ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್ಳತನಕ್ಕೆ ಹೋಗಿದ್ದ ಮನೆಯಲ್ಲೇ ಆತ್ಮಹತ್ಯೆ

ಜೈಲಿಗೂ ಹೋಗಿ ಜಾಮೀನು ಮೇಲೆ ಹೊರ ಬಂದಿದ್ದ ಆರೋಪಿ
Last Updated 22 ಅಕ್ಟೋಬರ್ 2022, 19:12 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ ಸಾಫ್ಟ್‌ವೇರ್ ಎಂಜಿನಿಯರೊಬ್ಬರ ಮನೆಗೆ ಕಳ್ಳತನಕ್ಕೆಂದು ನುಗ್ಗಿದ್ದ ಆರೋಪಿ ದಿಲೀಪ್‌ಕುಮಾರ್ ಬಹದ್ದೂರ್ (30) ಎಂಬಾತ ಅದೇ ಮನೆಯ ದೇವರ ಕೋಣೆಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

‘ಅಸ್ಸಾಂನ ದಿಲೀಪ್‌ಕುಮಾರ್, ಅಪರಾಧ ಹಿನ್ನೆಲೆಯುಳ್ಳವ. ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಬೀಗ ಹಾಕಿದ್ದ ಎಂಜಿನಿಯರ್ ಅವರ ಮನೆ ಗಮನಿಸಿ ಕಳ್ಳತನಕ್ಕೆಂದು ನುಗ್ಗಿದ್ದ. ಆದರೆ, ಅದೇ ಮನೆಯ ದೇವರ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಇಂದಿರಾನಗರ ಠಾಣೆ ಪೊಲೀಸರು ಹೇಳಿದರು.

‘ದಿಲೀಪ್‌ಕುಮಾರ್ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈತನ ಸಂಬಂಧಿಕರಿಗೂ ವಿಷಯ ತಿಳಿಸಲಾಗಿದೆ’ ಎಂದು ವಿವರಿಸಿದರು.

ಪ್ರವಾಸಕ್ಕೆ ಹೋಗಿದ್ದ ಉದ್ಯಮಿ ಕುಟುಂಬ: ‘ಇಂದಿರಾನಗರದಲ್ಲಿ ಐಷಾರಾಮಿ ಮನೆಯಲ್ಲಿ ನೆಲೆಸಿರುವ ಎಂಜಿನಿಯರ್ ಕುಟುಂಬ, ಪ್ರವಾಸ ಕ್ಕೆಂದು ಇತ್ತೀಚೆಗೆ ಬೇರೆ ಊರಿಗೆ ಹೋಗಿತ್ತು. ಹೀಗಾಗಿ, ಮನೆಗೆ ಬೀಗ ಹಾಕಲಾಗಿತ್ತು. ಇಂದಿರಾನಗರದಲ್ಲಿ ಸುತ್ತಾಡಿದ್ದ ದಿಲೀಪ್‌ಕುಮಾರ್, ಬೀಗ ಹಾಕಿದ್ದ ಎಂಜಿನಿಯರ್ ಮನೆ ಗುರುತಿಸಿ ಕಳ್ಳತನಕ್ಕೆ ಸಂಚು ರೂಪಿಸಿದ್ದನೆಂಬ ಮಾಹಿತಿ ಲಭ್ಯವಾಗಿದೆ’ ಎಂದು ಪೊಲೀಸರು ಹೇಳಿದರು.

‘ಯಾರೂ ಇಲ್ಲದ್ದನ್ನು ಖಚಿತಪಡಿಸಿಕೊಂಡು ಶುಕ್ರವಾರ ಬೆಳಿಗ್ಗೆ ಮನೆಯೊಳಗೆ ನುಗ್ಗಿದ್ದ ದಿಲೀಪ್‌ಕುಮಾರ್, ಅಲ್ಲಿಯೇ ಸ್ನಾನ ಮಾಡಿದ್ದ. ಮನೆಯಲ್ಲಿದ್ದ ಮದ್ಯ ಕುಡಿದಿದ್ದ. ನಂತರ, ಕೊಠಡಿಯಲ್ಲೆಲ್ಲ ಹುಡುಕಾಡಿದ್ದ. ಇದಕ್ಕೆ ಪುರಾವೆ ಎಂಬಂತೆ ಬಟ್ಟೆ ಹಾಗೂ ಇತರೆ ವಸ್ತುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದವು’ ಎಂದು ತಿಳಿಸಿದರು.

‘ಶುಕ್ರವಾರ ರಾತ್ರಿ ಮನೆಗೆ ಬಂದಿದ್ದ ಎಂಜಿನಿಯರ್ ಕುಟುಂಬ, ಚಿಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಸ್ತುಗಳನ್ನು ಕಂಡಿದ್ದರು. ದೇವರ ಕೋಣೆಯಲ್ಲಿ ಗಮನಿಸಿದಾಗ, ದಿಲೀಪ್‌ಕುಮಾರ್ ಮೃತದೇಹ ನೋಡಿದ್ದರು. ಗಾಬರಿಗೊಂಡು ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT