ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನದಲ್ಲಿ ಬಂದು ಕಳ್ಳತನ: ಐಷಾರಾಮಿ ಜೀವನ

Last Updated 4 ಏಪ್ರಿಲ್ 2022, 19:23 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾನದಲ್ಲಿ ನಗರಕ್ಕೆ ಬಂದು ಸರಗಳವು ಮಾಡುತ್ತಿದ್ದ ಆರೋಪದಡಿ ಉಮೇಶ್ ಅಲಿಯಾಸ್ ಖಟಿಕ್ (26) ಎಂಬಾತನನ್ನು ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಗುಜರಾತ್‌ ಅಹಮದಾಬಾದ್‌ನ ಉಮೇಶ್, ಆಗಾಗ ನಗರಕ್ಕೆ ಬಂದು ಸರಗಳವು ಮಾಡಿಕೊಂಡು ಪರಾರಿಯಾಗುತ್ತಿದ್ದ. ಬನಶಂಕರಿ ಮೂರನೇ ಹಂತದಲ್ಲಿ 2021ರ ಡಿಸೆಂಬರ್ 26ರಂದು ಕೆ. ಉಷಾ ಎಂಬುವರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನದ ಸರ ಕಿತ್ತೊಯ್ದಿದ್ದ. ಪ್ರಕರಣದ ತನಿಖೆ ಕೈಗೊಂಡಾಗ ಆರೋಪಿ ಸುಳಿವು ಸಿಕ್ಕಿತ್ತು. ಅಹಮದಾಬಾದ್ ಸಿಸಿಬಿ ಅಧಿಕಾರಿಗಳ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಉಮೇಶ್, ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿದ್ದ. ಆತನಿಂದ 75 ಗ್ರಾಂ ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಗುಜರಾತ್, ರಾಜಸ್ಥಾನ ಹಾಗೂ ತೆಲಂಗಾಣದಲ್ಲಿ ಆರೋಪಿ ಕೃತ್ಯ ಎಸಗಿರುವ ಮಾಹಿತಿ ಇದೆ‘ ಎಂದು ತಿಳಿಸಿದರು.

ಪತ್ನಿ ಜೊತೆ ಐಷಾರಾಮಿ ಜೀವನ: ‘ಕೆಲ ವರ್ಷಗಳ ಹಿಂದೆ ಬಾಲಕಿಯನ್ನು ಪ್ರೀತಿಸಿ ಉಮೇಶ್ ಮದುವೆಯಾಗಿದ್ದ. ಬಾಲಕಿ ಪೋಷಕರು ಸ್ಥಳೀಯ ಠಾಣೆಗೆ ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಆರೋಪಿ ಉಮೇಶ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವಾಗಲೇ ಬಾಲಕಿಗೆ 18 ವರ್ಷ ತುಂಬಿತ್ತು. ಜಾಮೀನು ಮೇಲೆ ಜೈಲಿನಿಂದ ಹೊರಬಂದಿದ್ದ ಆರೋಪಿ, ಆಕೆಯನ್ನು ಒಪ್ಪಿಸಿ ಮದುವೆಯಾಗಿದ್ದ’ ಎಂದೂ ತಿಳಿಸಿದರು.

‘ಪತ್ನಿ ಜೊತೆ ಐಷಾರಾಮಿ ಜೀವನ ನಡೆಸಬೇಕೆಂದುಕೊಂಡಿದ್ದ ಆರೋಪಿ, ಅದಕ್ಕಾಗಿ ಕಳ್ಳತನಕ್ಕೆ ಇಳಿದಿದ್ದ. ವ್ಯಾಪಾರದ ಸೋಗಿನಲ್ಲಿ ಬೆಂಗಳೂರಿಗೆ ವಿಮಾನದಲ್ಲಿ ಬರುತ್ತಿದ್ದ ಆರೋಪಿ, ದ್ವಿಚಕ್ರ ವಾಹನ ಕದಿಯುತ್ತಿದ್ದ. ಅದರಲ್ಲೇ ಸುತ್ತಾಡಿ, ರಸ್ತೆಯಲ್ಲಿ ಒಂಟಿಯಾಗಿ ಹೋಗುವವರನ್ನು ಹಿಂಬಾಲಿಸಿ ಸರಗಳವು ಹಾಗೂ ಸುಲಿಗೆ ಮಾಡುತ್ತಿದ್ದ. ಬಳಿಕ, ಅಹಮದಾಬಾದ್‌ಗೆ ವಾಪಸು ಹೋಗುತ್ತಿದ್ದ. ಬೆಲೆಬಾಳುವ ಚಿನ್ನಾಭರಣವನ್ನು ಪತ್ನಿಗೆ ಉಡುಗೊರೆ ನೀಡುತ್ತಿದ್ದ. ತಿಂಗಳಿಗೊಮ್ಮೆ ಹೊರ ರಾಜ್ಯಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT