ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಾಲಯ ಚಾರಣಕ್ಕೆ ಹೋಗಿದ್ದ ವೈದ್ಯ ನಾಪತ್ತೆ: ಹೈಗ್ರೌಂಡ್ಸ್ ಠಾಣೆಗೆ ದೂರು

ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ ಪೋಷಕರು
Last Updated 26 ಜೂನ್ 2022, 21:51 IST
ಅಕ್ಷರ ಗಾತ್ರ

ಬೆಂಗಳೂರು: ಹಿಮಾಲಯ ಪರ್ವತದ ಚಾರಣಕ್ಕೆಂದು ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದ ಮಣಿಪಾಲ್ ಆಸ್ಪತ್ರೆ ವೈದ್ಯ ಡಾ. ಎಸ್. ಚಂದ್ರಮೋಹನ್ (31) ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದು, ಈ ಬಗ್ಗೆ ನಗರದ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಸಂತನಗರ ನಿವಾಸಿ ಚಂದ್ರಮೋಹನ್, ಸರ್ಜಾಪುರ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ ಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರು ನಾಪತ್ತೆಯಾದ ಬಗ್ಗೆ ತಂದೆ ಶಿವನಾಥ್ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದು ವರಿಸಲಾಗಿದೆ’ ಎಂದು ಪೊಲೀಸ್
ಅಧಿಕಾರಿಯೊಬ್ಬರು ಹೇಳಿದರು.

‘ಹಿರಿಯ ಅಧಿಕಾರಿಗಳ ಮೂಲಕ ನೇಪಾಳ ಪೊಲೀಸರನ್ನು ಸಂಪರ್ಕಿಸಿ, ಮಾಹಿತಿ ರವಾನಿಸಲಾಗಿದೆ. ಸ್ಥಳೀಯ ಪೊಲೀಸರು ಚಂದ್ರಮೋಹನ್ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪೋಷಕರು ಹಾಗೂ ಸಹೋದರ ಸಹ ನೇಪಾಳಕ್ಕೆ ಹೋಗಿದ್ದಾರೆ. ಅಗತ್ಯವಿದ್ದರೆ ಬೆಂಗಳೂರಿನಿಂದ ಪೊಲೀಸರ ತಂಡ ಕಳುಹಿಸಲಾಗುವುದು’ ಎಂದು ತಿಳಿಸಿದರು.

ಫೋಟೊ ಕಳುಹಿಸಿ ಮೊಬೈಲ್ ಸ್ವಿಚ್ ಆಫ್: ‘ಹಿಮಾಲಯ ಪರ್ವತಕ್ಕೆ ಹೋಗಲು ತೀರ್ಮಾನಿಸಿದ್ದ ಚಂದ್ರಮೋಹನ್, ಬೆಂಗಳೂರಿನಿಂದ ವಿಮಾನದಲ್ಲಿ ನೇಪಾಳದ ಕಠ್ಮಂಡುವಿಗೆ ಮೇ 3ರಂದು ಹೋಗಿದ್ದರು. ಈ ಬಗ್ಗೆ ಪೋಷಕರಿಗೂ ವಿಷಯ ತಿಳಿಸಿದ್ದರು’ ಎಂದು ಅಧಿಕಾರಿ ಹೇಳಿದರು.

‘ಕೆಲ ದಿನ ನೇಪಾಳದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ವೈದ್ಯ ಭೇಟಿ ನೀಡಿದ್ದರು. ಹಿಮಾಲಯ ಪರ್ವತಕ್ಕೆ ಹೋಗಲೆಂದು ಎವರೆಸ್ಟ್ ಬೇಸ್ ಕ್ಯಾಂಪ್‌ನಲ್ಲಿ ತಂಗಿದ್ದರು. ಮೇ 20ರಂದು ಬೆಳಿಗ್ಗೆ ವಾಟ್ಸ್‌ಆ್ಯಪ್‌ ಮೂಲಕ ಫೋಟೊ ಹಾಗೂ ಸಂದೇಶ ಕಳುಹಿಸಿದ್ದರು. ಅದಾದ ನಂತರ ಚಂದ್ರಮೋಹನ್ ಮೊಬೈಲ್ ಸ್ವಿಚ್ ಆಫ್ ಆಗಿದೆ. ಪೋಷಕರು ಎಷ್ಟೇ ಪ್ರಯತ್ನಿಸಿದರೂ ಸಂಪರ್ಕಿಸಲು ಸಾಧ್ಯವಾಗಿಲ್ಲ’ ಎಂದು ತಿಳಿಸಿದರು.

‘ಚಂದ್ರಮೋಹನ್ ಒಂಟಿಯಾಗಿ ನೇಪಾಳಕ್ಕೆ ಹೋಗಿದ್ದಾರೆ. ಅವರೊಬ್ಬರೇ ಹಿಮಾಲಯ ಪರ್ವತ ಏರಲು ತೆರಳಿರುವ ಸಾಧ್ಯತೆ ಇದೆ. ಅವರನ್ನು ಪತ್ತೆಹಚ್ಚುವುದು ಸವಾಲಾಗಿದೆ‘ ಎಂದು ಹೇಳಿದರು.

‘ದೇವರ ಧ್ಯಾನ ಮಾಡುತ್ತಿದ್ದ ವೈದ್ಯ’

‘ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಚಂದ್ರಮೋಹನ್ ಹಲವು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ವಿಶ್ರಾಂತಿ ಸಿಕ್ಕಾಗ ಹಾಗೂ ಮನೆಯಲ್ಲಿ ಹಲವು ಬಾರಿ ದೇವರ ಧ್ಯಾನ ಮಾಡುತ್ತಿದ್ದರೆಂಬುದು ಗೊತ್ತಾಗಿದೆ. ದೇವರ ಮೇಲಿನ ಭಕ್ತಿಯಿಂದ ಅವರು ಹಿಮಾಲಯ ಪರ್ವತಕ್ಕೆ ಹೋಗಿರುವ ಅನುಮಾನವಿದೆ‘ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT