ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಸೇರಿ ಎರಡು ವರ್ಷ: ಲಕ್ಷ್ಮೀಪುರ, ಕಾನ್ಶಿರಾಂನಗರ ಅಭಿವೃದ್ಧಿ ಮರೀಚಿಕೆ

ನಿವಾಸಿಗಳಿಗೆ ತರಲಿಲ್ಲ ಹರ್ಷ * ಡಾಂಬರ್‌ ಕಾಣದ ಅಡ್ಡ ರಸ್ತೆಗಳು
Last Updated 29 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಲಕ್ಷ್ಮೀಪುರ ಮತ್ತು ಕಾನ್ಶಿರಾಂ ನಗರದ ಬಡಾವಣೆಗಳು ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾಗಿ ಎರಡು ವರ್ಷಗಳು ಕಳೆದಿದ್ದರೂ, ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ.‌

ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದ ಈ ಬಡಾವಣೆಗಳಲ್ಲಿ 4 ಸಾವಿರಕ್ಕೂ ಹೆಚ್ಚು ಮನೆಗಳಿವೆ. ಆದರೂ ಇಲ್ಲಿ ಸಮರ್ಪಕ ರಸ್ತೆಗಳಿಲ್ಲ, ಕಸ ವಿಲೇವಾರಿ ವ್ಯವಸ್ಥೆಗಳಿಲ್ಲ, ಶೌಚನೀರು ಹರಿಯುವ ಒಳಚರಂಡಿಗಳಿಲ್ಲ, ಮಳೆ ನೀರು ಹರಿಯುವ ಚರಂಡಿಗಳಂತೂ ಇಲ್ಲವೇ ಇಲ್ಲ.

ಬಿಬಿಎಂಪಿ ವ್ಯಾಪ್ತಿಗೆ 2007ರಲ್ಲಿ 7 ನಗರಸಭೆ, ಒಂದು ಪ‍ಟ್ಟಣ ಪಂಚಾಯಿತಿ ಮತ್ತು 110 ಹಳ್ಳಿಗಳು ಸೇರ್ಪಡೆಯಾದವು. ಆ ಪಟ್ಟಿಯಲ್ಲಿ ಕಾನ್ಶಿರಾಂ ನಗರವೂ ಇತ್ತು. ಆಸ್ತಿವಹಿ ಮತ್ತು ಇತರ ದಾಖಲೆಗಳು ಗ್ರಾಮ ಪಂಚಾಯಿತಿಯಿಂದ ಪಾಲಿಕೆಗೆ ಹಸ್ತಾಂತರವಾಗದ ತಾಂತ್ರಿಕ ಕಾರಣಕ್ಕೆ ಸೇರ್ಪಡೆ ವಿಳಂಬವಾಯಿತು. 2015ರ ಆಗಸ್ಟ್‌ 31ರಲ್ಲಿ ಈ ಬಡಾವಣೆಗಳು ಪಾಲಿಕೆಯ ಕುವೆಂಪುನಗರ ವಾರ್ಡ್‌ (ಈ ಹಿಂದೆ ಇದ್ದ) ವ್ಯಾಪ್ತಿಗೆ ಸೇರ್ಪಡೆಗೊಂಡವು.

ಕುವೆಂಪುನಗರ ವಾರ್ಡ್ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದ್ದರೆ, ಈ ಬಡಾವಣೆಗಳು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಆದ್ದರಿಂದ ತಾಂತ್ರಿಕ ಸಮಸ್ಯೆಗಳು ಎದುರಾಗಿ ಬಿಬಿಎಂಪಿಗೆ ಸೇರಲು ಆಗಲಿಲ್ಲ. ಮತ್ತೊಮ್ಮೆ ಸಚಿವ ಸಂಪುಟದ ಮುಂದೆ ಹೋಗಿ ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಪಟ್ಟಿಗೆ ಸೇರ್ಪಡೆಯಾಗಲು 5 ವರ್ಷ ಬೇಕಾಯಿತು. 2020ರಲ್ಲಿ ಕೊನೆಗೂ ಬಿಬಿಎಂಪಿ ವ್ಯಾಪ್ತಿಗೆ ಈ ಬಡಾವಣೆಗಳು ಸೇರ್ಪಡೆಗೊಂಡವು.

ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂಬ ಕನಸು ಕಂಡಿದ್ದ ನಿವಾಸಿಗಳಿಗೆ ಈಗ ನಿರಾಸೆಯಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಯಾವುದೇ ಬದಲಾವಣೆಗಳನ್ನೂ ನಿವಾಸಿಗಳು ಕಂಡಿಲ್ಲ. ಕಾನ್ಶಿರಾಂನಗರದ ಒಂದೆರಡು ಬೀದಿಗಳಲ್ಲಿ ಕಸ ಸಂಗ್ರಹ ಕಾರ್ಯವನ್ನು ಬಿಬಿಎಂಪಿ ಆರಂಭಿಸಿದೆ. ಉಳಿದಂತೆ ಅಭಿವೃದ್ಧಿ ಕನಸಾಗಿಯೇ ಉಳಿದಿದೆ. ಇದು ನಿವಾಸಿಗಳ ಬೇಸರಕ್ಕೆ ಕಾರಣವಾಗಿದೆ.

‘ಬಡಾವಣೆಗೆ ಅಗತ್ಯ ಇರುವ ಮೂಲಸೌಕರ್ಯಗಳ ಪಟ್ಟಿ ಸಿದ್ಧಪಡಿಸಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸಲ್ಲಿಸಿದ್ದೇವೆ. ಯಾವುದೇ ಪ್ರಯೋಜನ ಆಗಿಲ್ಲ’ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೆರೆಯಲ್ಲಿಯೇ ಶವ ಹೂಳುವ ಸ್ಥಿತಿ
ಕೆರೆಯಲ್ಲಿಯೇ ಶವ ಹೂಳುವ ಸ್ಥಿತಿ

ಚರಂಡಿ, ಒಳಚರಂಡಿ ಎರಡೂ ಇಲ್ಲ
ಈ ಎರಡು ಬಡಾವಣೆಗಳಲ್ಲಿ ಮಳೆ ನೀರು ಹರಿಯುವ ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಯೇ ಇಲ್ಲವಾಗಿದೆ.

ಗ್ರಾಮ ಪಂಚಾಯಿತಿಯಿಂದ ನಿರ್ಮಿಸಿದ್ದ ಚರಂಡಿಗಳು ಮುಚ್ಚಿಹೋಗಿದ್ದು, ಸದ್ಯ ನೀರು ಹರಿಯುವ ಚರಂಡಿಗಳೇ ಇಲ್ಲ. ಶೌಚ ನೀರು ಹರಿಯುವ ಒಳಚರಂಡಿ ಸಂಪರ್ಕವಿಲ್ಲ. ಮನೆಯ ಮುಂದೆ ನಿರ್ಮಿಸಿಕೊಂಡಿರುವ ಶೌಚಗುಂಡಿಗಳು ಭರ್ತಿಯಾದರೆ ಆ ನೀರು ರಸ್ತೆಯಲ್ಲೇ ಹರಿಯುತ್ತದೆ ಎಂದು ನಿವಾಸಿಗಳು ವಿವರಿಸುತ್ತಾರೆ. ಅಡ್ಡ ರಸ್ತೆಗಳಲ್ಲಿ ಸಂಚಾರ ದುಸ್ತರ ಬಡಾವಣೆಯಲ್ಲಿ 50ಕ್ಕೂ ಹೆಚ್ಚು ಅಡ್ಡ ರಸ್ತೆಗಳಿದ್ದು, ಒಂದೇ ಒಂದು ರಸ್ತೆಯೂ ಡಾಂಬರ್ ಕಂಡಿಲ್ಲ.

ಮಳೆಗಾಲದಲ್ಲಿ ರಸ್ತೆಗಳು
ಕೆಸರುಗದ್ದೆಯಂತಾಗುತ್ತವೆ. ಬೇಸಿಗೆಯಲ್ಲಿ ದೂಳಿನ ನಡುವೆ ಜೀವನ ನಡೆಸುವಂತಾಗಿದೆ. ಜೋರು ಮಳೆ ಬಂದರೆ ಹೊರಗೆ ಕಾಲಿಡಲು ಸಾಧ್ಯವಾಗುತ್ತಿಲ್ಲ. ಗುಂಡಿಗಳಲ್ಲಿ ಬಿದ್ದು ಎದ್ದು ಸಂಚರಿಸಬೇಕಾದ ಸ್ಥಿತಿ ಇದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.

‘ಬೀದಿ ದೀಪ, ಕಸ ನಿರ್ವಹಣೆ’
ಲಕ್ಷ್ಮೀಪುರ ಮತ್ತು ಕಾನ್ಶಿರಾಂನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾದ ಬಳಿಕ ಬೀದಿದೀಪ ಮತ್ತು ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿದೆ ಎಂದು ಪಾಲಿಕೆ ಜಂಟಿ ಆಯುಕ್ತ ಕೆ.ಎಚ್‌. ಜಗದೀಶ್ ಹೇಳಿದರು.

‘ತೆರಿಗೆ ಸಂಗ್ರಹ ಸಂಬಂಧ ಅನುಮೋದನೆ ಪಡೆಯುವ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.

‘ಸರ್ಕಾರಿ ಜಾಗಕ್ಕೆ ರಕ್ಷಣೆ ಬೇಕು’
‘ಪಾಲಿಕೆ ಸೇರಿದರೆ ಬಡಾವಣೆಗಳು ಅಭಿವೃದ್ಧಿ ಕಾಣಲಿವೆ ಎಂಬ ಕನಸು ಸಾಕಾರಗೊಳ್ಳಲೇ ಇಲ್ಲ. ಯಾವುದೇ ಅಡ್ಡ ರಸ್ತೆಯಲ್ಲೂ ಸಂಚಾರ ಮಾಡಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ತಿಳಿಸಿದರು.

‘ನಾಲ್ಕು ಸಾವಿರಕ್ಕಿಂತ ಹೆಚ್ಚು ಮನೆಗಳಿರುವ ಬಡಾವಣೆಗಳನ್ನು ಬಿಬಿಎಂಪಿ ನಿರ್ಲಕ್ಷ್ಯ ಮಾಡುತ್ತಿದೆ. ಒತ್ತುವರಿಯಾಗಿದ್ದ ಸರ್ಕಾರಿ ಭೂಮಿಗಳನ್ನು ಹೋರಾಟ ಮಾಡಿ ಬಿಡಿಸಿದ್ದೇವೆ. ಅವುಗಳನ್ನು ಸರ್ಕಾರಿ ಕಾಲೇಜು, ಸ್ಮಶಾನ, ಉದ್ಯಾನಗಳಿಗೆ ಮೀಸಲಿಡಬೇಕಿದೆ. ಸುತ್ತಲೂ ಬೇಲಿ ನಿರ್ಮಿಸದೆ ಇದ್ದರೆ ಮತ್ತೆ ಒತ್ತುವರಿಯಾಗುವ ಸಾಧ್ಯತೆ ಇದ್ದು, ರಕ್ಷಣೆ ಮಾಡುವ ಕೆಲಸವನ್ನು ಬಿಬಿಎಂಪಿ ಅಧಿಕಾರಿಗಳು ಮಾಡಬೇಕು’ ಎಂದು ಒತ್ತಾಯಿಸಿದರು.

ಈ ಬಡಾವಣೆ ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯಲ್ಲಿ ಇಲ್ಲ. ಆದರೂ, ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತ ಮಾಡಿ ಬಡವರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು.

ಲಕ್ಷ್ಮೀಪುರದ ಬಡಾವಣೆಯಲ್ಲಿ ರಸ್ತೆ ಎಂದರೆ ಹೀಗೆಯೇ...
ಲಕ್ಷ್ಮೀಪುರದ ಬಡಾವಣೆಯಲ್ಲಿ ರಸ್ತೆ ಎಂದರೆ ಹೀಗೆಯೇ...

ನಿವಾಸಿಗಳ ಬೇಡಿಕೆಗಳೇನು

* ಅಡ್ಡ ರಸ್ತೆಗಳಿಗೆ ಡಾಂಬರ್‌ ಹಾಕಬೇಕು.

* ಮಳೆ ನೀರು ಚರಂಡಿ ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಬೇಕು.

* ನೆಲದೊಳಗೆ ವಿದ್ಯುತ್‌ ಕೇಬಲ್ ಅಳವಡಿಕೆ.

* ವಲಸೆ ಕಾರ್ಮಿಕರಿಗಾಗಿ ಸಾರ್ವಜನಿಕ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಾಣ.

* ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಾಣ.

* ಕಾನ್ಶಿರಾಂನಗರದಲ್ಲಿ ಮೀಸಲಿಟ್ಟಿರುವ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು.

* ಸಿಂಗಾಪುರದಲ್ಲಿ ಕಾವೇರಿ ನೀರಿನ ವ್ಯವಸ್ಥೆ ಇದ್ದು, ಅದನ್ನು ಕಾನ್ಶಿರಾಂನಗರ ಮತ್ತು ಲಕ್ಷ್ಮೀಪುರದ ಎಲ್ಲಾ ಬಡಾವಣೆಗೆ ವಿಸ್ತರಿಸಬೇಕು.

* ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟಿರುವ ಜಾಗಗಳ ಸುತ್ತ ಬೇಲಿ ಅಥವಾ ಕಾಂಪೌಂಡ್ ನಿರ್ಮಿಸಿ ರಕ್ಷಿಸಬೇಕು.

* ಕಾನ್ಶಿರಾಂನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ತೆರೆಯಬೇಕು.

* ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT