ಸೋಮವಾರ, ಆಗಸ್ಟ್ 8, 2022
23 °C
ಬೆಂಗಳೂರು ವಿಶ್ವವಿದ್ಯಾಲಯ ಎಡವಟ್ಟು: ವಿದ್ಯಾರ್ಥಿಗಳ ಅಸಮಾಧಾನ

ಸ್ನಾತಕೋತ್ತರ ತರಗತಿಗೆ ಪ್ರವೇಶ: ಪದವಿಯಲ್ಲಿ ಫೇಲ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸ್ನಾತಕೋತ್ತರ ತರಗತಿಗೆ ಪ್ರವೇಶ ಪಡೆದು ಮೊದಲ ಸೆಮಿಸ್ಟರ್‌ನ ಪರೀಕ್ಷೆಗಳು ಸಮೀಪಿಸುತ್ತಿರುವ ಹಂತದಲ್ಲಿ ಹಲವು ವಿದ್ಯಾರ್ಥಿಗಳನ್ನು ಬೆಂಗಳೂರು ವಿಶ್ವವಿದ್ಯಾಲಯ ಸಂಕಷ್ಟಕ್ಕೆ ಸಿಲುಕಿಸಿದೆ.

‘ಪದವಿ ಹಂತದಲ್ಲೇ ಅನುತ್ತೀರ್ಣರಾಗಿರುವುದರಿಂದ ಸ್ನಾತಕೋತ್ತರ ಕೋರ್ಸ್‌ಗಳಿಗೆ ನೀಡಿರುವ ಪ್ರವೇಶಾತಿಗೆ ಅನುಮೋದನೆ ನೀಡಲು ಅವಕಾಶ ಇಲ್ಲ’ ಎಂದು ವಿಶ್ವವಿದ್ಯಾಲಯ ತಡವಾಗಿ ತಿಳಿಸಿದೆ.

ಈ ಬಗ್ಗೆ ಮಾಹಿತಿಯನ್ನು ಸ್ನಾತಕೋತ್ತರ ಪದವಿ ಕೋರ್ಸ್‌ಗೆ ಪ್ರವೇಶ ನೀಡಿರುವ ಕಾಲೇಜುಗಳಿಗೆ ನೀಡಲಾಗಿದೆ. ಕನಿಷ್ಠ 21 ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ನಿರ್ಧಾರದಿಂದ ಆಘಾತಕ್ಕೆ ಒಳಗಾಗಿದ್ದಾರೆ.

ಡಿಸ್ಟಿಂಕ್ಷನ್‌ನೊಂದಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಆದರೆ, ಪ್ರವೇಶ ಪ್ರಕ್ರಿಯೆಗೆ ಅನುಮೋದನೆ ನೀಡುವ ಸಂದರ್ಭದಲ್ಲಿ ಹಿಂದಿನ ತರಗತಿಗಳಲ್ಲಿ ಅನುತ್ತೀರ್ಣರಾಗಿರುವುದು ಪತ್ತೆಯಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

‘ಮೊದಲ ಸೆಮಿಸ್ಟರ್‌ನ ಸ್ನಾತಕೋತ್ತರ ಪರೀಕ್ಷೆ ನಡೆಯುವ ಕೆಲವು ದಿನಗಳ ಮುನ್ನ ಅನುತ್ತೀರ್ಣದ ಬಗ್ಗೆ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಮೌಲ್ಯಮಾಪನ ಮತ್ತು ಪರೀಕ್ಷಾ ವಿಭಾಗವೇ ನಮಗೆ ಪ್ರಮಾಣಪತ್ರ ಮತ್ತು ಅಗತ್ಯ ದಾಖಲೆಗಳನ್ನು ನೀಡಿದೆ. ಜತೆಗೆ, ಸ್ನಾತಕೋತ್ತರ ಸೀಟು ಸಹ ನೀಡಿದೆ. ಆದರೆ, ಈಗ ಹಿಂದಿನ ತರಗತಿಯಲ್ಲಿ ಅನುತ್ತೀರ್ಣರಾಗಿದ್ದೀರಿ ಎಂದು ತಿಳಿಸಿದೆ. ವಿಶ್ವವಿದ್ಯಾಲಯದ ನಿರ್ಲಕ್ಷ್ಯದಿಂದ ಸಂಕಷ್ಟ ಎದುರಿಸಬೇಕಾಗಿದೆ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

‘ಪದವಿ ಪರೀಕ್ಷೆಯ ಅಂತಿಮ ಸೆಮಿಸ್ಟರ್‌ ಪರೀಕ್ಷೆಯ ಫಲಿತಾಂಶವನ್ನು 2021ರ ನವೆಂಬರ್‌ನಲ್ಲಿ ಪ್ರಕಟಿಸಲಾಗಿತ್ತು. ಆಗ ನಮ್ಮನ್ನು  ಉತ್ತೀರ್ಣಗೊಳಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯ ವಿತರಿಸಿದ ಅಂಕಪಟ್ಟಿಯಲ್ಲೂ ಉತ್ತೀರ್ಣ ಎಂದೇ ನಮೂದಿಸಲಾಗಿತ್ತು. ಮುಂದಿನ ತರಗತಿಗಳಿಗೆ ಉತ್ತೀರ್ಣಗೊಳಿಸಿದ ಬಗ್ಗೆ ತಾತ್ಕಾಲಿಕ ಪ್ರಮಾಣಪತ್ರವನ್ನು ಸಹ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

‘ಈಗ ನಾವು ಸ್ನಾತಕೋತ್ತರ ಪದವಿಯ ಮೊದಲ ಸೆಮಿಸ್ಟರ್‌ ಪರೀಕ್ಷೆಯ ಶುಲ್ಕವನ್ನು ಪಾವತಿಸಬೇಕಾಗಿದೆ. ಆದರೆ, ಪದವಿ ಪರೀಕ್ಷೆಯ ಅಂತಿಮ ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದರಿಂದ ವಿಶ್ವವಿದ್ಯಾಲಯ ಪ್ರವೇಶಾತಿಗೆ ಅನುಮೋದನೆ ನೀಡಿಲ್ಲ ಎನ್ನುವುದನ್ನು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ವಿಶ್ವವಿದ್ಯಾಲಯ ಮಾಡಿರುವ ತಪ್ಪಿಗೆ ಹೊಣೆ ಯಾರು’ ಎಂದು ಇನ್ನೊಬ್ಬ ವಿದ್ಯಾರ್ಥಿ ಪ್ರಶ್ನಿಸಿದ್ದಾರೆ.

‘ಪರೀಕ್ಷೆ ಮತ್ತು ಮೌಲ್ಯಮಾಪನ ವಿಭಾಗಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎನ್ನುವುಕ್ಕೆ ಈ ಪ್ರಕರಣಕ್ಕೆ ಸಾಕ್ಷಿ. ಈ ವಿಭಾಗಗಳಲ್ಲಿ ನಮ್ಮ ಸಮಸ್ಯೆಯನ್ನು ಸಹ ಆಲಿಸುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಸಮಿತಿ ರಚನೆ

‘ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಲು ಸಿಂಡಿಕೇಟ್‌ ಉಪ ಸಮಿತಿ ರಚಿಸಲಾಗಿದೆ. ಸಮಿತಿ ವರದಿಯನ್ನು ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು’ ಎಂದು ಕುಲಸಚಿವ ಎಂ. ಕೊಟ್ರೇಶ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು