ದಾಬಸ್ ಪೇಟೆ: ಸೋಂಪುರ ಹೋಬಳಿಯ ಕೆರೆಕತ್ತಿಗನೂರು ಗ್ರಾಮದ ಮಾರುತಿನಗರ, ಇಂದಿರಾನಗರ ಭಾಗದಲ್ಲಿ ಮಂಗಳವಾರ (ಅ.31) ರಾತ್ರಿ 9 ಗಂಟೆ ಸುಮಾರಿಗೆ ಚಿರತೆ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಗ್ರಾಮದಲ್ಲಿರುವ ಖಾಸಗಿ ಗೋದಾಮಿನ ಕಾಂಪೌಂಡ್ ಮೇಲೆ ಚಿರತೆ ಕುಳಿತಿರುವ ದೃಶ್ಯ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಿರತೆ ಓಡಾಟದ ಸುದ್ದಿ ತಿಳಿಯುತ್ತಿದ್ದಂತೆ ಕುಲುವನಹಳ್ಳಿ ಪಂಚಾಯತಿ ವತಿಯಿಂದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿ, ’ಚಿರತೆ ಕಂಡರೆ ಅರಣ್ಯಾಧಿಕಾರಿಗಳಿಗೆ ತಿಳಿಸಬೇಕು. ರಾತ್ರಿ ವೇಳೆ ಬ್ಯಾಟರಿ, ಕೋಲು, ಹಿಡಿದು ಎಚ್ಚರಿಕೆಯಿಂದ ಸಂಚರಿಸಬೇಕು’ ಎಂದು ಜಾಗೃತಿ ಮೂಡಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿ 48 ರಿಂದ ಶಿವಗಂಗೆ ಹಾದು ಹೋಗುವ ರಸ್ತೆಯಲ್ಲಿ, ತಡ ರಾತ್ರಿ ಸಂಚರಿಸುವವರು ಎಚ್ಚರವಹಿಸಬೇಕು. ಗೆದ್ದಲಹಳ್ಳಿ, ಆಲದಹಳ್ಳಿ, ಕೆರೆಕತ್ತಿಗನೂರು, ಹನುಮಂತಪುರ, ಇಂದಿರಾನಗರ, ಮಹಿಮಾಪುರ ಗ್ರಾಮದ ಜನತೆ ಎಚ್ಚರಿಕೆಯಿಂದ ಇರಬೇಕು. ಅದಷ್ಟೂ ಬೇಗ ಬೋನ್ ಇಡುತ್ತೇವೆ ಎಂದು ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಕಣವಿ ತಿಳಿಸಿದ್ದಾರೆ.
ಆಲದಹಳ್ಳಿ-ಮಹಿಮರಂಗ ಬೆಟ್ಟ, ರಾಕ್ಷಸಿ ಬಂಡೆ, ಬೆಟ್ಟದ ತಪ್ಪಲಿನ ವ್ಯಾಪ್ತಿಯಲ್ಲಿರುವ ಅರಣ್ಯ ಪ್ರದೇಶ ಚಿರತೆ ಆವಾಸಸ್ಥಾನವಾಗಿದ್ದು, ಎರಡು-ಮೂರು ಮರಿಗಳೊಂದಿಗೆ ತಾಯಿ ಚಿರತೆ ಸಂಚರಿಸುತ್ತಿದೆ ಎಂದು ಸ್ಥಳೀಯರಾದ ನಟರಾಜು ತಿಳಿಸಿದ್ದಾರೆ.
’ಚಿರತೆ ಹಿಡಿಯಲು ಬೋನ್ ಇಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದೇವೆ. ಚಿರತೆ ಓಡಾಟದ ಕುರಿತು ಧ್ವನಿ ವರ್ಧಕದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ್ದೇವೆ’ ಎಂದು ಕುಲುವನಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮೋಹನ್ ಕುಮಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.