ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು

Last Updated 15 ನವೆಂಬರ್ 2020, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಹಾರ ಕಾಣದ ಸಂಘರ್ಷ’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನ.15) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರು ಪ್ರತಿಕ್ರಿಯಿಸಿದ್ದಾರೆ. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಕಾಡನ್ನು ಕೆಡವದಿರಿ

ಪ್ರಾಣಿಗಳಿಗೆ ಆಹಾರ ಮತ್ತು ನೀರು ಅತಿ ಅಗತ್ಯ. ಅವು ಸಿಗದಿದ್ದಾಗ ತೋಟಗಳಿಗೆ ನುಗ್ಗುವುದು ಸಹಜ ಪ್ರಕ್ರಿಯೆ. ಪ್ರಾಣಿಗಳ ಸಂಪತ್ತನ್ನು ಕಸಿದುಕೊಂಡಿದ್ದೂ ಅಲ್ಲದೆ, ಅವು ನಮ್ಮ ಜಾಗಕ್ಕೆ ಬರಬಾರದು ಎನ್ನುವುದು ಸರಿಯೇ? ತೋಟಗಳಲ್ಲಿ ಮಂಗಗಳನ್ನು ಓಡಿಸಲು ರೈತರು ಪಡುವ ಸಂಕಷ್ಟವನ್ನು ನೋಡಿದಾಗ ಆಗುವ ಸಂಕಟವೇ, ಆಹಾರಕ್ಕಾಗಿ ರಸ್ತೆಗಳಲ್ಲಿ ಭಿಕ್ಷುಕರಂತೆ ನಿಲ್ಲುವ ಮಂಗಗಳನ್ನು ನೋಡಿದಾಗಲೂ ಆಗುವುದು. ನಗರಗಳ ಅಭಿವೃದ್ಧಿಗೆ ಬಳಸುವ ಹಣವನ್ನು ಕಾಡಿನ ಏಳಿಗೆಗೆ ಭರಿಸಬೇಕು. ಮಾನವ ಪರಿಸರದ ಭಾಗವಾಗಬೇಕು. ಇಲ್ಲದಿದ್ದರೆ ಸರ್ವನಾಶ ಖಂಡಿತ.

ಶಿಶುಪಾಲ, ದಾವಣಗೆರೆ

ರಕ್ಷಣೆಗೆ ಮುಂದಾಗಿ

ವನ್ಯಜೀವಿಗಳ ರಕ್ಷಣೆ ಕೇವಲ ಸರ್ಕಾರ ಮಾಡಿದರೆ ಸಾಲದು. ಸಾರ್ವಜನಿಕರೂ ಪೂರಕವಾಗಿ ಈ ಕಾರ್ಯದಲ್ಲಿ ಕೈಜೋಡಿಸಬೇಕು. ಕಾಡಿಗೆ ಹೊಂದಿಕೊಂಡಿರುವ ರೈಲು ಸಂಪರ್ಕಗಳ ಬಳಿ ಪ್ರಾಣಿಗಳಿಗೆ ಹೆಚ್ಚಿನ ಅನಾಹುತಗಳು ನಡೆಯುತ್ತಿವೆ. ಇಂತಹ ಸ್ಥಳಗಳನ್ನು ಗುರುತಿಸಬೇಕು. ರೈಲು ಕಂಬಿ ಹಾಗೂ ರಸ್ತೆ ತಿರುವುಗಳನ್ನು ಸರಿಪಡಿಸಬೇಕು. ಇದರಿಂದ ಮನುಷ್ಯ ಪ್ರಾಣಿಗೆ ಬಲಿಯಾಗುವುದು, ಪ್ರಾಣಿ ಮನುಷ್ಯನಿಗೆ ಬಲಿಯಾಗುವ ಸಂಘರ್ಷಗಳು ತಪ್ಪಲಿವೆ.

ಷಣ್ಮುಖ, ಧಾರವಾಡ

ನಮ್ಮಿಂದ ಪ್ರಾಣಿಗಳಿಗೆ ಹಾನಿ

ಮನುಷ್ಯನ ದುರಾಸೆ ಹಾಗೂ ತನ್ನ ಸ್ವಾರ್ಥ ಸಾಮ್ರಾಜ್ಯ ವಿಸ್ತರಣೆಗೆ ಅರಣ್ಯ ಮತ್ತು ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಆಕ್ರಮಿಸಿಕೊಂಡು, ಸಂಘರ್ಷಕ್ಕೆ ಕಾರಣಕರ್ತನಾಗಿದ್ದಾನೆ. ವನ್ಯಜೀವಿಗಳಿಂದ ಮನುಷ್ಯ
ಮೃತಪಟ್ಟಿರುವುದಕ್ಕಿಂತ, ಮನುಷ್ಯನಿಂದ ವನ್ಯಜೀವಿಗಳು ಅಳಿವಿನಂಚಿನತ್ತ ಸಾಗುತ್ತಿರುವುದೇ ಹೆಚ್ಚು. ಈ ಸಂಘರ್ಷ ತಪ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದ್ದು, ಕಠಿಣ ಕಾನೂನುಗಳನ್ನು ಜಾರಿ ತರಬೇಕಿದೆ.

ವೆಂಕಟೇಶ್ ಬಾಬು, ತುಮಕೂರು

ಸಮತೋಲನವಿರಲಿ

ಮಾನವ-ಪ್ರಾಣಿ ಸಂಘರ್ಷ ಕುರಿತು ಅಂಕಿಅಂಶಗಳೊಂದಿಗೆ ಪ್ರಕಟವಾಗಿರುವ ವಿಸ್ತೃತ ವರದಿ ಸೊಗಸಾಗಿದೆ. ಮನುಷ್ಯನ ಆಸೆ ದುರಾಸೆಯಾಗಿರುವುದು ಮತ್ತು ಆಳುವ ಸರ್ಕಾರಗಳ ಬೇಜವಾಬ್ದಾರಿತನದಿಂದ ಈ ದುರಂತ ಉಲ್ಬಣಿಸಿದೆ. ದೇಶದ ಪ್ರಜೆಗಳಿಗೆ ಕಾನೂನಾತ್ಮಕ ಹಾಗೂ ಸಂವಿಧಾನಾತ್ಮಕವಾಗಿ ಬದುಕಲು ಇರುವ
ಸಮಾನ ಅವಕಾಶ ಪ್ರಾಣಿಗಳಿಗೂ ಇವೆ. ಈ ದೃಷ್ಟಿಯಲ್ಲಿ ಇಬ್ಬರಿಗೂ ಸಮತೋಲಿತವಾದ ಏಳಿಗೆಗೆ ಅವಕಾಶ ನೀಡಬೇಕು.

ಹರೀಶ್, ರಾಮನಗರ

ಸ್ವಾತಂತ್ರ್ಯ ಕಸಿದಿದ್ದೇವೆ

ಈ ಹಿಂದೆ ಪ್ರಾಣಿಗಳ ಸಂಖ್ಯೆ ಹೆಚ್ಚಾದಾಗ ಆಹಾರ ಅರಸಿ ನಾಡಿನತ್ತ ಮುಖ ಮಾಡುತ್ತಿದ್ದವು. ಆದರೆ, ಈಗ ಕಾಡಿನ ಅಂಚಿನಿಂದ ಆರಂಭವಾದ ಭೂಕಬಳಿಕೆ ಕಾಡಿನ ಮಧ್ಯಕ್ಕೆ ಬಂದು ನಿಂತಿದೆ. ಬಲಾಢ್ಯರು, ರಾಜಕಾರಣಿಗಳ ಶಾಮೀಲು, ಅಧಿಕಾರಿಗಳ ಭ್ರಷ್ಟಾಚಾರದಿಂದ ಪ್ರಾಣಿಗಳ ಆಹಾರಕ್ಕೆ ಕುತ್ತು ಬಂದಿದೆ. ಲಾಕ್‍ಡೌನ್ ಸಂದರ್ಭದಲ್ಲಿ ವನ್ಯಜೀವಿಗಳು ಸ್ವತಂತ್ರವಾಗಿ ನಗರಗಳಲ್ಲೂ ವಿಹರಿಸಿದ್ದನ್ನು ಕಂಡೆವು. ಆದರೆ, ದುರಾಸೆ ಹೊತ್ತ ಮಾನವ ಕಾಡಿಗೆ ಕನ್ನ ಹಾಕುತ್ತಿದ್ದಾನೆ.

ಮಂಜುನಾಥ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT