ಬೆಂಗಳೂರು: ಸಾಹಿತಿ ಹಾಗೂ ಹೋರಾಟಗಾರರಿಗೆ ಜೀವ ಬೆದರಿಕೆ ಪತ್ರಗಳು ಬಂದಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಎಸಿಪಿ ನೇತೃತ್ವದ ತಂಡ, ಹಲವು ಪುರಾವೆ ಸಂಗ್ರಹಿಸಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ.
ಸಾಹಿತಿಗಳಾದ ಕುಂ. ವೀರಭದ್ರಪ್ಪ, ಬಿ.ಎಲ್. ವೇಣು, ಬಂಜಗೆರೆ ಜಯಪ್ರಕಾಶ್, ಬಿ.ಟಿ. ಲಲಿತಾ ನಾಯಕ್, ವಸುಂಧರಾ ಭೂಪತಿ ಸೇರಿದಂತೆ ಹಲವರಿಗೆ ಬೆದರಿಕೆ ಪತ್ರಗಳು ಬಂದಿದ್ದವು. ಈ ಬಗ್ಗೆ ದಾಖಲಾಗಿದ್ದ ಪ್ರಕರಣಗಳ ತನಿಖೆಯನ್ನು ಸಿಸಿಬಿಗೆ ವಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್ ಇತ್ತೀಚೆಗೆ ಆದೇಶ ಹೊರಡಿಸಿದ್ದರು.
ದಾವಣಗೆರೆಯಲ್ಲಿ ಶೋಧ: ಕೊಟ್ಟೂರು, ಚಿತ್ರದುರ್ಗ, ಹಾರೋಹಳ್ಳಿ, ಬೆಂಗಳೂರಿನ ಸಂಜಯನಗರ ಹಾಗೂ ಬಸವೇಶ್ವರನಗರ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಕಡತಗಳನ್ನು ಸಿಸಿಬಿ ಪೊಲೀಸರು ಈಗಾಗಲೇ ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ.
‘ಬೆದರಿಕೆ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ. ದಾವಣಗೆರೆಯಲ್ಲಿರುವ ಆರೋಪಿಯೊಬ್ಬ, ಬೆದರಿಕೆ ಪತ್ರ ಕಳುಹಿಸಿರುವ ಮಾಹಿತಿ ಇದೆ. ಹೀಗಾಗಿ, ದಾವಣಗೆರೆಯಲ್ಲಿ ಶೋಧ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.
‘ದಾವಣಗೆರೆಯ ಅಕ್ಕ–ಪಕ್ಕದಲ್ಲಿರುವ ರಾಣೆಬೆನ್ನೂರು, ಹರಿಹರ ಹಾಗೂ ಇತರೆ ನಗರಗಳ ಅಂಚೆ ಕಚೇರಿಗಳ ಮೂಲಕ ಪತ್ರಗಳು ಬಂದಿವೆ. ದಾವಣಗೆರೆಯಲ್ಲಿರುವ ಆರೋಪಿ, ತನ್ನ ಸುಳಿವು ಸಿಗಬಾರದೆಂದು ಬೇರೆಡೆ ಹೋಗಿ ಪತ್ರ ಕಳುಹಿಸಿರುವ ಅನುಮಾನವಿದೆ’ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.