ಬೆಂಗಳೂರು: ರಾಜರಾಜೇಶ್ವರಿನಗರ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಸುಧಾರಾಣಿ ಎಂಬುವವರನ್ನು ಕೊಲೆ ಮಾಡಲು ಯತ್ನಿಸಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಪತಿ ಹರ್ಷ್ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
‘ಮಾರ್ಚ್ 17ರಂದು ನಡೆದಿರುವ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಸುಧಾರಾಣಿ ಹಾಗೂ
ಹರ್ಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಧಾರಾಣಿ ನೀಡಿರುವ ದೂರು ಆಧರಿಸಿ ಪತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಹೇಳಿದರು.
‘ತುಮಕೂರಿನ ಹರ್ಷ್ ಹಾಗೂ ಸುಧಾರಾಣಿ ಇಬ್ಬರೂ ಸಾಫ್ಟ್‌ವೇರ್ ಎಂಜಿನಿಯರ್‌ಗಳು. ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳಿಂದ ರಾಜರಾಜೇಶ್ವರಿನಗರದಲ್ಲಿ ವಾಸವಿದ್ದರು. ದಂಪತಿಗೆ 12 ವರ್ಷದ ಮಗನಿದ್ದಾನೆ’ ಎಂದು ತಿಳಿಸಿದರು.
‘ತಮ್ಮೂರಿನಲ್ಲಿದ್ದ ಜಮೀನು ಮಾರಿದ್ದ ಹರ್ಷ್‌ಗೆ ಹೆಚ್ಚು ಹಣ ಬಂದಿತ್ತು. ಕೆಲಸಕ್ಕೆ ರಾಜೀನಾಮೆ ನೀಡಿದ್ದ ಆತ, ನಿತ್ಯವೂ ಮದ್ಯ ಕುಡಿಯಲಾರಂಭಿಸಿದ್ದ. ಪತ್ನಿ ಮಾತ್ರ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಮದ್ಯದ ವಿಚಾರವಾಗಿ ಮನೆಯಲ್ಲಿ ಗಲಾಟೆ ಶುರುವಾಗಿತ್ತು.’
‘ಮಾರ್ಚ್ 17ರಂದು ನಡೆದ ಗಲಾಟೆ ವಿಕೋಪಕ್ಕೆ ಹೋಗಿತ್ತು. ಸುಧಾರಾಣಿ ಮೇಲೆ ಹಲ್ಲೆ ಮಾಡಿದ್ದ ಹರ್ಷ್, ತಲೆಯನ್ನು ಗೋಡೆಗೆ ಗುದ್ದಿಸಿದ್ದ. ತಲೆಗಪೆಟ್ಟಾಗಿದ್ದರಿಂದ ಸುಧಾರಾಣಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ, ಹರ್ಷ್ ಸಹ ಚಾಕುವಿನಿಂದ ಕತ್ತು ಕೊಯ್ದುಕೊಂಡಿದ್ದ. ಅದನ್ನು ನೋಡಿದ್ದ ಮಗ, ಹೊರಗೆ ಓಡಿ ಬಂದು ಚೀರಾಡಿದ್ದ. ಸ್ಥಳೀಯರೇ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಸದ್ಯ ಇಬ್ಬರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ’ ಎಂದು ಪೊಲೀಸರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.