ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನಿ ಮಾರುಕಟ್ಟೆಯಾದ ಫುಟ್‌ಪಾತ್‌

ಮೂಡಲಪಾಳ್ಯ -ಮತ್ತು ಪಟ್ಟೇಗಾರಪಾಳ್ಯ ರಸ್ತೆ: ಕೇಳುವವರಿಲ್ಲ ಪಾದಚಾರಿಗಳ ಬವಣೆ
Last Updated 3 ಜುಲೈ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಿಗಷ್ಟೇ ಇದು ಪಾದಚಾರಿ ಮಾರ್ಗ. ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿಗಳು, ಗೂಡಂಗಡಿಗಳು ಈ ಮಾರ್ಗವನ್ನು ಅತಿಕ್ರಮಿಸಿಕೊಂಡು ಮಿನಿ ಮಾರುಕಟ್ಟೆಯನ್ನೇ ಸೃಷ್ಟಿಸಿವೆ. ಮೂಡಲಪಾಳ್ಯ ಹಾಗೂ ಪಟ್ಟೇಗಾರ ಪಾಳ್ಯ ರಸ್ತೆಯ ಪಾದಚಾರಿ ಮಾರ್ಗದ ದುಸ್ಥಿತಿ ಇದು. ಈ ರಸ್ತೆಯಲ್ಲಿ ಓಡಾಡುವ ಜನ, ‘ಫುಟ್‌ಪಾತ್‌ ಎಲ್ಲಿದೆ' ಎಂದುಹುಡುಕಾಡುವ ಸ್ಥಿತಿ ಇದೆ.
ನಡೆಯುವವರಿಗೆ ಆದ್ಯತೆ ನೀಡುವ ಸಲುವಾಗಿ ಬಿಬಿಎಂಪಿ ಇಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿದೆ. ಆದರೆ ಅವುಗಳ ಪರಿಸ್ಥಿತಿ ಏನಾಗಿದೆ ಎಂದು ನೋಡುವವರಿಲ್ಲ.

ಇಲ್ಲಿನ ರಸ್ತೆಗಳಲ್ಲಿ ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಫುಟ್‌ಪಾತ್ ಅತಿಕ್ರಮಣದಿಂದಾಗಿ ಇಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿ ಬಿಟ್ಟಿದೆ. ಸಂಜೆ ವೇಳೆಯಂತೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ರಸ್ತೆಯೇ ವಾಹನ ನಿಲುಗಡೆ ಸ್ಥಳದಂತೆ ಭಾಸವಾಗುತ್ತದೆ. ಅತ್ತ ಪಾದಚಾರಿ ಮಾರ್ಗದಲ್ಲಿ, ಇತ್ತ ರಸ್ತೆಯಲ್ಲೂ ನಡೆಯಲಾಗದೆ ಜನ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ.
‘ಫುಟ್‌ಪಾತ್‌ನಲ್ಲಿ ಜಾಗವೇ ಇಲ್ಲ. ಎಲ್ಲವನ್ನೂ ವ್ಯಾಪಾರಿಗಳು ಅತಿಕ್ರಮಿಸಿದ್ದಾರೆ. ಹೀಗಾಗಿ, ನಡೆಯಲು ರಸ್ತೆಯನ್ನೇ ಬಳಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ವೆಂಕಟಪ್ಪ ದೂರಿದರು.

‘ರಸ್ತೆಯಲ್ಲಿ ನಡೆದು ಹೋಗುವಾಗ ವಾಹನ ಡಿಕ್ಕಿ ಹೊಡೆಯುವ ಆತಂಕವೂ ಇದೆ. ಇತ್ತೀಚೆಗೆ ವೃದ್ಧರೊಬ್ಬರು ರಸ್ತೆಯಲ್ಲಿ ಬಿದ್ದು ಗಾಯಗೊಂಡರು. ಇಂಥ ಘಟನೆಗಳು ಇಲ್ಲಿ ಮಾಮೂಲು’ ಎಂದು ಅವರು ತಿಳಿಸಿದರು.

‘10 ವರ್ಷಗಳಿಂದ ಇದೇ ಪ್ರದೇಶದಲ್ಲಿ ವಾಸವಾಗಿದ್ದೇನೆ. ಶಾಲೆಗೆ ಹೋಗಲು ಇದೇ ರಸ್ತೆ ಬಳಸಬೇಕಿದೆ. ಫುಟ್‌ಪಾತ್‌ನಲ್ಲಿ ಜಾಗ ಬಿಡುವಂತೆ ಕೇಳಿದರೆ ವ್ಯಾಪಾರಿಗಳು ನಮ್ಮ ಜೊತೆ ಜಗಳವಾಡುತ್ತಾರೆ' ಎಂದು ಶಿಕ್ಷಕಿಯೊಬ್ಬರು ಅಳಲು ತೋಡಿಕೊಂಡರು.

‘ಪಾದಚಾರಿ‌ ಮಾರ್ಗ ಅತಿಕ್ರಮಣದ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರೆ, ಒಮ್ಮೆ ಅಂಗಡಿಗಳನ್ನು ತೆಗೆಸುತ್ತಾರೆ. ಅದೇ ಜಾಗದಲ್ಲೇ ಪುನಃ ಅಂಗಡಿಗಳು ತಲೆ ಎತ್ತುತ್ತವೆ’ ಎಂದರು.

‘ಪಾದಚಾರಿ ಮಾರ್ಗಗಳು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದೆ. ಅದನ್ನುತಡೆಯಬೇಕಾದ ಪಾಲಿಕೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ' ಎಂದರು.

ಪೋಲಿಸರ ಸುಳಿವಿಲ್ಲ: ‘ವಾಹನ ಸವಾರರು ಸಂಚಾರ ನಿಯಮಗಳನ್ನುಪಾಲಿಸುತ್ತಿಲ್ಲ. ದಟ್ಟಣೆ ಉಂಟಾದರೂ ಸ್ಥಳಕ್ಕೆ ಪೊಲೀಸರು ಬರುವುದಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT