ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆವಲಪರ್‌ಗಳಿಗೆ ಸಂತಸ: ಗ್ರಾಹಕರಿಗೆ ಆತಂಕ !

ಬಡಾವಣೆ ಮೂಲಸೌಕರ್ಯ ಅಭಿವೃದ್ಧಿಗೆ ಮುನ್ನವೇ ನಿವೇಶನ ಮಾರಾಟಕ್ಕೆ ಅವಕಾಶ
Last Updated 23 ಮೇ 2020, 19:01 IST
ಅಕ್ಷರ ಗಾತ್ರ

ಬೆಂಗಳೂರು: ಯಾವುದೇ ಬಡಾವಣೆ ಸಂಪೂರ್ಣವಾಗಿ ಮೂಲಸೌಕರ್ಯ ಕಲ್ಪಿಸದೇ ಇದ್ದರೂ ಎಲ್ಲ ನಿವೇಶನಗಳನ್ನು ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿರುವುದು ಡೆವಲಪರ್‌ಗಳಿಗೆ ಸಂತಸ ತಂದಿದ್ದರೆ, ನಿವೇಶನ ಖರೀದಿ ನಂತರವೂ ಮೂಲಸೌಲಭ್ಯ ಕಲ್ಪಿಸದಿದ್ದರೆ ಹೇಗೆ ಎಂಬ ಪ್ರಶ್ನೆ ಗ್ರಾಹಕರನ್ನು ಕಾಡುತ್ತಿದೆ.

‘ಲೇಔಟ್‌ಗಳಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಿದ ನಂತರವೇ ಎಲ್ಲ ನಿವೇಶನ ಮಾರಾಟಕ್ಕೆ ಅವಕಾಶವಿದ್ದಾಗಲೇ, ಎಷ್ಟೋ ಡೆವಲಪರ್‌ಗಳು ಯಾವ ಸೌಲಭ್ಯಗಳನ್ನೂ ಕಲ್ಪಿಸುತ್ತಿರಲಿಲ್ಲ. ಆದರೆ ಈಗ ಕೊರೋನಾ ಸೋಂಕು ನಿಯಂತ್ರಣದ ಲಾಕ್ಡೌನ್‌ ಸಂದರ್ಭದಲ್ಲಿ ನೀಡಿರುವ ಈ ಅವಕಾಶವನ್ನೇ ನೆಪವಾಗಿಟ್ಟುಕೊಂಡು ಯಾವುದೇ ಮೂಲಸೌಲಭ್ಯ ಕಲ್ಪಿಸದಿರುವ ಸಾಧ್ಯತೆಯಿದೆ’ ಎಂದು ಗ್ರಾಹಕ ಶಂಕರ್‌ ಅನುಮಾನ ವ್ಯಕ್ತಪಡಿಸುತ್ತಾರೆ.

‘ಬಡಾವಣೆ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವಂತೆ ತೋರಿಸುವ ಚಿತ್ರಗಳನ್ನು ಹಾಕಿ ಜಾಹೀರಾತು ನೀಡಿರುತ್ತಾರೆ. ಸ್ಥಳಕ್ಕೆ ಹೋಗಿ ನೋಡಿದರೆ ಯಾವುದೇ ಅಭಿವೃದ್ಧಿ ಮಾಡಿರುವುದಿಲ್ಲ. ಈಗ, ಮೂಲಸೌಕರ್ಯ ಅಭಿವೃದ್ಧಿಗಾಗಿ ಗ್ರಾಹಕರೇ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬರಬಹುದು’ ಎಂದು ಅವರು ಹೇಳುತ್ತಾರೆ.

ಹಣದ ಹರಿವು ಹೆಚ್ಚಳ:‘ಅಭಿವೃದ್ಧಿ ಹಂತದಲ್ಲಿರುವಾಗಲೇ ಎಲ್ಲ ನಿವೇಶನಗಳ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿರುವುದರಿಂದ ಡೆವಲಪರ್‌ಗಳಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಮೊದಲು, ಗ್ರಾಹಕರು ಶೇ 90ರಷ್ಟು ಹಣ ಪಾವತಿಸಿದ್ದರೂ, ಅವರಿಗೆ ಮಾರಾಟ ಮಾಡುವ ಅವಕಾಶ ನಮಗಿರಲಿಲ್ಲ. ಈಗ ನಿವೇಶನ ಮಾರಾಟದಿಂದ ಹಣದ ಹರಿವು ಹೆಚ್ಚಾಗುವುದರಿಂದ ಮೂಲಸೌಕರ್ಯ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಕ್ರೆಡೈನ ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್‌ ರಾಯ್ಕರ್‌ ಹೇಳಿದರು.

‘ಯಾವುದೇ ಲೇಔಟ್‌ನಲ್ಲಿ ರಸ್ತೆ, ವಿದ್ಯುತ್‌, ನೀರಿನ ಸಂಪರ್ಕ, ಒಳಚರಂಡಿ ವ್ಯವಸ್ಥೆ ಕಲ್ಪಿಸಿದ ನಂತರವೇ ಬಿಡಿಎ, ಬಿಎಂಆರ್‌ಡಿಎ,ಬಿಬಿಎಂಪಿ ಅಥವಾ ಇತರೆ ಯಾವುದೇ ಸ್ಥಳೀಯ ನಿಯಂತ್ರಣ ಪ್ರಾಧಿಕಾರ ಪ್ರಮಾಣ ಪತ್ರ (ಸಿಸಿ) ನೀಡುತ್ತದೆ. ಒಂದು ಲೇಔಟ್‌ ನಂತರ ಮತ್ತೊಂದು ಲೇಔಟ್‌ ಅಭಿವೃದ್ಧಿ ಕಾರ್ಯವನ್ನು ಡೆವಲಪರ್‌ಗಳು ಕೈಗೆತ್ತಿಕೊಳ್ಳಬೇಕಾಗಿರುವುದರಿಂದ ಯಾವುದೇ ಮೂಲಸೌಲಭ್ಯ ಕಲ್ಪಿಸದೆ ಗ್ರಾಹಕರಿಗೆ ವಂಚಿಸಲು ಸಾಧ್ಯವಿಲ್ಲ. ಹೀಗೆ ಮಾಡಿದರೆ ಕಾನೂನು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂಬ ಎಚ್ಚರಿಕೆ ಎಲ್ಲರಲ್ಲಿದೆ’ ಎಂದು ಅವರು ಹೇಳಿದರು.

ಈಗ ರೇರಾ ಇದೆ:‘ಲೇಔಟ್‌ನಲ್ಲಿ ಸಂಪೂರ್ಣ ಮೂಲಸೌಕರ್ಯ ಅಭಿವೃದ್ಧಿ ಮಾಡಿದ ನಂತರವೇ ನಿವೇಶನ ಮಾರಾಟ ಮಾಡಬೇಕು ಎಂಬ ಅಧಿಸೂಚನೆ ಹೊರಡಿಸಿದ್ದು 2016ರಲ್ಲಿ. ಅದಕ್ಕಿಂತ ಮೊದಲು, ಡೆವಲಪರ್‌ಗಳು ಯಾವುದೇ ಸೌಕರ್ಯ ಕಲ್ಪಿಸದೆ ಗ್ರಾಹಕರಿಗೆ ಮಾರಾಟ ಮಾಡಿ ಓಡಿಹೋಗುತ್ತಿದ್ದರು. ಆದರೆ, 2017ರಲ್ಲಿ ರಿಯಲ್‌ ಎಸ್ಟೇಟ್‌ ನಿಯಂತ್ರಣ ಕಾಯ್ದೆ (ರೇರಾ) ರೂಪಿಸಿದ ಮೇಲೆ ಇದಕ್ಕೆ ಕಡಿವಾಣ ಬಿತ್ತು. ಈಗ ಯಾವುದೇ ಡೆವಲಪರ್‌ಗಳು ಗ್ರಾಹಕರಿಗೆ ಮೋಸ ಮಾಡಿದರೆ, ದಂಡ ಮತ್ತು ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ’ ಎಂದು ರೇರಾ ಕಾರ್ಯದರ್ಶಿ ಕೆ.ಎಸ್. ಲತಾಕುಮಾರಿ ಹೇಳುತ್ತಾರೆ.

‘ಯಾರೇ ಲೇಔಟ್‌ ಅಭಿವೃದ್ಧಿ ಮಾಡಲು ಮತ್ತು ಈ ಕುರಿತು ಜಾಹೀರಾತು ನೀಡುವ ಮುನ್ನ ರೇರಾ ಅಡಿ ನೋಂದಣಿ ಮಾಡಿಸಿಕೊಳ್ಳಲೇಬೇಕು. ಹೀಗೆ ನೋಂದಣಿ ಮಾಡಿಸುವ ಎಲ್ಲ ಡೆವಲಪರ್‌ಗಳಿಂದ ನಾವು ದಾಖಲೆಗಳನ್ನು ಸಂಗ್ರಹಿಸಿರುತ್ತೇವೆ. ಯಾವುದೇ ಡೆವಲಪರ್‌ ಮೂಲಸೌಕರ್ಯ ಕಲ್ಪಿಸಿರದಿದ್ದರೆ ಅಥವಾ ಇನ್ನಾವುದೇ ರೀತಿ ವಂಚನೆ ಮಾಡಿದ್ದರೆ ಗ್ರಾಹಕರು ರೇರಾಗೆ ದೂರು ನೀಡಬಹುದು. ಅಂಥವರ ವಿವರವನ್ನು ವೆಬ್‌ಸೈಟ್‌ನಲ್ಲಿ ಹಾಕಿ, ಇವರಿಂದ ಯಾರೂ ನಿವೇಶನ ಅಥವಾ ಆಸ್ತಿ ಖರೀದಿಸಬಾರದು ಎಂದು ಮಾಹಿತಿ ನೀಡಲಾಗುತ್ತದೆ’ ಎಂದು ಅವರು ಹೇಳಿದರು.

‘ವಸತಿ ಇಲಾಖೆಗೆ ಪತ್ರ ಬರೆಯಲಾಗುವುದು’

‘ಯಾವುದೇ ನಿವೇಶನ ಮಾರಾಟಕ್ಕೂ ಮುನ್ನ, ರೇರಾದಲ್ಲಿ ನೋಂದಣಿ ಮಾಡಿಸಲಾಗಿದೆಯೇ ಎಂಬ ಬಗ್ಗೆ ಬಿಡಿಎ, ಬಿಬಿಎಂಪಿ ಅಥವಾ ಯಾವುದೇ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರಗಳು ಡೆವಲಪರ್‌ಗಳನ್ನು ಪ್ರಶ್ನಿಸಬೇಕು ಮತ್ತು ಈ ಸಂಬಂಧ ದಾಖಲೆಗಳನ್ನು ಕೇಳಬೇಕು ಎಂಬ ನಿಯಮವನ್ನು ಅಳವಡಿಸುವಂತೆ ವಸತಿ ಇಲಾಖೆಗೆ ಪತ್ರ ಬರೆಯಲಾಗುವುದು’ ಎಂದು ರೇರಾ ಕಾರ್ಯದರ್ಶಿ ಲತಾಕುಮಾರಿ ಹೇಳಿದರು.

‘ಸ್ಥಳೀಯ ನಿಯಂತ್ರಣ ಪ್ರಾಧಿಕಾರಗಳು ಈ ರೀತಿ ಕೇಳಿದಾಗ ಡೆವಲಪರ್‌ಗಳು ರೇರಾ ಅಡಿ ನೋಂದಣಿ ಮಾಡಿಸಿಕೊಳ್ಳಲೇಬೇಕಾಗುತ್ತದೆ. ಅಲ್ಲದೆ, ಗ್ರಾಹಕರು ಕೂಡ ರೇರಾ ಅಡಿ ನೋಂದಣಿ ಮಾಡಿಸಿಕೊಂಡಿದ್ದೀರಾ ಎಂದು ಡೆವಲಪರ್‌ಗಳನ್ನು ಪ್ರಶ್ನಿಸಬೇಕು. ಆಗ, ಡೆವಲಪರ್‌ಗಳು ನೋಂದಣಿ ಮಾಡಿಸಿಕೊಳ್ಳುತ್ತಾರೆ. ವಂಚನೆಗಳಾಗುವುದು ತಪ್ಪುತ್ತದೆ’ ಎಂದು ಅವರು ಸಲಹೆ ನೀಡಿದರು.

ಗ್ರಾಹಕರು ಏನು ಮಾಡಬೇಕು

* ನಿವೇಶನ ಖರೀದಿಗೂ ಮುನ್ನ‌ ರೇರಾ ಅಡಿ ನೋಂದಣಿ ಮಾಡಿಸಲಾಗಿದೆಯೇ ಎಂದು ಡೆವಲಪರ್‌ಗಳನ್ನು ಕೇಳಬೇಕು

* ರೇರಾ ವೆಬ್‌ಸೈಟ್‌ನಲ್ಲಿ ಆ ಆಸ್ತಿ ಅಥವಾ ನಿವೇಶನ ಸಂಖ್ಯೆಯನ್ನು ನಮೂದಿಸಿ ಪರೀಕ್ಷಿಸಬೇಕು

* ಡೆವಲಪರ್‌ ಕುರಿತು ನಕಾರಾತ್ಮಕ ಮಾಹಿತಿ ಇದೆಯೇ ನೋಡಿಕೊಳ್ಳಬೇಕು

* ನೋಂದಣಿ ನಂತರ ಮೂಲಸೌಕರ್ಯ ಅಭಿವೃದ್ಧಿ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು

ಅನುಕೂಲಗಳೇನು ?

* ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿದ್ದ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹಣದ ಹರಿವು ಹೆಚ್ಚಾಗುತ್ತದೆ

* ಬ್ಯಾಂಕುಗಳು ಸಾಲ ನೀಡದಿದ್ದರೂ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಡೆವಲಪರ್‌ಗಳಿಗೆ ಸಾಧ್ಯವಾಗುತ್ತದೆ

* ಕಂತುಗಳಲ್ಲಿ ಕಟ್ಟಿದವರು ಈಗ ಪೂರ್ತಿ ಹಣ ನೀಡಿ ನಿವೇಶನ ನೋಂದಣಿ ಮಾಡಿಸಿಕೊಳ್ಳಬಹುದು

* ನಿವೇಶನ ನೋಂದಣಿಯಾಗುವುದರಿಂದ ಆಸ್ತಿ ಕೈಗೆ ಸಿಕ್ಕ ಭದ್ರತಾ ಭಾವ ಗ್ರಾಹಕರದ್ದಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT