ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12 ಆರ್‌ಟಿಒ ಕಚೇರಿಗಳಲ್ಲಿ ಲೋಕಾಯುಕ್ತ ಶೋಧ

ಭ್ರಷ್ಟಾಚಾರ, ದುರಾಡಳಿತದ ದೂರು
Published 13 ಸೆಪ್ಟೆಂಬರ್ 2023, 16:25 IST
Last Updated 13 ಸೆಪ್ಟೆಂಬರ್ 2023, 16:25 IST
ಅಕ್ಷರ ಗಾತ್ರ

ಬೆಂಗಳೂರು: ಭ್ರಷ್ಟಾಚಾರ, ದುರಾಡಳಿತ ಮತ್ತು ಮಧ್ಯವರ್ತಿಗಳ ಹಾವಳಿ ಕುರಿತ ದೂರುಗಳನ್ನು ಆಧರಿಸಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ 12 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಒ) ಕಚೇರಿಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿಮಾಡಿದ ಲೋಕಾಯುಕ್ತ ಪೊಲೀಸರು, ಶೋಧ ನಡೆಸಿದ್ದಾರೆ.

ಬೆಂಗಳೂರು ನಗರದ ಒಂಬತ್ತು ಆರ್‌ಟಿಒ ಕಚೇರಿಗಳಲ್ಲೂ ಶೋಧ ನಡೆದಿದೆ. ನೆಲಮಂಗಲ, ದೇವನಹಳ್ಳಿ ಮತ್ತು ಆನೇಕಲ್‌ ಆರ್‌ಟಿಒ ಕಚೇರಿಗಳ ಮೇಲೂ ದಾಳಿಮಾಡಿ, ಶೋಧ ನಡೆಸಲಾಗಿದೆ. ಲೋಕಾಯುಕ್ತದ ನ್ಯಾಯಾಂಗ ವಿಭಾಗದಲ್ಲಿನ ನ್ಯಾಯಾಧೀಶರು, ಪೊಲೀಸ್‌ ವಿಭಾಗದಲ್ಲಿನ ಎಸ್‌ಪಿ, ಡಿವೈಎಸ್‌ಪಿ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 120 ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗಳಲ್ಲಿ ದುರಾಡಳಿತ, ಅಕ್ರಮ, ಅವ್ಯವಹಾರದ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಈ ವಿಚಾರಣೆಯ ಭಾಗವಾಗಿ ಆರ್‌ಟಿಒ ಕಚೇರಿಗಳಲ್ಲಿ ಶೋಧ ನಡೆಸುವಂತೆ ಲೋಕಾಯುಕ್ತರು ಆದೇಶ ಹೊರಡಿಸಿದ್ದರು.

ಜಯನಗರ ಮತ್ತು ರಾಜಾಜಿನಗರ ಆರ್‌ಟಿಒ ಕಚೇರಿಗಳಿಗೆ ಬಿ.ಎಸ್‌. ಪಾಟೀಲ ಖುದ್ದಾಗಿ ಭೇಟಿ ನೀಡಿ ಕಾರ್ಯಾಚರಣೆ ಪರಿಶೀಲಿಸಿದರು. ಉಪ ಲೋಕಾಯುಕ್ತ ಕೆ.ಎನ್‌. ಫಣೀಂದ್ರ ಅವರು ಯಲಹಂಕ ಮತ್ತು ಯಶವಂತಪುರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಭೇಟಿನೀಡಿ, ಕಾರ್ಯಾಚರಣೆಯ ಮಾಹಿತಿ ಪಡೆದರು. ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ಠಾಕೂರ್‌ ಕೂಡ ಕೆಲವು ಕಚೇರಿಗಳಿಗೆ ಭೇಟಿನೀಡಿ ಪರಿಶೀಲಿಸಿದರು.

ಮಧ್ಯವರ್ತಿಗಳ ಮೊಬೈಲ್‌ ವಶ: ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಬಹುತೇಕ ಆರ್‌ಟಿಒ ಕಚೇರಿಗಳಲ್ಲಿ ಮಧ್ಯವರ್ತಿಗಳಿದ್ದರು. ಪೊಲೀಸರ ವಶಕ್ಕೆ ಸಿಕ್ಕ ಹಲವು ಮಧ್ಯವರ್ತಿಗಳ ಮೊಬೈಲ್‌ ಫೋನ್‌ಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಲೋಕಾಯುಕ್ತದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಲೇವಾರಿಗೆ ಬಾಕಿ ಇರುವ ಅರ್ಜಿಗಳು, ದೀರ್ಘ ಕಾಲದಿಂದ ವಿಲೇವಾರಿಯಾಗದೇ ಉಳಿದಿರುವ ಕಡತಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಲಂಚಕ್ಕೆ ಬೇಡಿಕೆ, ಸೇವೆ ಒದಗಿಸಲು ಸತಾಯಿಸುವುದು ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಯ ದುರ್ನಡತೆ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗಿದೆ.

‘ಒಟ್ಟು 12 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಎಲ್ಲ ತಂಡಗಳೂ ಆಯಾ ಆರ್‌ಟಿಒ ಕಚೇರಿಯಲ್ಲಿ ಕಂಡುಬಂದ ಪರಿಸ್ಥಿತಿ, ಪತ್ತೆಯಾಗಿರುವ ಲೋಪಗಳ ಕುರಿತು ಪ್ರತ್ಯೇಕವಾಗಿ ವರದಿ ಸಲ್ಲಿಸಲಿವೆ. ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಲೋಕಾಯುಕ್ತ ಬಿ.ಎಸ್‌. ಪಾಟೀಲ ತಿಳಿಸಿದರು.

ಮಧ್ಯವರ್ತಿ ಕಚೇರಿಗೆ ಬೀಗಮುದ್ರೆ

ಯಶವಂತಪುರ ಆರ್‌ಟಿಒ ಕಚೇರಿ ಸಮೀಪದಲ್ಲಿರುವ ಮಧ್ಯವರ್ತಿಯೊಬ್ಬರ ಕಚೇರಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿರುವ ಮಾಹಿತಿ ಲೋಕಾಯುಕ್ತ ಪೊಲೀಸರಿಗೆ ಲಭ್ಯವಾಗಿತ್ತು. ಅಲ್ಲಿ ಶೋಧಕ್ಕೆ ತೆರಳಿದಾಗ ಮಧ್ಯವರ್ತಿ ಕಚೇರಿಯ ಬಾಗಿಲಿಗೆ ಬೀಗ ಹಾಕಿ ತೆರಳಿದ್ದರು. ಬೀಗಕ್ಕೆ ಮೊಹರು ಮಾಡಲಾಗಿದ್ದು ಗುರುವಾರ ಮಧ್ಯವರ್ತಿಯ ಸಮ್ಮುಖದಲ್ಲೇ ತೆರೆದು ಶೋಧ ನಡೆಸಲಾಗುವುದು ಎಂದು ಲೋಕಾಯುಕ್ತದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT