ಬೆಂಗಳೂರು: ಜಾರ್ಖಂಡ್ ಮಾದರಿಯಲ್ಲಿ ಕೇಂದ್ರ ಸರ್ಕಾರದಿಂದ ಖನಿಜ ಸಮೃದ್ಧ ಜಮೀನುಗಳ ಮೇಲಿನ ರಾಜಧನದ ಹಿಂದಿನ ಬಾಕಿ ಪಡೆಯುವಂತೆ ಒತ್ತಾಯಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಜಧನದ ಹಿಂದಿನ ಬಾಕಿಯನ್ನು ವಸೂಲಿ ಮಾಡಲು ಸುಪ್ರೀಂ ಕೋರ್ಟ್ ರಾಜ್ಯಗಳಿಗೆ ಅನುಮತಿ ನೀಡಿರುವುದು ಕರ್ನಾಟಕದ ಪಾಲಿಗೆ ವರದಾನವಾಗಿದೆ. ಇದರಿಂದ ರಾಜ್ಯಕ್ಕೆ ಭಾರಿ ಮೊತ್ತದ ಬಾಕಿ ರಾಜಧನ ಸಿಗಲಿದೆ. ಈ ಬಾಕಿ ಹಣವನ್ನು ಪಡೆಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕೋರ್ಟ್ ತೀರ್ಪಿನ ನಂತರ ಜಾರ್ಖಂಡ್‌ಗೆ ₹ 1.36 ಲಕ್ಷ ಕೋಟಿ ಬಾಕಿ ಬರಲಿದೆ. ಈ ಹಣದಲ್ಲಿ ಜಾರ್ಖಂಡ್ ಅಭಿವೃದ್ಧಿ ಹಾಗೂ ರಾಜ್ಯದ ಕಲ್ಯಾಣಕ್ಕೆ ವಿನಿಯೋಗಿಸುವುದಾಗಿ ಅಲ್ಲಿನ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ. ಇದೇ ಮಾದರಿಯಲ್ಲಿ ಕರ್ನಾಟಕದ ಪಾಲಿಗೆ ಬರಬೇಕಿರುವ ಮೊತ್ತವನ್ನು ಕೇಂದ್ರದಿಂದ ಪಡೆಯಬೇಕು ಎಂದು ಹೇಳಿದ್ದಾರೆ.