ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ರಸ್ತೆಯಲ್ಲಿ ವ್ಹೀಲಿ ಮಾಡುವಾಗ ಗುಂಡಿಗೆ ಬಿದ್ದ ಬೈಕ್‌ : ಸವಾರ ಸಾವು

Published 15 ಏಪ್ರಿಲ್ 2024, 4:05 IST
Last Updated 15 ಏಪ್ರಿಲ್ 2024, 4:05 IST
ಅಕ್ಷರ ಗಾತ್ರ

ಬೆಂಗಳೂರು: ಕುಡಿಯುವ ನೀರಿನ ಪೈಪ್‌ ಅಳವಡಿಸಲು ತೋಡಲಾಗಿದ್ದ ಗುಂಡಿಯಲ್ಲಿ ಬಿದ್ದು ಸದ್ದಾಂ ಪಾಷಾ (20) ಎಂಬುವವರು ಮೃತಪಟ್ಟಿದ್ದು, ಸ್ನೇಹಿತರಾದ ಉಮ್ರಜ್ ಪಾಷಾ (25) ಹಾಗೂ ಮುಬಾರಕ್ ಪಾಷಾ (17) ತೀವ್ರ ಗಾಯಗೊಂಡಿದ್ದಾರೆ.

‘ಕೊಮ್ಮಘಟ್ಟ ಬಳಿಯ ಎಸ್‌ಎಂಬಿ ಲೇಔಟ್ 100 ಅಡಿ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ತೋಡಲಾಗಿದ್ದ ಗುಂಡಿಯಲ್ಲಿ ಈ ಅವಘಡ ಸಂಭವಿಸಿದೆ. ಸದ್ದಾಂ ಪಾಷಾ ಅವರು ಗುಂಡಿಯೊಳಗೆ ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ. ಉಮ್ರಜ್ ಹಾಗೂ ಮುಬಾರಕ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದು ಕೆಂಗೇರಿ ಸಂಚಾರ ಠಾಣೆ ಪೊಲೀಸರು ಹೇಳಿದರು.

‘ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿರುವುದಾಗಿ ಕುಟುಂಬಸ್ಥರು ದೂರು ನೀಡಿದ್ದಾರೆ. ಜಲಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಗುಜರಿ ಮಳಿಗೆಯಲ್ಲಿ ಕೆಲಸ: ‘ಜೀವನ್‌ಭಿಮಾನಗರದ ಸದ್ದಾಂ, ಉಮ್ರಜ್ ಹಾಗೂ ಮುಬಾರಕ್ ಅವರು ಕೊಮ್ಮಘಟ್ಟದಲ್ಲಿರುವ ಗುಜರಿ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರವೂ ಕೆಲಸಕ್ಕೆ ಹೋಗಿದ್ದರು’ ಎಂದು ಪೊಲೀಸರು ಹೇಳಿದರು.

‘ರಾತ್ರಿ 8.30ರ ಸುಮಾರಿಗೆ ಕೆಲಸ ಮುಗಿಸಿಕೊಂಂಡು ಮೂವರು ಒಂದೇ ದ್ವಿಚಕ್ರ ವಾಹನದಲ್ಲಿ ಮನೆಯತ್ತ ಹೊರಟಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

ಅತೀ ವೇಗದ ಚಾಲನೆ: ‘ಕೊಮ್ಮಘಟ್ಟ ಎಸ್‌ಎಂಬಿ ಲೇಔಟ್ ರಸ್ತೆಯಲ್ಲಿ ಕುಡಿಯುವ ನೀರು ಪೂರೈಕೆ ಪೈಪ್‌ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಗುಂಡಿಯನ್ನು ತೋಡಲಾಗಿದೆ. ಗುಂಡಿ ಬಳಿ ವಾಹನಗಳು ಸಂಚರಿಸದಂತೆ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಬ್ಯಾರಿಕೇಡ್‌ಗಳ ನಡುವೆ ಬೈಕ್‌ಗಳು ಹೋಗುವಷ್ಟು ಜಾಗವಿತ್ತು. ಹೀಗಾಗಿ, ಹಲವರು ಅದೇ ಜಾಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದರು. ಬಸವಣ್ಣ ದೇವಸ್ಥಾನ ಕಡೆಯಿಂದ ಕೊಮ್ಮಘಟ್ಟ ಕ್ಲಬ್ ವೃತ್ತದ ಕಡೆಗೆ ಎಸ್‌ಎಂಬಿ ಲೇಔಟ್ 100 ಅಡಿ ರಸ್ತೆಯಲ್ಲಿ ಹೊರಟಿದ್ದ ಸದ್ದಾಂ ಪಾಷಾ ಹಾಗೂ ಸ್ನೇಹಿತರು, ಅತೀ ವೇಗದಲ್ಲಿ ದ್ವಿಚಕ್ರ ವಾಹನ ಚಲಾಯಿಸಿದ್ದರು. ಚಿಕ್ಕ ಜಾಗದಲ್ಲಿ ಹೋಗುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿತ್ತು. ನಂತರ, ಮೂವರು ವಾಹನ ಸಮೇತ ಗುಂಡಿಯೊಳಗೆ ಬಿದ್ದಿದ್ದರು’ ಎಂದು ತಿಳಿಸಿದರು.

‘ಅಪಘಾತದಿಂದ ಜೋರಾದ ಶಬ್ದ ಬಂದಿತ್ತು. ಸ್ಥಳೀಯರು ರಕ್ಷಣೆಗೆ ಹೋಗುವಷ್ಟರಲ್ಲೇ ಸದ್ದಾಂ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದು ಹೇಳಿದರು.

‘ವಾಹನ ಹಿಂದಿಕ್ಕಿದ್ದ ಯುವಕರು: ವ್ಹೀಲಿಯಿಂದ ಅವಘಡ’ ‘ಬೈಕ್ ಚಲಾಯಿಸಿಕೊಂಡು ಎಸ್‌ಎಂಬಿ ಲೇಔಟ್ ರಸ್ತೆಯಲ್ಲಿ ಭಾನುವಾರ ರಾತ್ರಿ ಹೊರಟಿದ್ದೆ. ನನ್ನ ಬೈಕ್‌ ಹಿಂದಿಕ್ಕಿದ್ದ ಯುವಕರು ಅತೀ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದರು. ನಂತರ ರಸ್ತೆಯಲ್ಲಿ ವ್ಹೀಲಿ ಮಾಡಿದ್ದರು’ ಎಂದು ಪ್ರತ್ಯಕ್ಷರ್ಶಿಯೊಬ್ಬರು ಹೇಳಿದರು. ‘ವ್ಹೀಲಿ ಮಾಡುತ್ತಲೇ ಯುವಕರು ಅತೀ ವೇಗದಲ್ಲಿ ಮುಂದಕ್ಕೆ ಹೋಗಿದ್ದರು. ಗುಂಡಿ ಹಾಗೂ ಅದರ ಬಳಿಯ ಬ್ಯಾರಿಕೇಡ್‌ ಗಮನಿಸಿರಲಿಲ್ಲ. ಹೀಗಾಗಿ ದ್ವಿಚಕ್ರ ವಾಹನ ಗುಂಡಿಯಲ್ಲಿ ಬಿದ್ದಿತ್ತು. ನಾನು ಹಾಗೂ ಸ್ಥಳೀಯರು ಯುವಕರನ್ನು ಗುಂಡಿಯಿಂದ ಮೇಲಕ್ಕೆ ಕರೆತಂದು ಆಸ್ಪತ್ರೆಗೆ ಕಳುಹಿಸಿದೆವು. ಒಬ್ಬ ಯುವಕ ಗುಂಡಿಯಲ್ಲೇ ತೀರಿಕೊಂಡಿದ್ದ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT