ಶುಕ್ರವಾರ, ಜನವರಿ 24, 2020
16 °C
20ಕ್ಕೂ ಅಧಿಕ ಮಳಿಗೆ l ವಿವಿಧ ಶಾಲಾ–ಕಾಲೇಜುಗಳ ಆರು ಸಾವಿರ ವಿದ್ಯಾರ್ಥಿಗಳಿಂದ ವಸ್ತು ಪ್ರದರ್ಶನ ವೀಕ್ಷಣೆ

ವಿಜ್ಞಾನದ ಹಲವು ಅಚ್ಚರಿ ಒಂದೇ ಸೂರಿನಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೊಬೈಲ್ ತಾರಾಲಯ, ಇಸ್ರೊ ಉಡಾಯಿಸಿರುವ ಉಪಗ್ರಹಗಳ ಮಾದರಿ, ರೋಬೊ, 3ಡಿ ಪ್ರಿಂಟಿಂಗ್, ಡ್ರೋನ್, ಚತುರ ನೀರಾವರಿ ವ್ಯವಸ್ಥೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹಲವು ಅಚ್ಚರಿಗಳನ್ನು ಇಲ್ಲಿ ಒಂದೇ ಸೂರಿನಡಿ ಕಣ್ತುಂಬಿಕೊಳ್ಳಬಹುದು. 

ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರ ಹಾಗೂ ಜವಾಹರಲಾಲ್‌ ನೆಹರು ತಾರಾಲಯ ಜಂಟಿಯಾಗಿ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಿರುವ ‘ಸೈನ್ಸ್‌ ಇನ್ ಆ್ಯಕ್ಷನ್’ ಉತ್ಸವ ಇದಕ್ಕೆ ವೇದಿಕೆ ಕಲ್ಪಿಸಿತು. ಮೂರು ದಿನಗಳ ಈ ವಿಜ್ಞಾನ ಉತ್ಸವ ಬುಧವಾರ ಸಂಪನ್ನವಾಯಿತು. ವಿವಿಧ ಶಾಲಾ–ಕಾಲೇಜುಗಳ 6 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಿದರು. 

ಜವಾಹರಲಾಲ್‌ ನೆಹರು ತಾರಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗದವರಿಗಾಗಿಯೇ ಸಂಚಾರ ತಾರಾಲಯದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ಬಂದು ನಕ್ಷತ್ರಲೋಕದ ಅಚ್ಚರಿಗಳನ್ನು ವೀಕ್ಷಿಸಿದರು. ಸೌರಮಂಡಲದ ಗ್ರಹಗಳ ವಿವಿಧ ಮಾದರಿಗಳು ಇದ್ದವು. ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳೂ ಪ್ರದರ್ಶನದಲ್ಲಿದ್ದವು. 

ಪ್ರಥಮ ಪಿಯು ವಿದ್ಯಾರ್ಥಿ ಎನ್. ಸುಮಂತ್ ಅಭಿವೃದ್ಧಿಪಡಿಸಿದ ಚತುರ ನೀರಾವರಿ ವ್ಯವಸ್ಥೆ ಹಾಗೂ ಶ್ರೀಗಂಧದ ಗಿಡ ರಕ್ಷಣೆಯ ಮಾದರಿ ಗಮನ ಸೆಳೆಯಿತು. ‘ಮಣ್ಣಿನ ತೇವಾಂಶವನ್ನು ಸ್ವಯಂ ಹೀರಿಕೊಂಡು, ಗಿಡಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರುಣಿಸುವ ವ್ಯವಸ್ಥೆ ಇಲ್ಲಿದೆ. ಶ್ರೀಗಂಧದಂತಹ ಮರಗಳ ಮೇಲೆ ನಿಗಾ ಇಡಲೂ ಈ ತಂತ್ರಜ್ಞಾನ ಸಹಕಾರಿಯಾಗಿದೆ. ದೇಹದ ಉಷ್ಣತೆಯನ್ನು ಗ್ರಹಿಸುವ ಸಾಧನಗಳು ಹಾಗೂ ಕ್ಯಾಮೆರಾಗಳನ್ನು ಗಿಡಗಳಿಗೆ ಅಳವಡಿಸಬೇಕು. ಆ ಗಿಡಗಳ ಸಮೀಪ ಪ್ರಾಣಿಗಳು ಅಥವಾ ಮನುಷ್ಯರು ಸಾಗಿದಲ್ಲಿ ಅವರ ದೇಹದ ಉಷ್ಣಾಂಶ ಗ್ರಹಿಸಿ ಅವುಗಳ ಛಾಯಾಚಿತ್ರವನ್ನೂ ಅದು ಸೆರೆ ಹಿಡಿಯಲಾಗುತ್ತದೆ’ ಎಂದು ಸುಮಂತ್ ವಿವರಿಸಿದರು. 

ಅಮಿತ್, ಸಾಯಿಹರ್ಷ ಹಾಗೂ ಲಿಖಿತ್ ಅಭಿವೃದ್ಧಿಪಡಿಸಿರುವ ಡ್ರೋನ್ ಆಕರ್ಷಕವಾಗಿತ್ತು. ‘ಸುಮಾರು 20 ಮೀ. ಎತ್ತರಕ್ಕೆ  ಹಾರಬಲ್ಲ ಈ ಡ್ರೋನ್ ಅರ್ಧ ಕೆ.ಜಿ. ಭಾರವಾದ ವಸ್ತುಗಳನ್ನೂ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ವಾಣಿಜ್ಯ ಉದ್ದೇಶಕ್ಕೂ ಬಳಸಬಹುದು’ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದರು.

ವಿದ್ಯಾರ್ಥಿ ತೀರ್ಥರಾಜ್ ವಾಹನಗಳ ಅಪಘಾತ ತಡೆಯುವ ವಿಶೇಷ ಸಾಧನ ಅಭಿವೃದ್ಧಿಪಡಿಸಿದ್ದಾರೆ. ವಾಹನ ಎಡ–ಬಲಕ್ಕೆ ತಿರುಗಿದಂತೆ ಇದು ಬೆಳಕಿನ ಮುನ್ಸೂಚನೆ ನೀಡುತ್ತದೆ. ಅಂಗವಿಕಲರಿಗಾಗಿಯೇ ವಿಶೇಷ ಕೈಗವಸು, ಉಪಗ್ರಹಗಳ ಮಾದರಿಗಳೂ ಈ ಇದ್ದವು.

ಉತ್ಸವದಲ್ಲಿ 20ಕ್ಕೂ ಅಧಿಕ ಮಳಿಗೆಗಳು ಇದ್ದವು. ಸಾಹಿತ್ಯಾಸಕ್ತರಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಮಳಿಗೆಗಳು ಇದ್ದವು. 

‘ವಿದ್ಯಾರ್ಥಿಗಳಿಗೆ ಪ್ರೇರಣೆ’

‘ವಿಜ್ಞಾನ ಕ್ಷೇತ್ರದ ಮಹತ್ವ ತಿಳಿಸಲು ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ವಿಜ್ಞಾನ ಉತ್ಸವವನ್ನು ಆಯೋಜಿಸಿದ್ದೆವು. ಶಿಕ್ಷಕರ ಜ್ಞಾನ ವೃದ್ಧಿಗೂ ಇದು ನೆರವಾಯಿತು. ರೊಬೋಟಿಕ್ ಸೇರಿದಂತೆ ಅನೇಕ ಆಧುನಿಕ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದರು. ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಯಿತು’ ಎಂದು ಬಿ.ವಿ.ಜಗದೀಶ್ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ.ಎಸ್. ನಟರಾಜ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು