ಶನಿವಾರ, ಫೆಬ್ರವರಿ 27, 2021
28 °C
* ಮದ್ಯ ಮಾರಾಟ ಶುರು * ಬೆಳಿಗ್ಗೆಯಿಂದಲೇ ಕಾದು ನಿಂತ ಜನ * ಮಹಿಳೆಯರಿಗೆ ಪ್ರತ್ಯೇಕ ಸಾಲು

ಅಂತರ ಮರೆತರು; ಮದ್ಯಕ್ಕಾಗಿ ಮುಗಿಬಿದ್ದರು  

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಂತೆ ನಗರದಲ್ಲಿ ಸೋಮವಾರ ಮದ್ಯ ಖರೀದಿಗೆ ಜನ ತಾ ಮುಂದು ನಾ ಮುಂದು ಎಂದು ಮುಗಿಬಿದ್ದರು. ಪ್ರತಿಯೊಂದು ಮದ್ಯದಂಗಡಿ ಎದುರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದ ಗ್ರಾಹಕರು, ತಮ್ಮಿಷ್ಟದ ಮದ್ಯ ಖರೀದಿಸಿದರು.

ಅಬಕಾರಿ ಆಯುಕ್ತರು ಹೊರಡಿಸಿದ್ದ ಆದೇಶದಂತೆ ಸಿಎಲ್‌–2 (ವೈನ್‌ ಶಾಪ್ ಹಾಗೂ ಎಂಆರ್‌ಪಿ) ಹಾಗೂ ಸಿಎಲ್–11 ಸಿ (ಎಂಎಸ್‌ಐಎಲ್) ಮಳಿಗೆಗಳನ್ನು ಮಾತ್ರೆ ತೆರೆಯಲಾಗಿತ್ತು. ಪ್ರತಿಯೊಂದು ಅಂಗಡಿ ಎದುರು ಅಂತರ ಕಾಯ್ದುಕೊಳ್ಳುವ ವೃತ್ತ ಹಾಕುವಂತೆಯೂ ಸೂಚಿಸಲಾಗಿತ್ತು.

ಮಾಸ್ಕ್ ಹಾಕಿಕೊಂಡ ಹಾಗೂ ಅಂತರ ಕಾಯ್ದುಕೊಂಡು ಬರುವ ಗ್ರಾಹಕರಿಗೆ ಮದ್ಯ ನೀಡಲು ಹೇಳಲಾಗಿತ್ತು. ಅದನ್ವಯವೇ ಹಲವೆಡೆ ಮದ್ಯ ಮಾರಾಟ ನಡೆಯಿತು. ಕೆಲವೆಡೆ ಅಂತರ ಕಾಯ್ದುಕೊಳ್ಳದ ಪ್ರಸಂಗಗಳೂ ನಡೆದವು. ಪೊಲೀಸರ ಮಾತಿಗೂ ಗ್ರಾಹಕರು ಬಗ್ಗಲಿಲ್ಲ.

ನಿಗದಿಗಿಂತ ಹೆಚ್ಚು ಮದ್ಯ ಕೇಳಿದ ಗ್ರಾಹಕರನ್ನು ಅಂಗಡಿ ಸಿಬ್ಬಂದಿ ಬೈದು ವಾಪಸು ಕಳುಹಿಸಿದರು. ಹಲವರು ಪುನಃ ಸರದಿಯಲ್ಲಿ ನಿಂತು ಮದ್ಯ ಖರೀದಿಸಿದ್ದು ಕಂಡುಬಂತು.

ಮದ್ಯದಂಗಡಿ ತೆರೆಯುವುದು ತಿಳಿಯುತ್ತಿದ್ದಂತೆ ಬೆಳಿಗ್ಗೆ 5ರಿಂದಲೇ ಗ್ರಾಹಕರು ಸರದಿಯಲ್ಲಿ ನಿಂತುಕೊಂಡಿದ್ದರು. ಮದ್ಯ ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿತ್ತು. ಹೀಗಾಗಿ, ಹಲವರು ಕೈ ಚೀಲ ಸಮೇತವೇ ಅಂಗಡಿಗೆ ಬಂದಿದ್ದರು. ಕೆಲವರು ಜೇಬಿನಲ್ಲಿ ಮದ್ಯದ ಬಾಟಲಿ ಇಟ್ಟುಕೊಂಡರು. ಅಂಗಡಿ ಸಿಬ್ಬಂದಿ, ಪ್ರತಿಯೊಬ್ಬರ ಕೈಯನ್ನು ಸ್ಯಾನಿಟೈಸರ್‌ನಿಂದ ತೊಳೆಸಿಯೇ ಮದ್ಯದ ಬಾಟಲಿ ಕೊಟ್ಟರು. ಕೆಲ ಅಂಗಡಿಗಳಲ್ಲಿ ಗ್ರಾಹಕರ ಥರ್ಮಲ್ ಸ್ಕ್ರೀನಿಂಗ್ ಸಹ ಮಾಡಲಾಯಿತು.

ವಿಸ್ಕಿ, ರಮ್, ಬ್ರಾಂದಿ, ಬಿಯರ್, ವೈನ್, ವೋಡ್ಕಾ ಹಾಗೂ ಇತರೆ ಬ್ರ್ಯಾಂಡ್‌ಗಳ ಮದ್ಯಕ್ಕೆ ಬೇಡಿಕೆ ಇತ್ತು. ಹಲವು ಮದ್ಯದಂಗಡಿ ಎದುರಿನ ಸರದಿಯಲ್ಲಿ ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ನಿಂತಿದ್ದರು. ಎಲ್ಲೆಡೆಯೂ ಪೊಲೀಸರ ಭದ್ರತೆಯೂ ಬಿಗಿಯಾಗಿತ್ತು.

ಮಹಿಳೆಯರಿಗೆ ಪ್ರತ್ಯೇಕ ಸರದಿ; ಕಗ್ಗದಾಸಪುರದ ‘ಟೋಟಲ್ ಡ್ರಾಪ್ಸ್’ ಮದ್ಯದಂಗಡಿ ಮುಂದೆ ಮಹಿಳೆಯರಿಗಾಗಿಯೇ ಪ್ರತ್ಯೇಕ ಸರದಿ ವ್ಯವಸ್ಥೆ ಮಾಡಲಾಗಿತ್ತು.

ವೇಲ್‌ ಹಾಗೂ ಕರವಸ್ತ್ರವನ್ನೇ ಮಾಸ್ಕ್ ಮಾಡಿಕೊಂಡು ಧರಿಸಿದ್ದ ಮಹಿಳೆಯರು, ಅಂತರವನ್ನು ಕಾಯ್ದುಕೊಂಡು ಮದ್ಯ ಖರೀದಿಸಿಕೊಂಡು ಹೋದರು.

ಕರವಸ್ತ್ರ, ಟವಲೇ ಮಾಸ್ಕ್;  ಅಂಗಡಿ ಎದುರು ನಿಂತಿದ್ದ ಬಹುಪಾಲು ಜನರ ಬಳಿ ಮಾಸ್ಕ್‌ ಇರಲಿಲ್ಲ. ಅವರೆಲ್ಲರೂ ತಮ್ಮ ಕರವಸ್ತ್ರ ಹಾಗೂ ಟವಲನ್ನೇ ಮಾಸ್ಕ್ ಮಾಡಿಕೊಂಡು ಸರದಿಯಲ್ಲಿ ನಿಂತಿದ್ದರು.

ಮದ್ಯ ಕೈಗೆ ಸಿಗುತ್ತಿದ್ದಂತೆ ಅದೇ ಕರವಸ್ತ್ರ ಹಾಗೂ ಟವಲ್ ಬಿಚ್ಚಿ ಅದರಲ್ಲಿ ಬಾಟಲಿ ಕಟ್ಟಿಕೊಂಡು ಕಾಲ್ಕಿತ್ತರು.

ವೃತ್ತದಲ್ಲಿ ಚಪ್ಪಲಿ ಇಟ್ಟ ಜನ; ಕುರುಬರಹಳ್ಳಿಯ ಕಾರ್ತಿಕ್ ವೈನ್ ಮಳಿಗೆ ಎದುರು ಅಂತರ ಕಾಯ್ದುಕೊಳ್ಳುವುದಕ್ಕಾಗಿ ವೃತ್ತ ಹಾಕಲಾಗಿತ್ತು. ಆದರೆ, ಗ್ರಾಹಕರು ತಮ್ಮ ಚಪ್ಪಲಿಗಳನ್ನು ವೃತ್ತದಲ್ಲಿ ಇಟ್ಟು ತಾವು ಆರಾಮಾಗಿ ನೆರಳಲ್ಲಿ ಕುಳಿತುಕೊಂಡಿದ್ದರು. ಯಾವುದೇ ಅಂತರವನ್ನೂ ಪಾಲಿಸದಿರುವುದು ಕಂಡುಬಂತು.

ವಾಹನ ಸಂಚಾರಕ್ಕೆ ಅವಕಾಶ; ದಟ್ಟಣೆ

ಬಿಬಿಎಂಪಿ ಘೋಷಿಸಿರುವ 22 ನಿರ್ಬಂಧಿತ ವಲಯಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರದೇಶದಲ್ಲಿ ಸಂಚಾರಕ್ಕೆ ಮುಕ್ತ ಅವಕಾಶವಿದ್ದಿದ್ದರಿಂದ ಸೋಮವಾರ ಬಹುತೇಕರು ತಮ್ಮ ವಾಹನಗಳನ್ನು ರಸ್ತೆಗೆ ಇಳಿಸಿದರು. ಇದರಿಂದ ಮಾರುಕಟ್ಟೆ ಹಾಗೂ ಜನವಸತಿ ಪ್ರದೇಶಗಳಲ್ಲಿ ದಟ್ಟಣೆ ಕಂಡುಬಂತು.

ಲಾಕ್‌ಡೌನ್‌ ವೇಳೆ ಮನೆಯಲ್ಲಿದ್ದ ಬಹುತೇಕರು, ಸೋಮವಾರ ಬೈಕ್ ಹಾಗೂ ಕಾರುಗಳನ್ನು ಹೊರಗೆ ಬಂದು ಸುತ್ತಾಡಿದರು.  ಮಾರುಕಟ್ಟೆಗೆ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿಕೊಂಡು ಹೋದರು.

ಸರದಿಯಲ್ಲಿ ನಿಂತು ಅಸ್ವಸ್ಥಗೊಂಡ ಯುವತಿ

ಕಸ್ತೂರಬಾ ರಸ್ತೆಯಲ್ಲಿರುವ ಟಾನಿಕ್ ಮದ್ಯದಂಗಡಿ ಎದುರು ಯುವತಿಯರೂ ಸಾಲಿನಲ್ಲಿ ನಿಂತಿದ್ದರು. ಬೆಳಿಗ್ಗೆ ತಿಂಡಿ ತಿನ್ನದೇ ಬಂದಿದ್ದ ಯುವತಿಯೊಬ್ಬರು ಅಸ್ವಸ್ಥಗೊಂಡು ತಲೆ ಸುತ್ತು ಬಂದು ಬಿದ್ದರು. ಮದ್ಯದಂಗಡಿ ಸಿಬ್ಬಂದಿ ಅವರನ್ನು ಕುರ್ಚಿ ಮೇಲೆ ಕೂರಿಸಿ ಉಪಚರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು