ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಕರಡಿ ಸಂಗಣ್ಣ, ದಾಸರಹಳ್ಳಿ ಕೃಷ್ಣಮೂರ್ತಿ ಕಾಂಗ್ರೆಸ್‌ ಸೇರ್ಪಡೆ

Published 17 ಏಪ್ರಿಲ್ 2024, 6:57 IST
Last Updated 17 ಏಪ್ರಿಲ್ 2024, 6:57 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳದಲ್ಲಿ ಮತ್ತೆ ಕಣಕ್ಕಿಳಿಯಲು ಅವಕಾಶ ಸಿಗಲಿಲ್ಲವೆಂದು ಮುನಿಸಿಕೊಂಡು ಬಿಜೆಪಿ ಪ್ರಾಥಮಿಕ ಸದಸ್ಯತ್ವ ಮತ್ತು ಸಂಸದ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದ ಸಂಗಣ್ಣ ಕರಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್‌ ಸೇರಿದರು.

ಇದೇ ಸಂದರ್ಭದಲ್ಲಿ ಅರಕಲಗೂಡಿನ ನಿವೃತ್ತ ಐಎಎಸ್ ಅಧಿಕಾರಿ ಎ.ಎಸ್. ಪುಟ್ಟಸ್ವಾಮಿ, ರಾಜಾಜಿನಗರದ ಕೃಷ್ಣಮೂರ್ತಿ, ಮೂರು ಬಾರಿ ಶಾಸಕರಾಗಿದ್ದ ಶಿವಪುತ್ರ ಮಾಳಗಿ ಕೂಡ ಕಾಂಗ್ರೆಸ್‌ ಸೇರಿದರು. ಸಚಿವ ಶಿವರಾಜ್ ತಂಗಡಗಿ, ಶಾಸಕ ಲಕ್ಷ್ಮಣ ಸವದಿ ಇದ್ದರು.

ಕಾಂಗ್ರೆಸ್‌ ಸೇರಿದ ಬಳಿಕ ಮಾತನಾಡಿದ ಸಂಗಣ್ಣ, ‘ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಲು ಲಕ್ಷ್ಮಣ ಸವದಿ ಮೂಲ ಕಾರಣ. ನಾನು ವೈಯಕ್ತಿಕ ಅಧಿಕಾರಕ್ಕಾಗಿ ಕಾಂಗ್ರೆಸ್‌ಗೆ ಬಂದಿಲ್ಲ. ಈ ಪಕ್ಷದ ತತ್ವ, ಸಿದ್ಧಾಂತ ಮೆಚ್ಚಿ ಸೇರ್ಪಡೆ ಆಗಿದ್ದೇನೆ. ಕೊಪ್ಪಳದ ಕಾಂಗ್ರೆಸ್‌ ಅಭ್ಯರ್ಥಿ ರಾಜಶೇಖರ ಹಿಟ್ನಾಳ್​ ಅವರನ್ನು ಗೆಲ್ಲಿಸುವ ಸವಾಲನ್ನು ಎಲ್ಲರೂ ತೆಗೆದುಕೊಂಡಿದ್ದೇವೆ’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ಎಲ್‌. ಸಂತೋಷ್ ಎಂಬ ಎರಡು ಬಣವಿದೆ. ಯಡಿಯೂರಪ್ಪ ಅವರನ್ನು ಒಪ್ಪದವರಿಗೆ ಲೋಕಸಭೆ ಟಿಕೆಟ್ ತಪ್ಪಿಸಲಾಗಿದೆ’ ಎಂದು ಹೇಳಿದರು. 

‘ಕರಡಿ ಸಂಗಣ್ಣ ತಮ್ಮ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿದ್ದರು. ಒಳ್ಳೆಯ ಕೆಲಸ ಮಾಡಿದ್ದರು. ಹಾಗಿದ್ದರೂ ಬಿಜೆಪಿಯವರು ಅವರಿಗೆ ಏಕೆ ಟಿಕೆಟ್ ತಪ್ಪಿಸಿದರೆಂದು ಅರ್ಥ ಆಗಿಲ್ಲ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಗೆಲ್ಲುವ ವಿಶ್ವಾಸ ಬಿಜೆಪಿಯವರಿಗಿಲ್ಲ. ಅದಕ್ಕೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಿಸಿದ್ದಾರೆ’ ಎಂದರು.

ಡಿ.ಕೆ. ಶಿವಕುಮಾರ್‌ ಮಾತನಾಡಿ, ‘ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಗ್ಯಾರಂಟಿಗಳ ಅಲೆಯಿದೆ. ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಮುಟ್ಟುವುದು ಬಿಜೆಪಿ- ಜೆಡಿಎಸ್‌ ಹಣೆಯಲ್ಲಿ ಬರೆದಿಲ್ಲ’ ಎಂದರು.

‘ಕಾಂಗ್ರೆಸ್ ಪಕ್ಷದ ಮೇಲಿನ ಜನರ ಪ್ರೀತಿ ಕಂಡು ಬಿಜೆಪಿ, ಜೆಡಿಎಸ್‌ನವರಿಗೆ ಅಸೂಯೆ ಆಗಿದೆ. ಆದಕಾರಣ ನಮ್ಮ ತಾಯಂದಿರ ಬಗ್ಗೆ ಮಾತನಾಡುತ್ತಿದ್ದಾರೆ. ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿರುವ ಜೆಡಿಎಸ್‌ನವರಿಗೆ ರಾಜ್ಯದ ಜನ ಉತ್ತರ ನೀಡಲಿದ್ದಾರೆ’ ಎಂದರು.

ನಮ್ಮ ಆಂತರಿಕ ವರದಿ ಪ್ರಕಾರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 20 ಸ್ಥಾನ ಗೆಲ್ಲಲಿದೆ. ಸಂಗಣ್ಣ ಕರಡಿ ಪಕ್ಷಕ್ಕೆ ಬಂದ ಬಳಿಕ ಕೊಪ್ಪಳದಲ್ಲಿ ಇನ್ನಷ್ಟು ಶಕ್ತಿ ಬಂದಿದೆ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT