್ತಿವೆ ನಿರ್ವಹಣೆ ಕೆಲಸಗಳು ಯಾವುವು ಸ್ವಚ್ಛತಾ ಕಾರ್ಯಗಳನ್ನು ಯಾವ ಸಮಯದಲ್ಲಿ ಕೈಗೊಳ್ಳಲಾಯಿತು... ಮುಂತಾದ ಮಾಹಿತಿಗಳನ್ನು ನಾಗರಿಕರಿಗೆ ಒದಗಿಸುವ ಆ್ಯಪ್‌ ಅನ್ನು ಬಿಬಿಎಂಪಿ ಸಿದ್ಧಪಡಿಸುತ್ತಿದೆ. ಈ ಆ್ಯಪ್‌ ತಯಾರಿ ಹಂತದಲ್ಲಿದ್ದು ದತ್ತಾಂಶವನ್ನು ಸಂಗ್ರಹಿಸಲಾಗುತ್ತಿದೆ. ಇನ್ನೊಂದು ತಿಂಗಳಲ್ಲಿ ಅಂತಿಮವಾಗಬಹುದು. ₹10 ಲಕ್ಷ ವೆಚ್ಚದಲ್ಲಿ ಆ್ಯಪ್‌ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಬಿಬಿಎಂಪಿ ವ್ಯಾಪ್ತಿಯ 174 ಕೆರೆಗಳಲ್ಲಿ 2023–24ನೇ ಸಾಲಿನಲ್ಲಿ ನಿರ್ವಹಣೆ ಕಾಮಗಾರಿಗಳಿಗೆ ₹35 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಜೆಟ್‌ನಲ್ಲಿ ಈ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದ್ದು ಟೆಂಡರ್‌ ಪ್ರಕ್ರಿಯೆ ಇದೀಗ ಆರಂಭವಾಗಿ ನವೆಂಬರ್‌ನಲ್ಲಿ ಮುಕ್ತಾಯವಾಗಲಿದೆ. 174 ಕೆರೆಗಳಲ್ಲಿ 109 ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದ್ದು ಇದರಲ್ಲಿ 96 ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಆಹ್ವಾನಿಸಲಾಗಿದೆ. ಇದರ ಮೊತ್ತ ₹32.33 ಕೋಟಿಯಾಗಿದ್ದು ಉಳಿದ ₹2.66 ಕೋಟಿಗೆ 13 ಕಾಮಗಾರಿಗಳಿಗೆ ಟೆಂಡರ್‌ ಕರೆಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಹದೇವಪುರ ವಲಯದಲ್ಲಿ 53 ಬೊಮ್ಮನಹಳ್ಳಿ– 42 ಆರ್.ಆರ್. ನಗರ– 33 ಯಲಹಂಕ–24 ದಾಸರಹಳ್ಳಿ–11 ದಕ್ಷಿಣ– 5 ಪೂರ್ವ– 4 ಪಶ್ಚಿಮ ವಲಯದಲ್ಲಿ 2 ಕೆರೆಗಳ ವಾರ್ಷಿಕ ನಿರ್ವಹಣಾ ಕಾಮಗಾರಿಗಳು ಇದಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT