ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 40 ಕಮಿಷನ್‌ ಆಸೆಗೆ ರಸ್ತೆಗಳಿಗೆ ಮೇಕಪ್‌ : ಶಂಕರ್ ಗುಹಾ

ಬಸವನಗುಡಿಯ ರಸ್ತೆಗಳ ಗುಂಡಿಗಳಿಗೆ ಬಣ್ಣ ಬಳಿದು ಗಮನ ಸೆಳೆದ ಶಂಕರ್ ಗುಹಾ
Published 2 ಮೇ 2023, 21:04 IST
Last Updated 2 ಮೇ 2023, 21:04 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶೇ 40ರಷ್ಟು ಕಮಿಷನ್‌ ಆಸೆಗಾಗಿ ಬಸವನಗುಡಿಯ ರಸ್ತೆಗಳಿಗೆ ತರಾತುರಿಯಲ್ಲಿ ಡಾಂಬರ್ ಹಾಕಿ ಮೇಕಪ್‌ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ವಕ್ತಾರ ಶಂಕರ್‌ ಗುಹಾ ಆರೋಪಿಸಿದರು.

‘ಬಸವನಗುಡಿಯಲ್ಲಿ ರಸ್ತೆ ದುರಸ್ತಿ ನೆಪದಲ್ಲಿ ರಸ್ತೆಗೆ ಡಾಂಬರ ಹೊದಿಕೆ ಮಾತ್ರ ಹಾಕಲಾಗುತ್ತಿದೆ. ರಸ್ತೆ ಉತ್ತಮವಾಗಿದೆ ಎಂದುಕೊಂಡು ಮುಂದೆ ಹೋದರೆ ಯೊಗುಂಡಿಯಲ್ಲಿ ಬೀಳುವುದು ಖಚಿತ. ಇದು ವಾಹನ ಸವಾರರ ಸಂಚಾರಕ್ಕೆ ಸಂಚಕಾರ ತಂದಿವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಪ್ರತಿಬಾರಿ ಮಳೆ ಬಂದಾಗ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿನ ಮ್ಯಾನ್‌ಹೋಲ್ ಪಕ್ಕದಲ್ಲಿ ಗುಂಡಿಗಳು ಉದ್ಭವವಾಗುತ್ತಿವೆ. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಈ ರೀತಿ ಕಳಪೆ ಕಾಮಗಾರಿಗಳು ನಡೆದಿದೆ. ಅಧಿಕಾರಿಗಳು ಸಾರ್ವಜನಿಕರ ಹಿತ ದೃಷ್ಟಿಯಿಂದ ಕೆಲಸವನ್ನು ಮಾಡಬೇಕೆ ಹೊರತು ಸ್ಥಳೀಯ ಶಾಸಕರನ್ನು ತೃಪ್ತಿಪಡಿಸಲು ಕೆಲಸ ಮಾಡುವುದಲ್ಲ’ ಎಂದು ಕಿಡಿಕಾರಿದ್ದಾರೆ.

‘ಈ ಹಿಂದೆಯೇ ಬಸವನಗುಡಿಯ ರಸ್ತೆಯಲ್ಲಿನ ಗುಂಡಿಗಳ ಕುರಿತು ವಿಡಿಯೊ ಮಾಡಲಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಅದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಈಗ ಅದರ ಪಕ್ಕದಲ್ಲಿಯೇ ಮತ್ತೆ ಗುಂಡಿ ನಿರ್ಮಾಣವಾಗುತ್ತಿವೆ. ಗುಂಡಿ ಮುಚ್ಚುವ ನಿಯಮದಂತೆ ಚೌಕ ಅಥವಾ ಆಯತಕಾರವಾಗಿ ಗುಂಡಿಯನ್ನು ಕತ್ತರಿಸಿ ಅದಕ್ಕೆ ಬಿಟುಮಿನ್‌ ಮಿಕ್ಸ್‌ ಹಾಕಿ ದುರಸ್ತಿ ಮಾಡಬೇಕು. ಅದಕ್ಕೂ ಮುನ್ನ ಗುಂಡಿಯಲ್ಲಿನ ತೇವಾಂಶ, ಮಣ್ಣು, ಕಲ್ಲುಗಳನ್ನು ತೆಗೆಯಬೇಕು. ಆದರೆ, ಈ ನಿಯಮವನ್ನು ಪಾಲಿಸುತ್ತಿಲ್ಲ’ ಎಂದು ಆರೋಪಿಸಿದರು.

‘ರಸ್ತೆ ಚೆನ್ನಾಗಿದೆ ಎಂದುಕೊಂಡು ಬರುವ ವಾಹನ ಸವಾರರು ಗುಂಡಿಗೆ ಬೀಳದಿರಲಿ ಎನ್ನುವ ಉದ್ದೇಶದಿಂದ ರಸ್ತೆಗುಂಡಿಗಳಿಗೆ ಬಣ್ಣ ಹಚ್ಚಿ ಗಮನ ಸೆಳೆಯಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಇದನ್ನು ಸರಿಪಡಿಸಲಿ’ ಎಂದು ಆಗ್ರಹಿಸಿದರು.

ಬಸವನಗುಡಿಯಲ್ಲಿ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ಇದು.
ಬಸವನಗುಡಿಯಲ್ಲಿ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ಇದು.

‘ರಸ್ತೆ ದುರಸ್ತಿಗೆ ಖರ್ಚಾಗುವ ಹಣ ಎಲ್ಲಿ ಸೇರುತ್ತಿದೆ?’

‘ರಸ್ತೆಗಳ ದುರಸ್ತಿಗಾಗಿ ಪ್ರತಿ ಬಾರಿಯೂ ಸಾಕಷ್ಟು ಹಣವನ್ನು ಖರ್ಚು ಮಾಡಲಾಗುತ್ತಿದೆ. ಆದರೆ ರಸ್ತೆಯಲ್ಲಿನ ಗುಂಡಿಗಳು ಮಾತ್ರ ಆ ಕ್ಷಣಕ್ಕೆ ಮಾಯವಾಗಿ ಮತ್ತೆ ಉದ್ಭವಿಸುತ್ತವೆ. ಹಾಗಿದ್ದಲ್ಲಿ ಆ ಹಣ ಎಲ್ಲಿ ಸೇರುತ್ತದೆ? ಕಮಿಷನ್ ರೂಪದಲ್ಲಿ ಯಾರಿಗೆ ಸೇರಬೇಕೋ ಅವರಿಗೆ ಹಣ ಸೇರುತ್ತದೆ. ಬಸವನಗುಡಿಯಲ್ಲಿ ಅಪ್ಪ-ಮಗನ ಡಬಲ್ ಎಂಜಿನ್ ಅಧಿಕಾರದ ಮುಂದೆ ಯಾರೂ ಪ್ರಶ್ನಿಸುವರೇ ಇಲ್ಲದಂತಾಗಿದೆ‌’ ಎಂದು ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಚಿಕ್ಕಪ್ಪ ಶಾಸಕ ರವಿ ಸುಬ್ರಮಣ್ಯ ವಿರುದ್ಧ ಶಂಕರ್‌ ಗುಹಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT