ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಕೇಂದ್ರ ಲೋಕಸಭಾ: ಭರ್ಜರಿ ರೋಡ್‌ ಶೋ– ಗ್ಯಾರಂಟಿಗಳ ಭರವಸೆ

ನೆತ್ತಿಸುಡುವ ಬಿಸಿಲಿನಲ್ಲಿ ‘ಮತಯಾಚನೆ’– ನವಬೆಂಗಳೂರು ನಿರ್ಮಾಣದ ಸಂಕಲ್ಪ
Published 17 ಏಪ್ರಿಲ್ 2024, 20:48 IST
Last Updated 17 ಏಪ್ರಿಲ್ 2024, 20:48 IST
ಅಕ್ಷರ ಗಾತ್ರ

ಬೆಂಗಳೂರು: ನೆತ್ತಿ ಸುಡುವ ಬಿಸಿಲಿನಲ್ಲಿಯೂ ಪ್ರಚಾರ ಸಾಮಗ್ರಿಗಳೊಂದಿಗೆ ನಗರದ ಮರ್ಫಿಟೌನ್‌ನಲ್ಲಿ ಅಭ್ಯರ್ಥಿಗಾಗಿ ಕಾರ್ಯಕರ್ತರು ಕಾಯುತ್ತಿದ್ದರು. ಇನ್ನೊಂದೆಡೆ ತಮಟೆ ಸದ್ದು, ಜೈಕಾರ, ಕೇಕೆ, ಶಿಳ್ಳೆ, ಯಕ್ಷಗಾನ, ಗೊಂಬೆ ವೇಷಧಾರಿಗಳ ನೃತ್ಯದೊಂದಿಗೆ ಕಾರ್ಯಕರ್ತರ ಮತ್ತೊಂದು ತಂಡ ಪ್ರಚಾರಕ್ಕೆ ಸಜ್ಜಾಗಿತ್ತು. ತೆರೆದ ವಾಹನದಲ್ಲಿ ಜನರತ್ತ ಕೈ ಬೀಸುತ್ತಾ ಬಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಕಾರ್ಯಕರ್ತರನ್ನು ಸೇರಿಕೊಂಡರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮರ್ಫಿಟೌನ್‌ನಲ್ಲಿ ಮನ್ಸೂರ್ ಅಲಿ ಖಾನ್‌ ಅವರು ಬುಧವಾರ ನಡೆಸಿದ ಚುನಾವಣಾ ಪ್ರಚಾರ ಕೈಗೊಂಡ ಪರಿ ಇದು.  

ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಮೂಲಕ ಮನ್ಸೂರ್‌ ಅವರು ಮತಯಾಚನೆ ಆರಂಭಿಸಿದರು. ನಂತರ ರೋಡ್‌ ಶೋ ಮೂಲಕ ಪ್ರಚಾರಕ್ಕೆ ಮುಂದಾದರು. ಮೆರವಣಿಗೆ ಸಾಗಿದ ರಸ್ತೆಗಳಲ್ಲಿ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು. ಕ್ರೇನ್‌ ಮೂಲಕ ಬೃಹತ್‌ ಗಾತ್ರದ ಸೇಬಿನ ಹಾರ ಹಾಕಿದರು. ಮುತ್ಯಾಲಮ್ಮ ದೇವಸ್ಥಾನ, ಗ್ಯಾಂಗ್‌ಮನ್‌ ಕ್ವಾಟರ್ಸ್‌ನ ಚರ್ಚ್‌, ದುರ್ಗಮ್ಮ ದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಹಿಳಾ ಕಾರ್ಯಕರ್ತರು ಮನ್ಸೂರ್‌ ಅವರಿಗೆ ಆರತಿ ಬೆಳಗಿ ಶುಭ ಹಾರೈಸಿದರು.

ಮರ್ಫಿಟೌನ್‌, ಜೈರಾಜ್‌ನಗರ, ಲಕ್ಷ್ಮಿಪುರ ಭಾಗಗಳಲ್ಲಿ ತಮಿಳರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಮುಖಂಡರು ತಮಿಳು ಭಾಷೆಯಲ್ಲಿಯೇ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ‘ರಾಜ್ಯ ಸರ್ಕಾರ  ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ ಯೋಜನೆ, ಯುವನಿಧಿ ಗ್ಯಾರಂಟಿಗಳನ್ನು ನೀಡಿದೆ. ಕೇಂದ್ರದಲ್ಲೂ ಅಧಿಕಾರ ಹಿಡಿಯಲು ಕಾಂಗ್ರೆಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಶಿವಾಜಿನಗರ–ಸಿವಿ ರಾಮನ್‌ನಗರ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಮನ್ಸೂರ್ ಅವರಿಗೆ ಶಾಸಕ ರಿಜ್ವಾನ್‌ ಅರ್ಷದ್ ಸಾಥ್‌ ನೀಡಿದರು.

ಸಂಜೆ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಮನ್ಸೂರ್‌ ಅಲಿ ಖಾನ್‌  ರೋಡ್‌ ಶೋ ನಡೆಸಿದರು. ರಾತ್ರಿ 8ರಿಂದ 10 ಗಂಟೆಯವರೆಗೆ ಶಿವಾಜಿನಗರದ ಗುಲಿಸ್ತಾನ್‌ ಶಾದಿ ಮಹಲ್‌ನಲ್ಲಿ ವ್ಯಾಪಾರಸ್ಥರೊಂದಿಗೆ ಸಭೆ ನಡೆಸುತ್ತಲೇ ಗೆಲುವಿಗಾಗಿ ‘ಕಾರ್ಯತಂತ್ರ’ ರೂಪಿಸಿದರು.

2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮೇಲೆ ಬಿಜೆಪಿ ಬಲವಾದ ಹಿಡಿತ ಸಾಧಿಸಿದೆ. ಕಾಂಗ್ರೆಸ್‌ ಈ ಬಾರಿ ‌ಈ ಕ್ಷೇತ್ರವನ್ನು ‘ಕೈ’ವಶ ಮಾಡಿಕೊಳ್ಳಲು ರಾಜ್ಯಸಭೆಯ ಉಪ ಸಭಾಪತಿಯಾಗಿದ್ದ ಕೆ. ರೆಹಮಾನ್‌ ಖಾನ್‌ ಪುತ್ರ ಮನ್ಸೂರ್‌ ಅಲಿ ಖಾನ್‌ ಅವರನ್ನು ಕಣಕ್ಕಿಳಿ ಸಿದೆ. ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅದೇ ಸಮುದಾಯದವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ.

ಮಜ್ಜಿಗೆ ಪಾನಕ ಕೋಸಂಬರಿ

ಇಂದಿರಾನಗರದ ಕೆಎಫ್‌ಸಿ ವೃತ್ತದಲ್ಲಿ ಪುನೀತ್‌ ರಾಜ್‌ಕುಮಾರ್‌ ಆಟೊ ಚಾಲಕರು ಆಯೋಜಿಸಿದ್ದ ಶ್ರೀರಾಮ ನವಮಿ ಕಾರ್ಯಕ್ರಮದಲ್ಲಿ ಮನ್ಸೂರ್‌ ಅಲಿ ಖಾನ್‌ ಪಾಲ್ಗೊಂಡು ಸೀತಾ–ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಭಕ್ತರಿಗೆ ಹಾಗೂ ಕಾರ್ಯಕರ್ತರಿಗೆ ಮಜ್ಜಿಗೆ ಪಾನಕ ಕೋಸಂಬರಿ ವಿತರಿಸಿದರು. ನೆತ್ತಿ ಸುಡುವ ಬಿಸಲಿನಲ್ಲಿಯೇ ಅಭ್ಯರ್ಥಿಯೊಂದಿಗೆ ಹೆಜ್ಜೆ ಹಾಕಿದ್ದ ಕಾರ್ಯಕರ್ತರು ಮಜ್ಜಿಗೆ ಪಾನಕ ಕುಡಿದು ಸ್ವಲ್ಪ ಸಮಯ ವಿಶ್ರಾಂತಿ ಪಡೆದು ಮತ್ತೆ ರೋಡ್‌ ಶೋನಲ್ಲಿ ಹೆಜ್ಜೆ ಹಾಕಿದರು.

ಸಿವಿ ರಾಮನ್‌ನಗರ ಶಿವಾಜಿನಗರ ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರಚಾರ

ಬೆಳಿಗ್ಗೆ 11ರಿಂದ ಮಧ್ಯಾಹ್ನ 2ಗಂಟೆಯವರೆಗೆ ಸಿ.ವಿ. ರಾಮನ್‌ ನಗರದ ಮರ್ಫಿಟೌನ್‌ ಜೈರಾಜ್‌ನಗರ ಲಕ್ಷ್ಮೀಪುರ ಲಾಲ್‌ ಬಹದ್ದೂರ್‌ ಶಾಸ್ತ್ರಿನಗರ ಇಂದಿರಾನಗರ ಹಳೆ ಬಿನ್ನಮಂಗಳ ಹೊಸ ಬಿನ್ನಮಂಗಳ ಎಚ್. ಕಾಲೊನಿ ಹಾಗೂ ಹಳೆ ತಿಪ್ಪಸಂದ್ರ ಹಾಗೂ ಶಿವಾಜಿನಗರದಲ್ಲಿ ಸಂಜೆ 4ರಿಂದ ರಾತ್ರಿ 8ಗಂಟೆವರೆಗೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ರಾಮಸ್ವಾಮಿ ವಾರ್ಡ್ ಎ.ಕೆ. ಕಾಲೊನಿ ಪೆಮ್ಮೆಗೌಡ ರಸ್ತೆ ಮಾರಪ್ಪ ಗಾರ್ಡನ್‌ ಶೇಷಾದ್ರಿ ರಸ್ತೆ ಚಿನ್ನಪ್ಪ ಗಾರ್ಡನ್‌ನ 1 2 ಮತ್ತು 4ನೇ ಮುಖ್ಯರಸ್ತೆಯಲ್ಲಿ ರೋಡ್‌ ಶೋ  ಮೂಲಕ ‘ಮತಬೇಟೆ’ ನಡೆಸಿದರು.

‘ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆ ಗಾಳಿ’

‘ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಮತದಾರರು ಕಾಂಗ್ರೆಸ್‌ಗೆ ಬೆಂಬಲಿಸುವ ಒಲವು ತೋರುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಈ ಚುನಾವಣೆಯಲ್ಲಿ ಕೈಹಿಡಿಯುವ ವಿಶ್ವಾಸವಿದೆ. ನಾನು ಸಂಸದನಾಗಿ ಆಯ್ಕೆಯಾದರೆ ನಮ್ಮ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಮನ್ಸೂರ್‌ ಅಲಿ ಖಾನ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT