ಶುಕ್ರವಾರ, ಜನವರಿ 22, 2021
22 °C
5 ಕೇಂದ್ರಗಳಿಗೆ ಒಬ್ಬರಂತೆ 300 ಸೆಕ್ಟರ್ ಅಧಿಕಾರಿಗಳ ನಿಯೋಜನೆ * ಪ್ರತಿ ಕೇಂದ್ರಕ್ಕೂ ಆಂಬುಲೆನ್ಸ್‌

ಕೋವಿಡ್ ಲಸಿಕೆ: ಸಜ್ಜಾಗಿವೆ 1,507 ಕೇಂದ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಲಸಿಕೆ ಹಾಕಲು ಬಿಬಿಎಂಪಿ ವ್ಯಾಪ್ತಿಯಲ್ಲಿ 1,507 ಕೇಂದ್ರಗಳನ್ನು ಗುರುತಿಸಿದ್ದು, ತಲಾ ಐದು ಕೇಂದ್ರಗಳಿಗೆ ಒಬ್ಬರಂತೆ 300 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

ಕೋವಿಡ್‌ ಲಸಿಕೆ ಅಭಿಯಾನದ ಪೂರ್ವತಯಾರಿ ಕುರಿತು ಅವರು ಶನಿವರ ಸಭೆ ನಡೆಸಿದರು. ಕೋವಿಡ್‌ನಿಂದ ಗುಣಮುಖರಾದ ಬಳಿಕ ಅಧಿಕಾರಿಗಳ ಜತೆ ನಡೆಸಿದ ಮೊದಲ ಸಭೆ ಇದಾಗಿದೆ.

‘ಕೋವಿಡ್ ಲಸಿಕಾ ಕೇಂದ್ರಗಳನ್ನು ಸಮರ್ಪಕವಾಗಿ ನಿಭಾಯಿಸುವುದು ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ. ಸೆಕ್ಟರ್ ಅಧಿಕಾರಿಗಳಿಗೆ ಏನೆಲ್ಲಾ ಜವಾಬ್ದಾರಿಗಳಿರಲಿವೆ ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು.‌ ಅಧಿಕಾರಿಗಳಿಗೆ ಲಸಿಕಾ ಕೇಂದ್ರಗಳ ಮಾರ್ಗ ನಕ್ಷೆ, ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಹೇಳಿದರು.

‘ಲಸಿಕೆ ಕಾರ್ಯದ ಸಂದರ್ಭದಲ್ಲಿ ಯಾವುದೇ ಸಮಸ್ಯೆ ಆಗದಂತೆ ಯೋಜನಾ ಬದ್ಧವಾಗಿ ಕೆಲಸ ಮಾಡಲು ಸೂಚಿಸಲಾಗಿದೆ. ಪ್ರತಿ ಕೇಂದ್ರದಲ್ಲಿ ದಿನಕ್ಕೆ 100 ಜನರಿಗೆ ಲಸಿಕೆ ನೀಡುವ ವ್ಯವಸ್ಥೆ ಇದೆ. ಲಸಿಕೆ ಸಂದರ್ಭದಲ್ಲಿ ಆರೋಗ್ಯ ಏರುಪೇರಾದರೆ ಅಂತವರನ್ನು ಕರೆದೊಯ್ಯಲು ಪ್ರತಿ ಕೇಂದ್ರದಲ್ಲೂ ಆಂಬುಲೆನ್ಸ್ ಸಜ್ಜಾಗಿರಬೇಕು. ಲಸಿಕೆ ಪಡೆದವರ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣವೇ ದಾಖಲಿಸಲು ಆಸ್ಪತ್ರೆಗಳನ್ನು ಮೊದಲೇ ಗೊತ್ತುಪಡಿಸಿಕೊಂಡಿರಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ 100ಕ್ಕಿಂತ ಹೆಚ್ಚು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಬೇಕಾಗಿದ್ದರೆ, ಆದೇ ಆಸ್ಪತ್ರೆಯಲ್ಲೇ ಲಸಿಕಾ ಕೇಂದ್ರ ಸ್ಥಾಪಿಸಲಾಗುತ್ತದೆ. ಸಾವಿರಾರು ಆರೋಗ್ಯ ಸಿಬ್ಬಂದಿ ಇರುವ ಆಸ್ಪತ್ರೆಗಳಲ್ಲಿ ಒಂದಕ್ಕಿಂತ ಹೆಚ್ಚು ಲಸಿಕಾ ಕೇಂದ್ರಗಳನ್ನು ಆರಂಭಿಸಲೂ ಅವಕಾಶ ಇದೆ’ ಎಂದರು.

‘ಎಲ್ಲಾ ಲಸಿಕಾ ಕೇಂದ್ರಗಳಿಗೆ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಕೇಂದ್ರದಲ್ಲಿ ಲಸಿಕೆ ನೀಡುವ ಕೊಠಡಿ, ವಿಶ್ರಾಂತಿ ಕೊಠಡಿ, ಪರಿವೀಕ್ಷಣಾ ಕೊಠಡಿಗಳೂ ಇರಲಿವೆ’ ಎಂದು ತಿಳಿಸಿದರು.

‘2ನೇ ಹಂತದ ಲಸಿಕೆ ಅಭಿಯಾನ ಫೆಬ್ರುವರಿಯಲ್ಲಿ’

‘ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆ ಹಾಕಲು 1.75 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಎರಡನೇ ಹಂತದಲ್ಲಿ ಕೋವಿಡ್ ಸಮಯದಲ್ಲಿ ಕಾರ್ಯನಿರ್ವಹಿಸಿದ ಪಾಲಿಕೆ ಸಿಬ್ಬಂದಿ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಶಿಕ್ಷಕರಿಗೆ ಫೆಬ್ರುವರಿ ತಿಂಗಳಲ್ಲಿ ಲಸಿಕೆ ಹಾಕಲಾಗುವುದು. ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಮತ್ತು 50 ವರ್ಷಕ್ಕೂ ಕಡಿಮೆ ವಯಸ್ಸಾಗಿದ್ದರೂ ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲಾಗುವುದು’ ಎಂದು ಬಿಬಿಎಂಪಿ ಆಯುಕ್ತ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು