ಬುಧವಾರ, ನವೆಂಬರ್ 25, 2020
21 °C

ಪತ್ನಿ ಕಳುಹಿಸದಿದ್ದಕ್ಕೆ, ಅತ್ತಿಗೆಯನ್ನೇ ಕೊಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಲಾವಣ್ಯ (37) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಆರೋಪಿ ವಿಜಯಕುಮಾರ್ ಎಂಬಾತ, ಕೃತ್ಯದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

‘ಭಾನುವಾರ ಬೆಳಿಗ್ಗ ಈ ಘಟನೆ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿರುವ ವಿಜಯಕುಮಾರ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ’ ಎಂದು ಪೂರ್ವ ವಿಭಾಗದ ಡಿಸಿಪಿ ಎಸ್.ಡಿ. ಶರಣಪ್ಪ ತಿಳಿಸಿದರು.

‘ಮೃತ ಲಾವಣ್ಯ, ಟಿನ್‌ ಫ್ಯಾಕ್ಟರಿ ನಿವಾಸಿ ವಾಸುದೇವನ್‌ ಎಂಬುವರ ಪತ್ನಿ. ವಾಸುದೇವನ್‌ ಅವರ ಸಹೋದರಿಯನ್ನು, ಟೇಲರ್ ಆಗಿದ್ದ ವಿಜಯಕುಮಾರ್ ಮದುವೆಯಾಗಿದ್ದ. ಆರಂಭದಲ್ಲಿ ಚೆನ್ನಾಗಿದ್ದ ದಂಪತಿ, ಇತ್ತೀಚೆಗೆ ಜಗಳವಾಡಲಾರಂಭಿಸಿದ್ದರು. ವಿಜಯಕುಮಾರ್‌ನನ್ನು ತೊರೆದಿದ್ದ ಪತ್ನಿ, ಸಹೋದರ ವಾಸುದೇವನ್‌ ಮನೆಯಲ್ಲಿ ಉಳಿದುಕೊಂಡಿದ್ದರು. ವಿಜಯಕುಮಾರ್ ವಿರುದ್ಧ ಬಸವನಗುಡಿ ಮಹಿಳಾ ಠಾಣೆಗೆ ದೂರು ದಾಖಲಿಸಿದ್ದರು.’

‘ಪತ್ನಿಯನ್ನು ಮನೆಗೆ ಕರೆದುಕೊಂಡು ಬರಲೆಂದು ವಿಜಯಕುಮಾರ್, ಭಾವ ವಾಸುದೇವನ್ ಮನೆಗೆ ಬಂದಿದ್ದ. ಆದರೆ, ವಾಸುದೇವನ್ ಮನೆಯಲ್ಲಿ ಇರಲಿಲ್ಲ. ಅವರ ಪತ್ನಿ ಲಾವಣ್ಯ ಇದ್ದರು. ತನ್ನ ಪತ್ನಿಯನ್ನು ಜೊತೆಗೆ ಕಳುಹಿಸುವಂತೆ ಆರೋಪಿ ಒತ್ತಾಯಿಸಿದ್ದ. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಆರೋಪಿ, ಪತ್ನಿಯ ಅತ್ತಿಗೆಯಾದ ಲಾವಣ್ಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ತೀವ್ರವಾಗಿ ಗಾಯಗೊಂಡ ಲಾವಣ್ಯ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದೂ ಶರಣಪ್ಪ ಹೇಳಿದರು.’

’ಆರೋಪಿ ವಿಜಯ್, ಅದೇ ಚಾಕುವಿನಿಂದ ಕುತ್ತಿಗೆಗೆ ಚುಚ್ಚಿಕೊಂಡಿದ್ದ. ಪತ್ನಿ ಹಾಗೂ ಸ್ಥಳೀಯರೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.