ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭೆ ಚುನಾವಣೆ | ನೀತಿ ಸಂಹಿತೆ; ಶಸ್ತ್ರಾಸ್ತ್ರ ಠೇವಣಿಗೆ ಸೂಚನೆ

* 100ಕ್ಕೂ ಹೆಚ್ಚು ಕಡೆ ಚೆಕ್‌ಪೋಸ್ಟ್ ನಿರ್ಮಾಣ * ರೆಸಿಡೆನ್ಸಿ ರಸ್ತೆಯಲ್ಲಿ ₹ 13 ಲಕ್ಷ ಜಪ್ತಿ
Published 17 ಮಾರ್ಚ್ 2024, 22:30 IST
Last Updated 17 ಮಾರ್ಚ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಪರವಾನಗಿ ಶಸ್ತ್ರಾಸ್ತ್ರಗಳನ್ನು ಸಂಬಂಧಪಟ್ಟ ಠಾಣೆಗಳಲ್ಲಿ ಠೇವಣಿ ಇರಿಸುವಂತೆ ಕಮಿಷನರ್ ಬಿ. ದಯಾನಂದ್ ಸೂಚಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ನಿರ್ದೇಶನ ನೀಡಿರುವ ದಯಾನಂದ್, ‘ಶಸ್ತ್ರಾಸ್ತ್ರ ಪರವಾನಗಿ ಪಡೆದವರ ಪಟ್ಟಿ ಸಿದ್ಧಪಡಿಸಿ. ಅವರಿಂದ ಶಸ್ತ್ರಾಸ್ತ್ರಗಳನ್ನು ಠೇವಣಿ ಇರಿಸಿಕೊಂಡು, ರಶೀದಿ ನೀಡಬೇಕು. ನೀತಿ ಸಂಹಿತೆ ಮುಗಿಯುವವರೆಗೂ ಶಸ್ತ್ರಾಸ್ತ್ರ ವಾಪಸು ನೀಡಬಾರದು’ ಎಂದಿದ್ದಾರೆ.

‘ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಶಸ್ತ್ರಾಸ್ತ್ರ ಠೇವಣಿ ಇರಿಸದವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದೂ ಅವರು ಹೇಳಿದ್ದಾರೆ.

100 ಚೆಕ್‌ಪೋಸ್ಟ್ ನಿರ್ಮಾಣ: ‘ಬೆಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಈ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಹಾಗೂ ಬೇರೆ ಇಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ’ ಎಂದು ದಯಾನಂದ್ ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದರು.

‘ದಾಖಲೆ ಇಲ್ಲದೇ ನಗದು ಸಾಗಣೆ ಹಾಗೂ ಮತದಾರರಿಗೆ ಆಮಿಷವೊಡ್ಡಲು ವಸ್ತುಗಳ ಸಾಗಣೆ ಮಾಡುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ನಗರದ ಎಲ್ಲ ಕಡೆಯೂ ಬಿಗಿ ಭದ್ರತೆ ಇರಲಿದೆ’ ಎಂದು ಹೇಳಿದರು.

₹ 13 ಲಕ್ಷ ಜಪ್ತಿ: ರೆಸಿಡೆನ್ಸಿ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹13 ಲಕ್ಷವನ್ನು ಅಶೋಕನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

‘ಶನಿವಾರ ರಾತ್ರಿ ತಪಾಸಣೆ ಸಂದರ್ಭದಲ್ಲಿ, ವಾಹನವೊಂದರಲ್ಲಿ ₹ 13 ಲಕ್ಷ ಪತ್ತೆಯಾಗಿತ್ತು. ಈ ಹಣಕ್ಕೆ ಯಾವುದೇ ದಾಖಲೆ ಇರಲಿಲ್ಲ. ಹೀಗಾಗಿ, ಹಣವನ್ನು ಜಪ್ತಿ ಮಾಡಿ ವಾಹನದ ಚಾಲಕನಿಗೆ ನೋಟಿಸ್ ನೀಡಲಾಗಿದೆ. ದಾಖಲೆ ತಂದುಕೊಡುವುದಾಗಿ ಚಾಲಕ ತಿಳಿಸಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT