ಶುಕ್ರವಾರ, ಮಾರ್ಚ್ 5, 2021
17 °C
ತಗ್ಗು ಪ್ರದೇಶಗಳಿಂದ ಸುರಕ್ಷಿತ ತಾಣಗಳಿಗೆ ಜನರ ಸ್ಥಳಾಂತರ; ಹಾಸನ, ಕೊಡಗು ಭಾಗದಲ್ಲಿಯೂ ಮಳೆ– ಅಸ್ತವ್ಯಸ್ತ

‘ಮಹಾ’ ಪ್ರವಾಹ: ಉತ್ತರ ಕರ್ನಾಟಕ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ರಾಜ್ಯದ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದ್ದು, ಜನಜೀವನ ತತ್ತರವಾಗಿದೆ.

ದಕ್ಷಿಣ ಕರ್ನಾಟಕದ ಕೊಡಗು, ಹಾಸನ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಧಾರಾಕಾರ ಮಳೆ ಆಗಿದ್ದು, ಜನಜೀವನ ದುಸ್ತರವಾಗಿದೆ.

ಹುಬ್ಬಳ್ಳಿ ವರದಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಹುಲಗಬಾಳಿ ಬಳಿ ಕೃಷ್ಣಾ ನದಿಯಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದಾರೆ. ಪ್ರವಾಹ
ದಿಂದಾಗಿ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಜನಜೀವನ ಏರುಪೇರಾಗಿದೆ.

ರಾಜಾಪುರ ಬ್ಯಾರೆಜ್‌ನಿಂದ 2,27,068 ಕ್ಯುಸೆಕ್‌, ದೂಧ್‌ಗಂಗಾ ನದಿಯಿಂದ 37,312 ಕ್ಯುಸೆಕ್‌ ನೀರು ಬರುತ್ತಿದೆ. ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾಗೆ ಒಟ್ಟು 2,64,380 ಕ್ಯುಸೆಕ್‌ ನೀರು ಬಂದು ಸೇರುತ್ತಿದೆ.

ಗೋವಾ ಸಂಪರ್ಕ ಕಡಿತ: ಬೆಳಗಾವಿ ಜಿಲ್ಲೆ ಜಾಂಬೋಟಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶಿಥಿಲಗೊಂಡಿದೆ. ಹೀಗಾಗಿ ಗೋವಾಕ್ಕೆ ತೆರಳುವ ಚೋರ್ಲಾ- ಬೆಳಗಾವಿ ರಾಜ್ಯ ಹೆದ್ದಾರಿ ಸಂಪರ್ಕವನ್ನು ಜಿಲ್ಲಾಡಳಿತ ಕಡಿತಗೊಳಿಸಿದೆ.
ಆಲಮಟ್ಟಿಯಲ್ಲಿ ಒಳಹರಿವು ಹೆಚ್ಚಿದೆ. ಜಲಾಶಯದ 3.03 ಲಕ್ಷ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ 2.90 ಲಕ್ಷ ಕ್ಯುಸೆಕ್ ನೀರು ನದಿಗೆ ಬಿಟ್ಟಿದ್ದು, ಅಪಾಯದಲ್ಲಿರುವ 21 ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕೊಡಚಳ್ಳಿ ಕದ್ರಾ ಅಣೆಕಟ್ಟೆಯಿಂದ 10 ಗೇಟ್‌ಗಳನ್ನು ತೆರೆಯಲಾಗಿದ್ದು, ಕಾಳೀನದಿಗೆ ಒಂದು ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತದೆ. ಶಿರಸಿ ಮಾರಿಕಾಂಬಾ ದೇಗುಲದ ಪಕ್ಕದಲ್ಲಿರುವ ಧರ್ಮಛತ್ರದ ಶಿಥಿಲಾವಸ್ಥೆಯ ಗೋಡೆ ಕುಸಿದು ಬಿದ್ದು, ಕಾರೊಂದು ಜಖಂಗೊಂಡಿದೆ.

ಹೆದ್ದಾರಿ ಜಲಾವೃತ: ಬಾಗಲಕೋಟೆ ಜಮಖಂಡಿ ಬಳಿ ವಿಜಯಪುರ– ಧಾರವಾಡ ರಾಜ್ಯ ಹೆದ್ದಾರಿಯಲ್ಲಿ ನೀರು ನಿಂತಿದ್ದು, ಸಂಚಾರ ಸ್ಥಗಿತಗೊಂಡಿದೆ. ಈ ಮಾರ್ಗದಲ್ಲಿ ಸೋಮವಾರದಿಂದ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ.

ಶಾಲೆಗಳಿಗೆ ರಜೆ: ರಾಮದುರ್ಗ ತಾಲ್ಲೂಕು ಹೊರತುಪಡಿಸಿ, ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಲ್ಲ ಶಾಲೆಗಳಿಗೆ ಎರಡು ದಿನ (ಆ.7, 8) ರಜೆ ಘೋಷಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಹಳಿಯಾಳ, ದಾಂಡೇಲಿ ಹೊರತುಪಡಿಸಿ ಎಲ್ಲ ತಾಲ್ಲೂಕುಗಳಲ್ಲಿ ಮಂಗಳವಾರ ರಜೆ‌ ಘೋಷಿಸಲಾಗಿದೆ.

ಕೆಆರ್‌ಎಸ್‌ ಹೆಚ್ಚಳ

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಕಾರಣ ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಹರಿವಿನ ಪ್ರಮಾಣದಲ್ಲಿ ಕೊಂಚ ಹೆಚ್ಚಳವಾಗಿದೆ. 

ಸೋಮವಾರ ಸಂಜೆ ಜಲಾಶಯದ ನೀರಿನ ಮಟ್ಟ 83.45 ಅಡಿ ಇತ್ತು. ಒಳಹರಿವು 8,344 ಕ್ಯುಸೆಕ್‌ ಇದ್ದರೆ, 6,529 ಕ್ಯುಸೆಕ್‌ ಹೊರಹರಿವು ಇತ್ತು. ನಾಲೆಗಳಿಗೆ ಹರಿಯುತ್ತಿದ್ದ ನೀರು ಸ್ಥಗಿತ ಗೊಂಡಿದ್ದು, ನದಿಗೆ ಹರಿಯುತ್ತಿದೆ.

ಹಾಸನ ವರದಿ: ಹಾಸನ ಜಿಲ್ಲೆಯಾದ್ಯಂತ ಮುಂಗಾರು ಚುರುಕುಗೊಂಡಿದೆ. ಭಾನುವಾರ ಸಂಜೆಯಿಂದ 24 ಗಂಟೆಯಲ್ಲಿ ಸಕಲೇಶಪುರ ತಾಲ್ಲೂಕಿನಲ್ಲಿ ಸರಾಸರಿ 100 ಮಿ.ಮೀ ಮಳೆಯಾಗಿದೆ.

ಸಕಲೇಶಪುರ ತಾಲ್ಲೂಕಿನ ಹೆತ್ತೂರು, ಯಸಳೂರು ಹಾಗೂ ಕಸಬಾ ಹೋಬಳಿಯಲ್ಲಿ 120 ಮಿ.ಮೀ, ಬೆಳಗೋಡು ಹೋಬಳಿ ವ್ಯಾಪ್ತಿಯಲ್ಲಿ 60 ಮಿ.ಮೀ ಮಳೆಯಾಗಿದೆ. ಅರಕಲಗೂಡು, ಬೇಲೂರು, ಆಲೂರು ತಾಲ್ಲೂಕು, ಹಾಸನ ನಗರ, ಕೊಣನೂರು ಭಾಗದಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ.

ವರುಣನ ಅಬ್ಬರ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಹೆಚ್ಚಿದ್ದು, ಸೋಮವಾರ ಮೂಡಿಗೆರೆಯಲ್ಲಿ ಮನೆ ಕುಸಿದಿದೆ. ಕೊಟ್ಟಿಗೆಹಾರದಲ್ಲಿ 156 ಮಿ.ಮೀ ಮಳೆಯಾಗಿದೆ.

ಚಾರ್ಮಾಡಿ ಘಾಟಿಯ ಆಲೇಖಾನ್‌ ಹೊರಟ್ಟಿ ಗ್ರಾಮದ ಗುಡ್ಡದ ಕಲ್ಲುಮಣ್ಣು ಮತ್ತೆ ರಸ್ತೆಗೆ ಕುಸಿದಿದೆ. ಕೊಪ್ಪ ತಾಲ್ಲೂಕಿನ ಕಸಬಾ ಹೋಬಳಿಯ ಅಮ್ಮಡಿ ಬಳಿಯ ಕಾಫಿತೋಟದ ಮರ ಹೆದ್ದಾರಿಗೆ ಉರುಳಿತು. ದೊರಗಲ್‌ ಸಮೀಪ ಕೆಮ್ಮಣ್ಣುಗುಂಡಿ ಕೆರೆ ಏರಿ ಕುಸಿದಿದೆ. ಶೃಂಗೇರಿ ತಾಲ್ಲೂಕಿನಲ್ಲಿ ವಿದ್ಯುತ್‌ ಕಂಬಗಳು ಉರುಳಿವೆ.

ಕರಾವಳಿಯಲ್ಲೂ ಮಳೆ ಬಿರುಸು

ಮಂಗಳೂರು ವರದಿ: ಭಾನುವಾರ ಸಂಜೆಯಿಂದ ಕರಾವಳಿಯಲ್ಲೂ ಮಳೆ ಬಿರುಸಾಗಿದೆ. ಮಧ್ಯರಾತ್ರಿಯಿಂದ ಬೆಳಿಗ್ಗೆವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಆಗಿದೆ. ಮಂಗಳೂರು ನಗರ, ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯದಲ್ಲಿ ಹೆಚ್ಚಿನ ಮಳೆಯಾಗಿದೆ. ನದಿಗಳಲ್ಲಿ ನೀರಿನ ಹರಿವು ಏರಿದೆ. ಉಡುಪಿ ಜಿಲ್ಲೆಯಲ್ಲಿ ಜಿಟಿಜಿಟಿ ಮಳೆ ಇತ್ತು.

ಹೆಚ್ಚಿದ ಆತಂಕ

ರಾಯಚೂರು/ಯಾದಗಿರಿ: ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಹೆಚ್ಚಿಸಲಾಗುತ್ತಿದ್ದು, ಸೋಮವಾರದಿಂದ 3 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಯಾದಗಿರಿ ಜಿಲ್ಲೆಯ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿದ್ದು, ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲೆಗಳ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದ ವಾಹನಗಳು ತಿಂಥಿಣಿ ಸೇತುವೆ ಮೂಲಕ 45 ಕಿ.ಮೀ. ಹೆಚ್ಚುವರಿ ದೂರ ಕ್ರಮಿಸಬೇಕಾಗಿದೆ.

ಹುಣಸಗಿ ತಾಲ್ಲೂಕಿನ ಛಾಯಾ ಭಗವತಿ ದೇವಸ್ಥಾನ ಭಾಗಶಃ ಮುಳುದೆ ನದಿತೀರದಲ್ಲಿನ ಲಿಂಗಸುಗೂರು ತಾಲ್ಲೂಕಿನ 24 , ದೇವದುರ್ಗ ತಾಲ್ಲೂಕಿನ 39 ಮತ್ತು ರಾಯಚೂರು ತಾಲ್ಲೂಕಿನ 20 ಹಳ್ಳಿಗಳಲ್ಲಿ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಲಿಂಗಸುಗೂರು ತಾಲ್ಲೂಕಿನ ಓಂಕಾರಗಡ್ಡಿ ನಡುಗಡ್ಡೆಯ ಐವರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದವರು (ಎನ್‌ಡಿಆರ್‌ಎಫ್‌) ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ದೇವದುರ್ಗ ತಾಲ್ಲೂಕಿನ ಮ್ಯಾದಾರಗೋಳ ಗ್ರಾಮದ 12 ಕುಟುಂಬಗಳನ್ನು ಹಾಗೂ ಗೂಗಲ್‌ ಸೇತುವೆ ಬಳಿಯ ಮೀನುಗಾರರ ಮೂರು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಲಿಂಗಸುಗೂರು ತಾಲ್ಲೂಕಿನ ಹಾರಲಗಡ್ಡಿ, ಯರಗೋಡಿ, ರಾಯಚೂರು ತಾಲ್ಲೂಕಿನ ಕುರ್ವಕಲಾ, ಅಗ್ರಹಾರ ಮತ್ತು ಕುರ್ವಕುರ್ದಾ ನಡುಗಡ್ಡೆಗಳ ಜನರಿಗೆ ಆಹಾರ ಧಾನ್ಯ ಪೂರೈಸಲಾಗುತ್ತಿದೆ. ಆದಾಗ್ಯೂ, ಕೆಲ ನಡುಗಡ್ಡೆಯ ಜನ ತೆಪ್ಪದಲ್ಲಿ ಸಂಚರಿಸುತ್ತಿದ್ದಾರೆ. ಕೃಷ್ಣಾ ನದಿ ತುಂಬಿ ಹರಿಯುತ್ತಿದ್ದರೂ ರಾಯಚೂರು ಜಿಲ್ಲೆಯಲ್ಲಿ ಮಳೆ ಇಲ್ಲ. ಕಲಬುರ್ಗಿ ನಗರದಲ್ಲಿ ಉತ್ತಮ ಹಾಗೂ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಯಿತು. ಬೀದರ್‌ ನಗರ, ಔರಾದ್‌, ಹುಮನಾಬಾದ್‌, ಭಾಲ್ಕಿ ಹಾಗೂ ಬಸವಕಲ್ಯಾಣ ತಾಲ್ಲೂಕುಗಳಲ್ಲಿಯೂ ತುಂತುರು ಸುರಿದಿದೆ. ಯಾದಗಿರಿ, ಗುರುಮಠಕಲ್‌ ಹಾಗೂ ಸುತ್ತಲಿನ ಹಳ್ಳಿಗಳಲ್ಲೂ ಮಳೆಯಾಗಿದೆ.

ವೃದ್ಧರ ರಕ್ಷಣೆ

ರಾಯಚೂರು: ತಾಲ್ಲೂಕಿನ ಕೊರ್ತಕುಂದಾ ಗ್ರಾಮದ ಕೃಷ್ಣಾನದಿ ತೀರದ ನಡುಗಡ್ಡೆ ರಾಮಗಡ್ಡಿಯ ದೇವಸ್ಥಾನದಲ್ಲಿ ಉಳಿದುಕೊಂಡಿದ್ದ ಕೊರ್ತಕುಂದಾ ಗ್ರಾಮದ ನಿವಾಸಿ ಅಣ್ಣರಾವ್ (65) ಅವರನ್ನು ಎನ್‌ಡಿಆರ್‌ಎಫ್‌ ತಂಡ ಸೋಮವಾರ ರಕ್ಷಿಸಿದೆ.

ನಡುಗಡ್ಡೆಯಲ್ಲಿ ದೇವಸ್ಥಾನ ಮಾತ್ರ ಇದ್ದು, ಸೋಮವಾರ ಬೆಳಿಗ್ಗೆ ಪೂಜೆಗಾಗಿ ತೆರಳಿದ್ದರು. ಏಕಾಏಕಿ ಪ್ರವಾಹ ಬಂದಿದೆ. ಕುಗ್ಗ ಬಹುದು ಎಂದು ಕಾದು ಕುಳಿತಿದ್ದರು. ದೇವಸ್ಥಾನದಲ್ಲಿ ಯಾರಾದರೂ ಇರಬಹುದು ಎಂದು ಅಂದಾಜಿಸಿ ತಂಡವು ಅಲ್ಲಿಗೆ ಹೋಗಿತ್ತು.
ಲಿಂಗನಮಕ್ಕಿಗೆ ದಿನದಲ್ಲಿ 3 ಅಡಿ ನೀರು: ಶಿವಮೊಗ್ಗ ನಗರ ಸೇರಿ ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರ ಮಳೆಯಾಗಿದ್ದು, ಲಿಂಗನ
ಮಕ್ಕಿ ಅಣೆಕಟ್ಟಿಗೆ ಒಂದೇ ದಿನದಲ್ಲಿ 3 ಅಡಿ ನೀರು ಹರಿದುಬಂದಿದೆ.

ಕೊಡಗು ರಾಜ್ಯ ಹೆದ್ದಾರಿ ಬಂದ್‌

ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೇರಳಕ್ಕೆ ಸಂಪರ್ಕ ಕಲ್ಪಿಸುವ ಪೆರುಂಬಾಡಿ – ಮಾಕುಟ್ಟ ಅಂತರ ರಾಜ್ಯ ಹೆದ್ದಾರಿಯ ವಾಟೆಕೊಲ್ಲಿ ಎಂಬಲ್ಲಿ ರಸ್ತೆ ಕುಸಿದು ವಾಹನ ಸಂಚಾರ ಬಂದ್‌ ಆಗಿದೆ.

ದಕ್ಷಿಣ ಕೊಡಗು ಭಾಗದಲ್ಲಿ ಭಾರಿ ಮಳೆ ಸುರಿದಿದೆ. ಪೆರುಂಬಾಡಿ ಚೆಕ್‌ಪೋಸ್ಟ್‌ನಿಂದ ಮಾಕುಟ್ಟ ಚೆಕ್‌ಪೋಸ್ಟ್‌ ತನಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಮೂಲಕ ಕೇರಳಕ್ಕೆ ವಾಹನಗಳು ಸಂಚರಿಸುತ್ತಿವೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್‌, ‘ಎಂ–ಸ್ಯಾಂಡ್‌ ಚೀಲ ಬಳಸಿ ತಾತ್ಕಾಲಿಕ ರಸ್ತೆ ನಿರ್ಮಿಸಿ, ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಅನುವು ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕೊಡಗಿನಲ್ಲಿ ಮತ್ತೆ ಮಹಾಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ‘ರೆಡ್‌ ಅಲರ್ಟ್‌’ ಘೋಷಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು