ಶನಿವಾರ, ನವೆಂಬರ್ 28, 2020
25 °C
ರಸ್ತೆ ಮೇಲೆ ಕೊಳಚೆ ನೀರು * ಸ್ಥಳಕ್ಕೆ ಪಂಚಾಯಿತಿ ಅಧಿಕಾರಿಗಳ ಭೇಟಿ

ವರದಿ ಫಲಶ್ರುತಿ: ತೆರವಾಯಿತು ಕಸದ ರಾಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಹಾಲಕ್ಷ್ಮಿ ಎನ್‌ಕ್ಲೇವ್‌ ಬಡಾವಣೆಯ ಮುಖ್ಯರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿರುವ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಬಿಬಿಎಂಪಿಯ 130ನೇ ವಾರ್ಡ್‌ ವ್ಯಾಪ್ತಿಯಲ್ಲಿನ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನೈಸ್‌ ರಸ್ತೆ ಬಳಿಯ ಮಾರ್ಗದುದ್ದಕ್ಕೂ ಕಸ ಬಿದ್ದಿದ್ದ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳೂ ಭೇಟಿ ನೀಡಿ, ಕಸ ವಿಲೇವಾರಿಗೆ ಕ್ರಮ ಕೈಗೊಂಡರು. ರಸ್ತೆಯುದ್ದಕ್ಕೂ ಬಿದ್ದಿದ್ದ ಕಸವನ್ನು ತೆಗೆಯಲಾಯಿತು.

‘ಹೊಳೆಯಂತೆ ಹರಿಯುತ್ತದೆ ಕೊಳಚೆ ನೀರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ (ನ.8) ಈ ಬಗ್ಗೆ ವರದಿ ಪ್ರಕಟವಾಗಿತ್ತು.

‘ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಪೌರ ಕಾರ್ಮಿಕರು ಮನೆ, ಮನೆಗೆ ತೆರಳಿ ಕಸ ಸಂಗ್ರಹಿಸುತ್ತಿದ್ದಾರೆ. ನೈಸ್‌ ರಸ್ತೆಯ ಬಳಿ ಅನಧಿಕೃತವಾಗಿ ಕಸವನ್ನು ತಂದು ಸುರಿಯಲಾಗುತ್ತಿದೆ. ಅದರಲ್ಲಿ ಕುರಿ, ಕೋಳಿ ಮಾಂಸದ ತ್ಯಾಜ್ಯವೂ ಇರುತ್ತದೆ. ಮಿಟಗಾನಹಳ್ಳಿಯಲ್ಲಿ ವಿಲೇವಾರಿ ಮಾಡಲು ಹೋದರೆ, ವಾಣಿಜ್ಯ ತ್ಯಾಜ್ಯ ತಂದಿದ್ದೀರಿ ಎಂದು ಆಕ್ಷೇಪ ವ್ಯಕ್ತಪಡಿಸುತ್ತಾರೆ’ ಎಂದು ಬಿಬಿಎಂಪಿ ಕೆಂಗೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೂರ್ಣಿಮಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಲ್ಲಿ ಜನ ಸಂಚಾರ ವಿರಳವಾಗಿರುವುರಿಂದ ಹೇಳುವವರು–ಕೇಳುವವರು ಯಾರೂ ಇಲ್ಲದಂತಾಗಿದೆ. ಅಲ್ಲದೆ, ಪೌರಕಾರ್ಮಿಕರಿಂದ ನೇರವಾಗಿ ಮಾಂಸದ ತ್ಯಾಜ್ಯ ತೆಗೆಸಲು ಆಗುವುದಿಲ್ಲ. ಯಂತ್ರಗಳ ಸಹಾಯದಿಂದಲೇ ಈ ಕೆಲಸ ಮಾಡಿಸಬೇಕಾಗುತ್ತದೆ. ಆದರೂ, ವಾರಕ್ಕೆ ಒಮ್ಮೆ ಈ ರಸ್ತೆಯಲ್ಲಿನ ಕಸ ತೆಗೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ಕಂಪನಿಗೆ ಪತ್ರ: ನೈಸ್‌ ರಸ್ತೆ ಕೆಳಸೇತುವೆ ಮೂಲಕ ಹಾದು ಹೋಗುವ ರಸ್ತೆಯ ಮೇಲೆ ಕೊಳಚೆ ನೀರು ಹರಿಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭಾಗೀರಥಿ, ಸ್ಥಳೀಯರೊಂದಿಗೆ ಮಾತನಾಡಿದರು.

‘ನೈಸ್‌ ಕಂಪನಿ ಕಚೇರಿಯ ಕಾಂಪೌಂಡ್‌ ಒಳಗಿನಿಂದ ಕೊಳಚೆ ನೀರು ಹರಿದು ಬರುತ್ತಿತ್ತು. ಈ ಹಿಂದೆಯೂ ಕಂಪನಿಗೆ ನೋಟಿಸ್ ನೀಡಲಾಗಿತ್ತು. ಪಕ್ಕದ ಕೆರೆಯ ನೀರು ಯಾವಾಗ ಕೋಡಿ ತುಂಬಿ ಹರಿಯುತ್ತದೆಯೋ ಅದರೊಂದಿಗೆ ಕೊಳಚೆ ನೀರು ಕೂಡ ಸೇರಿಕೊಂಡು ಈ ಮಾರ್ಗದಲ್ಲಿ ಹರಿಯುತ್ತದೆ’ ಎಂದು ಪಿಡಿಒ ಹೇಳಿದರು.

‘ಮುಂದೆ ಕೊಳಚೆ ನೀರು ಹರಿಯಬಿಡಬಾರದು. ಅದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನೈಸ್‌ ಕಂಪನಿಗೆ ಮತ್ತೆ ಪತ್ರ ಬರೆಯಲಾಗುವುದು. ನಿಯಮಿತವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು