ಮಂಗಳವಾರ, ಜನವರಿ 26, 2021
28 °C
ಕಲಾವಿದರು ಪವಾಡ ಪುರುಷರು– ಕವಿ ಸಿದ್ಧಲಿಂಗಯ್ಯ

ಕಲಾ ಸಾಧಕರಿಗೆ ಗೌರವ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬಣ್ಣ ಮತ್ತು ಗೆರೆಗಳಿಂದ ದೈವಿಕತೆಯ ಅದ್ಭುತ ಸೃಷ್ಟಿಸುವ ಕಲಾವಿದರು ಒಂದು ರೀತಿಯಲ್ಲಿ ಪವಾಡ ಪುರುಷರಿದ್ದಂತೆ’ ಎಂದು ಕವಿ ಸಿದ್ಧಲಿಂಗಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಲಲಿತಕಲಾ ಅಕಾಡೆಮಿ ನಗರದಲ್ಲಿ ಶುಕ್ರವಾರ ಆಯೋಜಿಸಿದ ಸಮಾರಂಭದಲ್ಲಿ ಕಲಾ ಸಾಧಕರಿಗೆ  2019ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ, ಮಾತನಾಡಿದರು.

‘ಬಣ್ಣ ಮತ್ತು ಗೆರೆಗಳ ಮೂಲಕ ನವ್ಯಲೋಕ ಸೃಷ್ಟಿಸಲು ಕಲಾವಿದರಿಗೆ ಮಾತ್ರ ಸಾಧ್ಯವಾಗುತ್ತದೆ. ಎಲ್ಲ ಧರ್ಮಗಳಲ್ಲಿ ಪುರಾಣ ಮತ್ತು ದಂತಕತೆಗಳಿವೆ. ಎಂದೋ ನಡೆದಿರುವ ‌ಪುರಾಣ ಕತೆಗಳಿಗೆ ಕಲಾವಿದರು ಚಿತ್ರದ ಮೂಲಕ ಜೀವ ತುಂಬಿ, ಜನರಲ್ಲಿ ಮತ್ತಷ್ಟು ಪೂಜ್ಯ ಭಾವನೆ ಹುಟ್ಟಿಸುತ್ತಾರೆ. ಇಂತಹ ಪ್ರತಿಭೆ ಹಾಗೂ ಶಕ್ತಿಯನ್ನು ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. ನಮ್ಮ ಸಮೃದ್ಧ ಪುರಾಣಗಳು ಜನರಿಗೆ ತಲುಪಲು ಕಲಾವಿದರ ಕುಂಚಸೃಷ್ಟಿಯೇ ಕಾರಣ’ ಎಂದರು.

ಹಿರಿಯ ಕಲಾವಿದ ಬಿ.ಕೆ.ಎಸ್. ವರ್ಮಾ ಮಾತನಾಡಿ, ‘ಯಾವತ್ತೂ ಕಲಾವಿದರು ಪ್ರಶಸ್ತಿಯನ್ನು ಹುಡುಕಿಕೊಂಡು ಹೋಗಬಾರದು. ನಮ್ಮ ಕೆಲಸದಿಂದ ಅದು ನಮ್ಮನ್ನು ಹುಡುಕಿಕೊಂಡು ಬರಬೇಕು. ಆ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಲಾ ಕಾಯಕದಲ್ಲಿ ಯುವ ಕಲಾವಿದರು ತಮ್ಮನ್ನು ತೊಡಗಿಸಿಕೊಳ್ಳಬೇಕು. ಎಲ್ಲ ಕ್ಷೇತ್ರಗಳಲ್ಲಿ ಇರುವಂತೆ ಕಲಾ ಕ್ಷೇತ್ರದಲ್ಲೂ ಏಳಿರಿತಗಳು ಬರುತ್ತವೆ. ಅವುಗಳನ್ನು ಮೆಟ್ಟಿನಿಂತು ಮುಂದೆ ಹೆಜ್ಜೆ ಹಾಕುವುದನ್ನು ಕಲಾವಿದರು ಕಲಿಯಬೇಕು’ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತ ಕಲಾವಿದ ಜಿ.ಎಂ. ಹೆಗಡೆ ಮಾತನಾಡಿ, ‌‘ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಕ್ಷೇತ್ರ ಬಹಳಷ್ಟು ಮುಂದುವರಿದಿದೆ. ಕಲಾವಿದರು ಒಂದೇ ರೀತಿಯ ಶೈಲಿಗೆ ಅಂಟಿಕೊಳ್ಳಬಾರದು. ಎಲ್ಲ ರೀತಿಯ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರಿದ್ದಾರೆ. ಅವರನ್ನು ಗುರುತಿಸಿ, ಮುನ್ನೆಲೆಗೆ ತರುವ ಕೆಲಸವಾಗಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು