ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕಾಶಕರ ಸಂಕಷ್ಟ: ಖರೀದಿಯಾಗದ ಮೂರು ವರ್ಷಗಳ ಪುಸ್ತಕ

ಪುಸ್ತಕ ಪಟ್ಟಿಗೆ ಸಿಗದ ಅನುಮೋದನೆ
Published 3 ಅಕ್ಟೋಬರ್ 2023, 23:37 IST
Last Updated 3 ಅಕ್ಟೋಬರ್ 2023, 23:37 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಏಕಗವಾಕ್ಷಿ ಯೋಜನೆಯಡಿ ಅಂತಿಮಗೊಂಡಿದ್ದ 2020ನೇ ಸಾಲಿನ ಪುಸ್ತಕಗಳ ಪಟ್ಟಿಗೆ ಈವರೆಗೂ ಸರ್ಕಾರದಿಂದ ಅನುಮೋದನೆ ದೊರೆತಿಲ್ಲ. ಇದರಿಂದಾಗಿ ಮೂರು ವರ್ಷಗಳ ಪುಸ್ತಕ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.

ಈ ಯೋಜನೆಯಡಿ ಪುಸ್ತಕಗಳ ಆಯ್ಕೆಗೆ ಸಂಬಂಧಿಸಿದಂತೆ ಸರ್ಕಾರವು ಇತ್ತೀಚೆಗೆ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ಪುನರ್‌ ರಚಿಸಿ, ಸಾಹಿತಿ ಕರೀಗೌಡ ಬೀಚನಹಳ್ಳಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ಆದರೆ, ಸಾಹಿತಿ ದೊಡ್ಡರಂಗೇಗೌಡ ಅವರ ನೇತೃತ್ವದ ಹಿಂದಿನ ಪುಸ್ತಕ ಆಯ್ಕೆ ಸಮಿತಿ, ಎರಡು ವರ್ಷಗಳ ಹಿಂದೆ ಅಂತಿಮಗೊಳಿಸಿದ್ದ 2020ನೇ ಸಾಲಿನ ಪುಸ್ತಕಗಳ ಖರೀದಿ ಈವರೆಗೂ ನಡೆದಿಲ್ಲ. ಇದರಿಂದಾಗಿ 2021 ಹಾಗೂ 2022ರ ಪುಸ್ತಕಗಳ ಖರೀದಿಗೂ ಹಿನ್ನಡೆಯಾಗಿದ್ದು, ಇತ್ತೀಚಿನ ಪುಸ್ತಕಗಳು ರಾಜ್ಯದ ಗ್ರಂಥಾಲಯಗಳಲ್ಲಿ ಸಿಗದಂತಾಗಿವೆ. 

ಅಂತಿಮಗೊಂಡ ಪುಸ್ತಕ ಪಟ್ಟಿಗೆ ಅನುಮೋದನೆ ನೀಡಿ, ಖರೀದಿ ಪ್ರಕ್ರಿಯೆ ನಡೆಸುವಂತೆ ಈ ಹಿಂದೆ ಪ್ರಕಾಶಕರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು. ಪುಸ್ತಕಗಳ ಖರೀದಿಗೆ ₹10 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ, ಆರ್ಥಿಕ ಇಲಾಖೆ ಅನುಮೋದನೆ ನೀಡದಿದ್ದುದರಿಂದ ಖರೀದಿ ಪ್ರಕ್ರಿಯೆ ನಡೆದಿಲ್ಲ. ಪ್ರಕಾಶಕರ ಸಂಘದ ನಿಯೋಗವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರನ್ನೂ ಭೇಟಿ ಮಾಡಿ, ಪುಸ್ತಕ ಖರೀದಿಗೆ ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದರು. ಆ ವೇಳೆ ಸಕಾರಾತ್ಮಕ ಸ್ಪಂದನೆ ದೊರೆತರೂ, ಖರೀದಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ ಎಂದು ಪ್ರಕಾಶಕರು ದೂರಿದ್ದಾರೆ.

ಪುಸ್ತಕೋದ್ಯಮಕ್ಕೆ ಹಿನ್ನಡೆ: ಯೋಜನೆಯಡಿ ಈಗಾಗಲೇ 2021ರ ಪುಸ್ತಕಗಳ ಖರೀದಿ ಪ್ರಕ್ರಿಯೆಯೂ ನಡೆದು, 2022ರ ಪುಸ್ತಕಗಳ ಆಯ್ಕೆ ಹಾಗೂ ಖರೀದಿ ಈ ವರ್ಷ ನಡೆಯಬೇಕಾಗಿತ್ತು. ಆದರೆ, 2020ರ ಪುಸ್ತಕಗಳ ಖರೀದಿಯೇ ನಡೆಯದಿದ್ದರಿಂದ ಮುಂದಿನ ವರ್ಷಗಳ ಆಯ್ಕೆ ಪ್ರಕ್ರಿಯೆಯೂ ನಡೆದಿಲ್ಲ. ಹೀಗಾಗಿ ಇತ್ತೀಚಿಗೆ ಪ್ರಕಟವಾದ ಪುಸ್ತಕಗಳು ರಾಜ್ಯದ ಗ್ರಂಥಾಲಯಗಳನ್ನು ಸೇರಲು ಇನ್ನಷ್ಟು ದಿನಗಳು ಬೇಕಾಗಲಿವೆ. 

‘ಪುಸ್ತಕ ಪ್ರಕಟಣೆ ವೆಚ್ಚ ಗಗನಕ್ಕೇರಿದೆ. ಪುಸ್ತಕಗಳ ಪುಟದ ದರವನ್ನು ಪರಿಷ್ಕರಿಸದ ಸರ್ಕಾರ, ಏಕಗವಾಕ್ಷಿ ಯೋಜನೆಯಡಿ ಪುಸ್ತಕಗಳ ಖರೀದಿ ಪ್ರಕ್ರಿಯೆಯನ್ನೂ ನಡೆಸಿಲ್ಲ. ಇದರಿಂದ ಹಲವು ಪ್ರಕಾಶಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಪುಸ್ತಕೋದ್ಯಮದಿಂದ ಹಿಂದೆ ಸರಿಯಬೇಕಾಗುತ್ತದೆ. ಇದನ್ನೇ ನಂಬಿರುವ ಹಲವು ಕುಟುಂಬಗಳು ಬೀದಿಗೆ ಬೀಳಲಿವೆ. ಆದ್ದರಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಕೂಡಲೇ ಬಿಡುಗಡೆಗೊಳಿಸಿ, ಖರೀದಿ ಪ್ರಕ್ರಿಯೆ ನಡೆಸಬೇಕು’ ಎಂದು ಪ್ರಕಾಶಕರು ಆಗ್ರಹಿಸಿದ್ದಾರೆ. 

ಸಗಟು ಖರೀದಿ ಅವಲಂಬನೆ

ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಪ್ರಕಾಶಕರಲ್ಲಿ ಹೆಚ್ಚಿನವರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಇಲಾಖೆಯು ಖರೀದಿಸಲಿದೆ. ಇದಕ್ಕಾಗಿ ಪ್ರತಿವರ್ಷ ₹15 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಖರೀದಿ ನಿಯಮಿತವಾಗಿ ನಡೆಯದಿರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎನ್ನುತ್ತಾರೆ ಪ್ರಕಾಶಕರು.

ಹೆಚ್ಚಿನ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಯನ್ನೇ ಅವಲಂಬಿ ಸಿದ್ದಾರೆ. ಖರೀದಿ ವಿಳಂಬ ಮಾಡಿದಲ್ಲಿ ಪ್ರಕಾಶಕರು ಸಂಕಷ್ಟಕ್ಕೆ ಸಿಲುಕುತ್ತಾರೆ
ಪ್ರಕಾಶ್ ಕಂಬತ್ತಳ್ಳಿ , ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ
ಕೋವಿಡ್ ಕಾರಣದಿಂದ ಪುಸ್ತಕ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. 2020ರ ಪುಸ್ತಕಗಳ ಖರೀದಿ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ನಡೆಸಲಾಗುವುದು
ಸತೀಶ್ ಕುಮಾರ್ ಹೊಸಮನಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT