ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಲಿಂಡರ್ ಸ್ಫೋಟ: ಕಬ್ಬಿಣದ ಚೂರುಗಳು ತಾಗಿ ಕೆಲಸಗಾರ ಸಾವು

Published 30 ಜೂನ್ 2023, 23:53 IST
Last Updated 30 ಜೂನ್ 2023, 23:53 IST
ಅಕ್ಷರ ಗಾತ್ರ

ಬೆಂಗಳೂರು: ನಗರ್ತಪೇಟೆಯಲ್ಲಿರುವ ಅಂಬಿಕಾ ಆಭರಣ ಮಳಿಗೆಯಲ್ಲಿ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡಿದ್ದು, ಅದರಿಂದ ಚಿಮ್ಮಿದ ಕಬ್ಬಿಣದ ಚೂರುಗಳು ತಾಗಿ ಕೆಲಸಗಾರ ವಿಷ್ಣು ಸಾವಂತ್ ಮೃತಪಟ್ಟಿದ್ದಾರೆ.

‘ಮಹಾರಾಷ್ಟ್ರದ ವಿಷ್ಣು, ಪತ್ನಿ ವೈಜಯಂತಿ ಜೊತೆ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದರು. ಚಿನ್ನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ಪರಿಣಿತಿ ಹೊಂದಿದ್ದ ವಿಷ್ಣು, ರಮೇಶ್ ಹಾಗೂ ಮಹೇಶ್ ಕೊಠಾರಿ ಮಾಲೀಕತ್ವದ ಅಂಬಿಕಾ ಚಿನ್ನಾಭರಣ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದರು. ಅದೇ ಮಳಿಗೆಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ’ ಎಂದು ಹಲಸೂರು ಗೇಟ್ ಠಾಣೆ ಪೊಲೀಸರು ಹೇಳಿದರು.

‘ಸ್ಫೋಟ ಸಂಬಂಧ ಮಳಿಗೆಯ ಇನ್ನೊಬ್ಬ ನೌಕರ ನರೇಂದ್ರ ಸೋನಿ ದೂರು ನೀಡಿದ್ದಾರೆ. ಮಳಿಗೆ ಮಾಲೀಕರಾದ ರಮೇಶ್ ಹಾಗೂ ಮಹೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಅವರಿಬ್ಬರಿಗೂ ನೋಟಿಸ್ ನೀಡಲಾಗಿದೆ’ ಎಂದರು.

ಊಟದ ಸಂದರ್ಭದಲ್ಲಿ ಸ್ಫೋಟ: ‘ಮಳಿಗೆಯಲ್ಲಿದ್ದ ವಿಷ್ಣು, ಚಿನ್ನ ಶುದ್ಧೀಕರಣ ಹಾಗೂ ಚಿನ್ನ ಕರಗಿಸುವ ಕೆಲಸದಲ್ಲಿ ತೊಡಗಿದ್ದರು. ಇದಕ್ಕಾಗಿ ಎಲ್‌ಪಿಜಿ ಸಿಲಿಂಡರ್ ಹಾಗೂ ಆಮ್ಲಜನಕ ಸಿಲಿಂಡರ್ ಬಳಸಲಾಗುತ್ತಿತ್ತು’ ಎಂದು ಪೊಲೀಸರು ತಿಳಿಸಿದರು.

‘ಮಾಲೀಕರು ಗುರುವಾರ ಮಧ್ಯಾಹ್ನ ಮಳಿಗೆಯಿಂದ ಹೊರಗೆ ಹೋಗಿದ್ದರು. ವಿಷ್ಣು ಮಾತ್ರ ಮಳಿಗೆಯಲ್ಲಿದ್ದರು. ಅದೇ ಸಂದರ್ಭದಲ್ಲಿ ಪತ್ನಿ ವೈಜಯಂತಿ, ಊಟ ತೆಗೆದುಕೊಂಡು ಮಳಿಗೆಗೆ ಬಂದಿದ್ದರು. ಅರ್ಧಕ್ಕೆ ಕೆಲಸ ನಿಲ್ಲಿಸಿದ್ದ ವಿಷ್ಣು, ಸಿಲಿಂಡರ್ ಬಳಿಯೇ ಕುಳಿತು ಊಟ ಮಾಡುತ್ತಿದ್ದರು. ಆದರೆ, ಆಮ್ಲಜನಕದ ಸಿಲಿಂಡರ್ ಆಫ್ ಮಾಡುವುದನ್ನು ಮರೆತಿದ್ದರು.’

‘ಆಮ್ಲಜನಕ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡು, ಕಬ್ಬಿಣದ ಚೂರುಗಳು ಚಿಲ್ಲಾಪಿಲ್ಲಿಯಾಗಿದ್ದವು. ಅದೇ ಚೂರುಗಳು ವಿಷ್ಣು ತಲೆ ಹಾಗೂ ದೇಹದ ಹಲವೆಡೆ ತಾಗಿದ್ದವು. ಕೊಠಡಿಯಲ್ಲಿ ಹೊಗೆ ಆವರಿಸಿತ್ತು. ತಲೆಯಿಂದ ರಕ್ತ ಸೋರುತ್ತಿದ್ದ ವಿಷ್ಣು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಯೇ ಅವರು ಮೃತಪಟ್ಟಿದ್ದಾರೆ. ಪತ್ನಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.

‘ಆಮ್ಲಜನಕ ಸಿಲಿಂಡರ್ ಪಕ್ಕವೇ ಎಲ್‌ಪಿಜಿ ಸಿಲಿಂಡರ್ ಇತ್ತು. ಅದೃಷ್ಟವಶಾತ್ ಅದಕ್ಕೆ ಯಾವುದೇ ಧಕ್ಕೆಯಾಗಿಲ್ಲ. ಆಕಸ್ಮಾತ್ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದರೆ, ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇತ್ತು’ ಎಂದು ಪೊಲೀಸರು ತಿಳಿಸಿದರು.

‘ಸಿಲಿಂಡರ್ ಬಳಕೆಗೆ ಅನುಮತಿ ನೀಡಲಾಗಿದೆಯೇ ಅಥವಾ ಅಕ್ರಮವಾಗಿ ಸಿಲಿಂಡರ್ ಬಳಕೆ ಮಾಡಲಾಗುತ್ತಿತ್ತಾ? ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT