ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಬ್‌ ಇನ್‌ಸ್ಪೆಕ್ಟರ್‌ ಮೇಲೆ ಹಲ್ಲೆ: ರೌಡಿ ಅಪೇನ್ ಪೊಲೀಸರ ವಶಕ್ಕೆ

Last Updated 11 ಮಾರ್ಚ್ 2021, 22:04 IST
ಅಕ್ಷರ ಗಾತ್ರ

ಕೆಜಿಎಫ್‌: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಬಂದಿದ್ದ ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ರೌಡಿ ಅಪೇನ್ ಅಲಿಯಾಸ್ ಜ್ಞಾನೇಶ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌ ತಿಳಿಸಿದ್ದಾರೆ.

ಕಳೆದ ವಾರ ಸಬ್‌ ಇನ್‌ಸ್ಪೆಕ್ಟರ್ ಹರಿನಾಥ್‌ ಮತ್ತು ಸಿಬ್ಬಂದಿ ಆಂಡರಸನ್‌ಪೇಟೆಯಲ್ಲಿರುವ ಅಪೇನ್‌ ಮನೆಗೆ ನಡುರಾತ್ರಿ ದಾಳಿ ನಡೆಸಿದ್ದರು.

ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಪೇನ್ ಮತ್ತು ಲಾಲ್‌ ಎಂಬುವರು ಮಚ್ಚು ಮತ್ತು ದೊಣ್ಣೆಯಿಂದ ಸಬ್‌ ಇನ್‌ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕತ್ತಲು ಇದ್ದುದರಿಂದ ಅಧಿಕಾರಿಗೆ ಸರಿಯಾಗಿ ಏನು ಗೋಚರಿಸಲಿಲ್ಲ. ಆದರೂ ತಮ್ಮ ರಿವಾಲ್ವಾರ್‌ನಿಂದ ಗುಂಡು ಹಾರಿಸಿದ್ದಾರೆ. ಈ ಸಂಬಂಧ ಆಂಡರಸನ್‌ಪೇಟೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಯನ್ನು ಗುರುವಾರ ಮುಂಜಾನೆ ಬಂಧಿಸಿದ್ದಾರೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿ ಅಪೇನ್‌ ಮೇಲೆ ಕೆಂಪೇಗೌಡ ನಗರ, ಹೈಗ್ರೌಂಡ್ಸ್‌, ರಾಮಮೂರ್ತಿನಗರ, ಕೆ.ಆರ್‌. ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ. ಆಂಡರಸನ್‌ಪೇಟೆಯಲ್ಲಿ ಆತ ರೌಡಿಶೀಟರ್ ಆಗಿದ್ದು, 16 ಪ್ರಕರಣಗಳು ಆತನ ಮೇಲಿವೆ. ಮತ್ತೊಬ್ಬ ಆರೋಪಿ ಲಾಲ್‌ ಇನ್ನೂ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1,050 ಮಂದಿ ರೌಡಿ ಪಟ್ಟಿಯಲ್ಲಿದ್ದಾರೆ. ವಯಸ್ಸಾದವರು, ರೌಡಿ ಚಟುವಟಿಕೆಯನ್ನು ಬಹಳ ವರ್ಷಗಳ ಕಾಲ ಮಾಡದವರು, ಒಳ್ಳೆಯ ನಡೆತೆ ಹೊಂದಿದವರನ್ನು ರೌಡಿಶೀಟರ್‌ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ನಿಗಾ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ವರ್ತಿಸುವವರಿಗೆ ಎಚ್ಚರಿಕೆ ಕೊಟ್ಟು ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ತಿಳಿಸಿದರು.

ಡಿವೈಎಸ್ಪಿ ಬಿ.ಕೆ.ಉಮೇಶ್‌ ಹಾಜರಿದ್ದರು.

ವಿನಾಕಾರಣ ಸುಳ್ಳು ದೂರು: ಆರೋಪ
ಅಪೇನ್‌ನನ್ನು ಹುಡುಕಲು ವಿಶೇಷ ತಂಡಗಳನ್ನು ರಚಿಸಲಾಗಿತ್ತು.ತಂಡ ತಮಿಳುನಾಡಿನ ಬಹಳಷ್ಟು ಕಡೆ ಹುಡುಕಾಟ ನಡೆಸಿತ್ತು.

ಆದರೆ, ಗುರುವಾರ ಮುಂಜಾನೆ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಅಪೇನ್‌, ‘ಪೊಲೀಸರ ಮುಂದೆ ಶರಣಾಗಲು ಎಸ್‌ಪಿ ಕಚೇರಿಗೆ ಹೋಗುತ್ತಿದ್ದೇನೆ. ನನಗೆ ಮತ್ತು ಮಕ್ಕಳಿಗೆ ಏನೂ ಆಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಮಾನವ ಹಕ್ಕು ಸಂಘಟನೆ ಮೂಲಕ ಶರಣಾಗುತ್ತಿದ್ದೇನೆ. ಪೊಲೀಸರು ವಿನಾಕಾರಣ ನನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾರೆ. ಬಾಯಿಗೆ ರಿವಾಲ್ವಾರ್ ಇಟ್ಟು ಒಂದು ಕೆಜಿ ಚಿನ್ನ ಕೊಡು ಎಂದು ಕೇಳಿದರೆ ನಾನೆಲ್ಲಿ ಕೊಡಲಿ. ಆದ್ದರಿಂದ ಓಡಿಹೋದೆ’ ಎಂದು ಹೇಳಿದ್ದಾನೆ.

ಬೆಳಿಗ್ಗೆ ಕಚೇರಿ ಸಮಯಕ್ಕೆ ಸಂಘಟನೆಯ ಶಶಿಕುಮಾರ್ ಎಂಬುವರ ಜೊತೆಯಲ್ಲಿ ಎಸ್‌ಪಿ ಕಚೇರಿಗೆ ತೆರಳಿ, ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT