ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಅಕ್ರಮ ಮನೆ, ನಿವೇಶನಗಳ ಸಕ್ರಮಕ್ಕೆ ಶಿಫಾರಸು

ಕಾನೂನು ತಿದ್ದುಪಡಿ ತರುವಂತೆ ಸಚಿವ ಸಂಪುಟ ಉಪ ಸಮಿತಿ ಸಲಹೆ
Last Updated 14 ಏಪ್ರಿಲ್ 2020, 20:27 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಮತ್ತು ಒತ್ತುವರಿ ಮಾಡಿಕೊಂಡಿರುವ ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧ ಸರ್ಕಾರಕ್ಕೆ ಶಿಫಾರಸು ಮಾಡಲು ಈ ಕುರಿತು ನೇಮಿಸಿದ್ದ ಸಚಿವ ಸಂಪುಟ ಉಪ ಸಮಿತಿ ತೀರ್ಮಾನಿಸಿದೆ.

ಇದಕ್ಕೆ ಪೂರಕವಾಗಿ 1976ರ ಬಿಡಿಎ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ಭಾಗವಹಿಸಿದ್ದರು. ನಗರಾಭಿವೃದ್ಧಿ ಇಲಾಖೆ ಮತ್ತು ಬಿಡಿಎ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಮಾಹಿತಿ ನೀಡಿದರು.

ಬಿಡಿಎ ಸ್ವಾಧೀನಪಡಿಸಿಕೊಂಡಿರುವ ಜಾಗಗಳನ್ನು ಭೂ ಮಾಲೀಕರು ಪರಿಹಾರದ ಮೊತ್ತ ಪಡೆದ ನಂತರವೂ ಬೇರೊಬ್ಬರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದರು. ಅಂತಹ ಜಾಗಗಳಲ್ಲಿ ಈಗ ಮನೆಗಳನ್ನು ನಿರ್ಮಿಸಿದ್ದು, ಅವುಗಳನ್ನು ಸಕ್ರಮಗೊಳಿಸುವ ಬಗ್ಗೆ ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇತ್ತು.

ಈ ರೀತಿಯ ಸುಮಾರು 5 ಸಾವಿರ ಎಕರೆ ಪ್ರದೇಶದಲ್ಲಿ 75 ಸಾವಿರ ನಿವೇಶನಗಳಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು, ಇಷ್ಟೂ ಮನೆಗಳನ್ನು ಸಕ್ರಮಗೊಳಿಸುವ ಉದ್ದೇಶ ಇದೆ. ಇದಕ್ಕೆ ಒಂದು ಬಾರಿಗೆ ಅನ್ವಯವಾಗುವ ಹಾಗೆ ಮಾರ್ಗಸೂಚಿ ದರದ ಆಧಾರದ ಮೇಲೆ ಇಂತಿಷ್ಟು ದಂಡನಾ ಶುಲ್ಕ ಪಡೆದು ಸಕ್ರಮ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

12 ವರ್ಷಗಳ ಹಿಂದೆ ಪಡೆದ ನಿವೇಶನದಾರರಿಗೆ ಅನ್ವಯವಾಗುವ ಹಾಗೆ ಸಕ್ರಮ ಮಾಡಬೇಕು ಎಂದು ಕಾನೂನು ಇಲಾಖೆ ಸಲಹೆ ನೀಡಿದೆ. ಈ ರೀತಿಯ ಗಡುವು ವಿಧಿಸುವ ಬದಲು ಇತ್ತೀಚಿನವರೆಗೆ ಯಾರು ಯಾರು ಮನೆ ನಿರ್ಮಿಸಿಕೊಂಡಿದ್ದಾರೊ, ಅಂತಹವರ ಮನೆಗಳನ್ನೂ ಸಕ್ರಮ ಮಾಡುವುದು ಸೂಕ್ತ ಎನ್ನುವ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ತಿಳಿದುಬಂದಿದೆ.

ಬಿಡಿಎ ಸ್ವಾಧೀನದಲ್ಲಿರುವ ಜಾಗ ಹಾಗೂ ಒತ್ತುವರಿಯಾಗಿರುವ ಜಾಗದ ಬಗ್ಗೆ ವಿವರ ಕಲೆಹಾಕಲಾಗಿದೆ (ಲ್ಯಾಂಡ್‌ ಆಡಿಟ್‌). ಈ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು. ಇದುವರೆಗೂ ಬಿಡಿಎ 64 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT