ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳಿಯದ ಸಾವು ಪ್ರಕರಣ: ಕೊನೆ ಹಂತದಲ್ಲಿ ಆಸ್ಪತ್ರೆಗೆ ಸೇರುವುದೇ ಕಾರಣ ಎಂದ ಬಿಬಿಎಂಪಿ

ಕಡಿಮೆಯಾಗುತ್ತಿಲ್ಲ ಕೋವಿಡ್‌ ಸಾವಿನ ಪ್ರಮಾಣ
Last Updated 1 ನವೆಂಬರ್ 2020, 19:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಗಾದವರಲ್ಲಿ ಸೋಂಕು ಪತ್ತೆಯಾಗುವ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತಿದ್ದರೂ, ಈ ರೋಗದಿಂದ ಸಾಯುತ್ತಿರುವವರ ಪ್ರಮಾಣ ಕಡಿಮಾಗುತ್ತಿಲ್ಲ. ಇದು ಪಾಲಿಕೆಗೆ ತಲೆನೋವು ತಂದಿದೆ. ಸೋಂಕಿತರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಬಿಬಿಎಂಪಿ ಹೇಳಿದೆ.

‘ಕೋವಿಡ್‌ ಲಕ್ಷಣ ಕಾಣಿಸಿಕೊಂಡವರು ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ದೇಹಸ್ಥಿತಿ ಗಂಭೀರ ಹಂತ ತಲುಪಿದ ಬಳಿಕ ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕೋವಿಡ್‌ ಸಾವಿನ ಕುರಿತ ನಡೆಸಿದ ಅಧ್ಯಯನದ ಪ್ರಕಾರ ಹೆಚ್ಚಿನವರು ಆಸ್ಪತ್ರೆಗೆ ದಾಖಲಾದ 24ರಿಂದ 48 ಗಂಟೆಗಳಲ್ಲೇ ಕೊನೆಯುಸಿರೆಳೆದಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ನಗರದಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟವರಲ್ಲಿ ಸೋಂಕು ಪತ್ತೆಯಾಗುತ್ತಿರುವ ಸರಾಸರಿ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆ ಇದೆ. ಶನಿವಾರ 47 ಸಾವಿರ ಮಂದಿಯ ಪರೀಕ್ಷೆ ನಡೆಸಲಾಗಿದ್ದು ಕೇವಲ 1,610 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆದರೆ ಕೋವಿಡ್‌ನಿಂದ ಸಾಯುವವರ ಪ್ರಮಾಣ ಶೇ 1.15ರಷ್ಟಿದೆ. ನಿತ್ಯ ಸರಾಸರಿ 5 ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದ್ದಾಗಲೂ ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದಲ್ಲಿ ಜನ ಸಾವಿಗೀಡಾಗುತ್ತಿದ್ದರು’ ಎಂದು ಅವರು ವಿವರಿಸಿದರು.

‘ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಸಾವಿನ ಪ್ರಮಾಣವನ್ನು ಕಡಿಮೆಗೊಳಿಸಬಹುದು. ಸದ್ಯಕ್ಕಂತೂ ಕೋವಿಡ್‌ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಇಲ್ಲ. ಯಾರೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು’ ಎಂದು ಅವರು ಮನವಿ ಮಾಡಿದರು.

ಮಾಜಿ ಮೇಯರ್‌ ಒಬ್ಬರಿಗೆ ಮೂರನೇ ಬಾರಿ ಕೋವಿಡ್‌ ಕಾಣಿಸಿಕೊಂಡಿದೆ ಎನ್ನಲಾದ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಿದ್ದೇವೆ. ಕೋವಿಡ್‌ ಕುರಿತ ತಾಂತ್ರಿಕ ಸಲಹಾ ಸಮಿತಿಗೆ ಈ ಬಗ್ಗೆ ವರದಿ ಸಲ್ಲಿಸಲಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT