ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಕರ ₹ 638.18 ಕೋಟಿ ಬಾಕಿ: ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ

Published 6 ಡಿಸೆಂಬರ್ 2023, 23:52 IST
Last Updated 6 ಡಿಸೆಂಬರ್ 2023, 23:52 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕಾದ ಗ್ರಂಥಾಲಯ ಕರದಲ್ಲಿ ಬಿಬಿಎಂಪಿ ₹ 638.18 ಕೋಟಿ ಬಾಕಿ ಉಳಿಸಿಕೊಂಡಿದೆ. ಇದರಿಂದ ಕನ್ನಡ ಪುಸ್ತಕೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. 

ಇಲಾಖೆಯು ಏಕಗವಾಕ್ಷಿ ಯೋಜನೆಯಡಿ ಆಯ್ಕೆಯಾದ ಪುಸ್ತಕಗಳ ಪ್ರತಿ ಶೀರ್ಷಿಕೆಯ 300 ಪ್ರತಿಗಳನ್ನು ಖರೀದಿಸಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 500 ಪ್ರಕಾಶನ ಸಂಸ್ಥೆಗಳಿವೆ. ಕೆಲವು ಲೇಖಕರು ಕೂಡ ಪ್ರಕಾಶನ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತಿ ವರ್ಷ ಸುಮಾರು 8 ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಬಹುತೇಕ ಪ್ರಕಾಶಕರು ಗ್ರಂಥಾಲಯ ಇಲಾಖೆಯ ಸಗಟು ಖರೀದಿಯನ್ನೇ ಅವಲಂಬಿಸಿದ್ದಾರೆ. ‌ಇದಕ್ಕಾಗಿ ಪ್ರತಿವರ್ಷ ₹ 15 ಕೋಟಿ ವೆಚ್ಚ ಮಾಡಲಾಗುತ್ತಿತ್ತು. ‌ಆದರೆ, ನಿರ್ದಿಷ್ಟ ಬಜೆಟ್ ಘೋಷಿಸದಿರುವುದು, ಪುಸ್ತಕಗಳ ಖರೀದಿಗೆ ಅಗತ್ಯವಿರುವ ಅನುದಾನಕ್ಕೆ ಅನುಮೋದನೆ ದೊರೆಯದಿರುವುದು ಸೇರಿ ವಿವಿಧ ಕಾರಣದಿಂದ ಪುಸ್ತಕೋದ್ಯಮ ಹಿನ್ನಡೆ ಅನುಭವಿಸಿದೆ. ಬಿಬಿಎಂಪಿ ನಿಯಮಿತವಾಗಿ ಗ್ರಂಥಾಲಯ ಕರ ಪಾವತಿಸದಿರುವುದು ಪ್ರಕಾಶಕರ ಅಸಮಾಧಾನಕ್ಕೆ ಕಾರಣವಾಗಿದೆ.

ಬಾಕಿ ಉಳಿಸಿಕೊಂಡಿರುವ ಗ್ರಂಥಾಲಯ ಕರವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆ 1965ರ ಸೆಕ್ಷನ್ 30ರ ಅನುಸಾರ ರಾಜ್ಯದ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಆಸ್ತಿ ತೆರಿಗೆಗಳ ಮೇಲೆ ಶೇ 6ರಷ್ಟು ಗ್ರಂಥಾಲಯ ಕರವನ್ನು ಸ್ಥಳೀಯ ಸಂಸ್ಥೆಗಳು ಸಂಗ್ರಹ ಮಾಡಿ, ಶೇ 10 ರಷ್ಟು ಸಂಗ್ರಹಣಾ ವೆಚ್ಚ ಕಡಿತಗೊಳಿಸಿಕೊಂಡು, ಸಂಬಂಧಿಸಿದ ಗ್ರಂಥಾಲಯ ಪ್ರಾಧಿಕಾರಗಳಿಗೆ ನಿಯಮಾನುಸಾರ ಸಂದಾಯ ಮಾಡಬೇಕು. ಬಿಬಿಎಂಪಿ ನಿಯಮಿತವಾಗಿ ಗ್ರಂಥಾಲಯ ಕರ ವಸೂಲಿ ಮಾಡುತ್ತಿದ್ದರೂ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನೀಡದೆ ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು 2023–24ನೇ ಆರ್ಥಿಕ ವರ್ಷದ ಅಂತ್ಯದೊಳಗೆ ಪಾವತಿಸಲು ಕ್ರಮವಹಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪುಸ್ತಕ ಖರೀದಿಗೆ ಹಿನ್ನಡೆ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳು ₹ 62.08 ಕೋಟಿ ಗ್ರಂಥಾಲಯ ಕರವನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪಾವತಿಸದೆ ಬಾಕಿ ಉಳಿಸಿಕೊಂಡಿವೆ. ಇದರಿಂದ ವಾರ್ಷಿಕ ಕಾರ್ಯಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಅನುದಾನದ ಕೊರತೆ ಸೇರಿ ವಿವಿಧ ಕಾರಣಗಳಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2020ನೇ ಸಾಲಿಗೆ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಕಳೆದ ತಿಂಗಳು ಬಿಡುಗಡೆ ಮಾಡಿದೆ.

ಪುಸ್ತಕಗಳ ಖರೀದಿಗೆ ಕಳೆದ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿದ್ದ ₹ 10 ಕೋಟಿ ಅನುದಾನಕ್ಕೆ ಈಗ ಅನುಮೋದನೆ ದೊರೆತಿರುವುದರಿಂದ 2020ನೇ ಸಾಲಿನ ಪುಸ್ತಕಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 2020ರ ಪಟ್ಟಿ ವಿಳಂಬವಾದ್ದರಿಂದ 2021 ಹಾಗೂ 2022ರ ಪುಸ್ತಕಗಳ ಖರೀದಿಗೂ ಹಿನ್ನಡೆಯಾಗಿದ್ದು, ಇತ್ತೀಚಿನ ಪುಸ್ತಕಗಳು ರಾಜ್ಯದ ಗ್ರಂಥಾಲಯಗಳಲ್ಲಿ ಸಿಗದಂತಾಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT