ಸೋಮವಾರ, ಏಪ್ರಿಲ್ 6, 2020
19 °C

ಧರ್ಮದಿಂದ ಅಜ್ಞಾನ ದೂರ: ಡಾ.ಡಿ.ವೀರೇಂದ್ರ ಹೆಗ್ಗಡೆ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ವಿಜ್ಞಾನದಂತೆಯೇ ಧರ್ಮಕ್ಕೂ ಅಜ್ಞಾನವನ್ನು ದೂರ ಮಾಡುವ ಶಕ್ತಿಯಿದೆ. ಇದರ ಆಶಯ ಹೊಂದಿರುವ ಗ್ರಂಥಗಳನ್ನು ಆರಾಧನೆ ಮಾಡುವ ಬದಲು ಪ್ರಸಾರ ನಡೆಸಬೇಕು’ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಪಂಡಿತರತ್ನ ಎ.ಶಾಂತಿರಾಜಶಾಸ್ತ್ರಿ ಟ್ರಸ್ಟ್‌ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಇಂಗ್ಲಿಷ್‌ಗೆ ಭಾಷಾಂತರ ಮಾಡಿರುವ ‘ಮಹಾಪುರಾಣ’ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಸ್ಕೃತದಲ್ಲಿರುವ ಈ ಗ್ರಂಥವನ್ನು ಕನ್ನಡಕ್ಕೆ ಪಂಡಿತರತ್ನ ಎರ್ತೂರು ಶಾಂತಿರಾಜಶಾಸ್ತ್ರಿ ಅನುವಾದಿಸಿದ್ದರು. 

‘ಧರ್ಮ ವೈಜ್ಞಾನಿಕವಲ್ಲ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಇದನ್ನು ಮಠಗಳು ಹೋಗಲಾಡಿಸುವ ಕೆಲಸವನ್ನು ಮಾಡುತ್ತಿವೆ. ಧರ್ಮದ ಸಾರವನ್ನು ಒಳಗೊಂಡಿರುವ ಗ್ರಂಥಗಳು ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳನ್ನು ತಲುಪಬೇಕು. ಮಹಾಪುರಾಣದಂತಹ ಗ್ರಂಥಗಳು ಪಾರಮಾರ್ಥಿಕ ಜೀವನ ಮತ್ತು ಲೌಕಿಕ ಜೀವನಕ್ಕೆ ಬೇಕಾದ ಮಾಹಿತಿಗಳನ್ನು ಒದಗಿಸುತ್ತವೆ’ ಎಂದು ಹೆಗ್ಗಡೆ ಅಭಿಪ್ರಾಯಪಟ್ಟರು.

‘ವೇದದಲ್ಲಿ ಬರುವ ಆಕಾಶಯಾನವು ವಿಮಾನ ಹಾರಾಟದ ಮೂಲತತ್ವವನ್ನು ವಿವರಿಸುತ್ತದೆ. ಇದೇ ರೀತಿ, ಹಲವು ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ಆಧುನಿಕ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಲಾಗಿದೆ. ವಿದ್ವಾಂಸರು ಮರೆಯಾಗುತ್ತಿರುವ ಕಾಲದಲ್ಲಿ ಜ್ಞಾನವನ್ನು ಗ್ರಂಥಗಳ ಮೂಲಕ ಸಂಗ್ರಹಿಸಬೇಕಾಗಿದೆ’ ಎಂದರು. 

ವಿದ್ವಾಂಸ ಡಾ. ಶಾಂತಿನಾಥ ದಿಬ್ಬದ, ‘ಜೈನರ ಪಾಲಿಗೆ ಮಹಾಪುರಾಣ ಸರ್ವಸ್ವ. ಅದರಲ್ಲಿ ಇತಿಹಾಸ, ಪುರಾಣ, ಶಾಸ್ತ್ರ ಸೇರಿದಂತೆ ಎಲ್ಲ ಸಂಗತಿಗಳೂ ಅಡಕವಾಗಿವೆ. ಪುರಾಣ ಗ್ರಂಥಗಳಲ್ಲಿ ರಾಮಾಯಣ ಮತ್ತು ಮಹಾಭಾರತ ವಿಶ್ವ ಮಟ್ಟದಲ್ಲಿ ಹೆಸರು ಮಾಡಿವೆ. ಅದಕ್ಕೆ ಸಮಾನವಾದದ್ದು ಮಹಾಪುರಾಣ. ಇದರಲ್ಲಿ ನಾಲ್ಕು ತಲೆಮಾರು ವಿದ್ವಾಂಸರ ಸಾಧನೆ ಅಡಗಿದೆ’ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಮನ್ನಣೆ: ‘ಮಹಾಪುರಾಣವು ಸುಮಾರು 20 ಸಾವಿರ ಶ್ಲೋಕಗಳನ್ನು ಒಳಗೊಂಡಿದ್ದು, ಈ ಮಹಾಗ್ರಂಥವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿವುದರಿಂದ ಅಂತರರಾಷ್ಟ್ರೀಯ ಮನ್ನಣೆ ಪ್ರಾಪ್ತಿಯಾಗಲಿದೆ. ಕೆಲ ವರ್ಷಗಳಿಂದ ಇಂಗ್ಲಿಷ್‌ ಭಾಷೆಗೆ ಭಾಷಾಂತರಿಸುವ ಪ್ರಯತ್ನವನ್ನು ಕೆಲ ವಿದ್ವಾಂಸರು ಮಾಡಿದ್ದರು. ಆದರೆ, ಅದು ಸಾಕಾರವಾಗಿರಲಿಲ್ಲ. ರಾಜನೀತಿಯನ್ನೂ ಹೇಳುವ ಈ ಗ್ರಂಥದಲ್ಲಿ ಎಲ್ಲ ವಿಷಯಗಳೂ ಚರ್ಚೆಯಾಗಿದ್ದು, ಸಮಾಜವನ್ನು ಕಾಡುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು’ ಎಂದರು. 

ಅನುವಾದಕ ಪ್ರೊ.ಕೆ.ಈ. ರಾಧಾಕೃಷ್ಣ, ‘ಆದಿ ಕವಿ ಪಂಪನಿಂದ ಕುಮಾರವ್ಯಾಸ ಸೇರಿದಂತೆ ಸಾಹಿತ್ಯ ಕೃಷಿ ಮಾಡಿದ ಪ್ರತಿಯೊಬ್ಬರ ಮೇಲೆಯೂ ಮಹಾಪುರಾಣ ಪ್ರಭಾವ ಬೀರಿದೆ. ಇದರಲ್ಲಿ ಧರ್ಮ ಮತ್ತು ಕವಿತೆಯಿದೆ. ಸಂಸ್ಕೃತದ ಈ ಕೃತಿಯನ್ನು ಇಂಗ್ಲಿಷ್‌ಗೆ ತರುವುದು ಕಷ್ಟದ ಕೆಲಸವಾಗಿತ್ತು. ಈ ಸವಾಲನ್ನು ನಾನು ಸ್ವೀಕರಿಸಿ, ಅನುವಾದ ಮಾಡಿದೆ. ಇದರಿಂದ ನನ್ನ ಬದುಕಿಗೆ ಸಾರ್ಥಕತೆ ಬಂದಂತಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು. 

ಪುಸ್ತಕ ಪರಿಚಯ 
ಗ್ರಂಥ:
ಮಹಾಪುರಾಣ
ಭಾಷೆ: ಇಂಗ್ಲಿಷ್
ಅನುವಾದಕ: ಪ್ರೊ.ಕೆ.ಈ. ರಾಧಾಕೃಷ್ಣ
ಪುಟಗಳು: 5,500
ಸಂಪುಟಗಳು: 7
ಬೆಲೆ: ₹ 9 ಸಾವಿರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು