ಬೆಂಗಳೂರು: ರಾಜ್ಯದಲ್ಲೇ ಅತಿ ಹೆಚ್ಚು ವಹಿವಾಟು ನಡೆಯುವ ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ(ಎಪಿಎಂಸಿ) ನಾಲ್ಕು ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗಳನ್ನು ಸ್ಥಳಾಂತರಿಸುವ ವಿಚಾರವು ಅಡಕತ್ತರಿಯಲ್ಲಿ ಸಿಲುಕಿದ್ದು, ಇದರಿಂದ ವಿಶಾಲ ಮಾರುಕಟ್ಟೆ ಪ್ರದೇಶವು ಸೊರಗುವಂತಾಗಿದೆ.
ಸರ್ಕಾರವು ನಗರದ ಹೊರವಲಯದ ದಾಸನಪುರಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಆಲೂಗಡ್ಡೆಯ ಮಾರಾಟದ ಎಲ್ಲ ಮಳಿಗೆಗಳನ್ನು ಸ್ಥಳಾಂತರಿಸಲು ಮುಂದಾಗಿದೆ. ಇದಕ್ಕೆ ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.
ಈ ಹಗ್ಗಜಗ್ಗಾಟದಲ್ಲಿ ಹಳೆಯದಾದ ಎಪಿಎಂಸಿಗೆ ಸೌಲಭ್ಯಗಳು ಮರೀಚಿಕೆಯಾಗಿವೆ. ಇದರಿಂದ ಕಾರ್ಮಿಕರು, ವ್ಯಾಪಾರಸ್ಥರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆವಕ ತರುವ ರೈತರು ಬಸವಳಿದಿದ್ದಾರೆ.
ಆವರಣದ ಒಳಹೊಕ್ಕರೆ ರಾಜ್ಯ, ಹೊರ ರಾಜ್ಯದಿಂದ ಬರುವ ರಾಶಿ ರಾಶಿ ಕೃಷಿ ಉತ್ಪನ್ನಗಳು ಗಮನ ಸೆಳೆಯುತ್ತವೆ. ಬೃಹತ್ ಲಾರಿಗಳು ಉತ್ಪನ್ನ ಹೊತ್ತು ತರುವುದು ಕಣ್ಣಿಗೆ ಬೀಳುತ್ತದೆ. ಅದೇ ಪ್ರಮಾಣದಲ್ಲಿ ‘ಸಮಸ್ಯೆಗಳ ರಾಶಿ’ಯೂ ಗೋಚರಿಸುತ್ತದೆ.
1975ರಿಂದ ಯಶವಂತಪುರ ಎಪಿಎಂಸಿಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪರವಾನಗಿ ಪಡೆದ ವರ್ತಕರು ವಹಿವಾಟು ನಡೆಸುತ್ತಿದ್ದಾರೆ. ರಾಜ್ಯವಲ್ಲದೇ ಮಹಾರಾಷ್ಟ್ರದಿಂದಲೂ ಈರುಳ್ಳಿ ಈ ಮಾರುಕಟ್ಟೆಗೆ ಪೂರೈಕೆಯಾಗುತ್ತಿದೆ. ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂ, ಮಧ್ಯಪ್ರದೇಶ, ಉತ್ತರ ಪ್ರದೇಶಕ್ಕೆ ಈರುಳ್ಳಿ ರವಾನೆಯಾಗುವುದು ಇದೇ ಮಾರುಕಟ್ಟೆಯಿಂದ.
ತೆಂಗಿನಕಾಯಿ, ದಿನಸಿ, ಹಣ್ಣು... ಹೀಗೆ ಪ್ರತ್ಯೇಕ ಪ್ರಾಂಗಣದ ವ್ಯವಸ್ಥೆಯಿದೆ. ಅಗತ್ಯವಿರುವ ಎಲ್ಲ ಪದಾರ್ಥಗಳೂ ಒಂದೇ ಸೂರಿನಡಿ ಲಭ್ಯವಾಗುತ್ತಿದೆ. ಆದರೆ, ಸಮಸ್ಯೆಗಳ ನಡುವೆಯೇ ವಹಿವಾಟು ನಡೆಸುವ ಸ್ಥಿತಿಯಿದೆ.
ಕುಸಿದ ವಹಿವಾಟು:
ಕೋವಿಡ್–19 ಮುಕ್ತಾಯಗೊಂಡಿದ್ದರೂ ಎಪಿಎಂಸಿಯಲ್ಲಿ ವಹಿವಾಟು ಮಾತ್ರ ಚೇತರಿಕೆ ಕಂಡಿಲ್ಲ. ಕೋವಿಡ್ ನಂತರವೂ
ಶೇ 40ರಷ್ಟು ವ್ಯಾಪಾರ ಕುಸಿದಿದೆ. ಕೋವಿಡ್ ಪೂರ್ವದಲ್ಲಿ ಕೃಷಿ ಉತ್ಪನ್ನಗಳು ಇದೇ ಎಪಿಎಂಸಿಯಲ್ಲಿ ಸಣ್ಣಪುಟ್ಟ ಮಾರುಕಟ್ಟೆಗಳಿಗೆ ಪೂರೈಕೆ ಆಗುತ್ತಿದ್ದವು. ಆದರೆ, ಈಗ ರೈತರೇ ಬೇರೆ ಬೇರೆ ಮಾರುಕಟ್ಟೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಕೃಷಿ ಉತ್ಪನ್ನಗಳ ಪೂರೈಕೆಯ ಪ್ರಮಾಣವು ತಗ್ಗಿದೆ ಎಂದು ವರ್ತಕರು ಹೇಳುತ್ತಾರೆ.
ಪ್ರಾಂಗಣದಲ್ಲಿ ಶ್ರಮಿಕ ವರ್ಗವೇ ನಿತ್ಯ ದುಡಿಯುತ್ತಿದೆ. ಅವರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ದೂಳು, ಕಸದ ರಾಶಿಯ ನಡುವೆ ವ್ಯಾಪಾರಸ್ಥರು ಹಾಗೂ ಕಾರ್ಮಿಕರು ಅವರು ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಕಳ್ಳರ ಹಾವಳಿ: 106 ಎಕರೆ ವಿಸ್ತೀರ್ಣದಲ್ಲಿರುವ ಪ್ರಾಂಗಣಕ್ಕೆ 12ಕ್ಕೂ ಹೆಚ್ಚು ಪ್ರವೇಶದ್ವಾರಗಳಿವೆ. ಕೆಲವು ಗೇಟ್‌ಗಳಲ್ಲಿ ಮಾತ್ರ ಕಾವಲುಗಾರರನ್ನು ನೇಮಿಸಲಾಗಿದೆ. ಉಳಿದೆಡೆ ಕಳ್ಳರು ಸರಾಗವಾಗಿ ಪ್ರಾಂಗಣಕ್ಕೆ ಬಂದು ಕೃಷಿ ಉತ್ಪನ್ನ ಕಳವು ಮಾಡಿದ ಉದಾಹರಣೆಗಳಿವೆ. ಅಲ್ಲಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದ ವ್ಯಾಪಾರಿಗಳಿಗೂ ನಷ್ಟವಾಗುತ್ತಿದೆ.
ಇನ್ನು ಈರುಳ್ಳಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ರಾಶಿ ಹಾಕಲಾಗಿದೆ. ಅದು ಕೊಳೆತರೂ ವಿಲೇವಾರಿ ಮಾಡುತ್ತಿಲ್ಲ. ಇದು ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತಿದೆ. ಈರುಳ್ಳಿ ಸಿಪ್ಪೆಯ ರಾಶಿಗೆ ಕಿಡಿಗೇಡಿಗಳು ಬೆಂಕಿ ಹಾಕುತ್ತಾರೆ. ಇದರಿಂದ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂಬ ಆತಂಕವೂ ಇದೆ.
ಗಾಂಜಾ ವ್ಯಸನಿಗಳ ಕಾಟ: ಹಿಂದೆ ರೌಡಿಗಳ ಕಾಟ ವಿಪರೀತವಾಗಿತ್ತು. ರೌಡಿಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದ್ದ ಮೇಲೆ ಅವರ ಕಾಟ ತಪ್ಪಿದೆ. ಈಗ ರಾತ್ರಿ ವೇಳೆ ಗಾಂಜಾ ವ್ಯಸನಿಗಳ ಹಾವಳಿ ಹೆಚ್ಚಾಗಿದ್ದು, ಇವರ ಆಟಾಟೋಪಕ್ಕೆ ಕಡಿವಾಣ ಬೀಳಬೇಕಿದೆ ಎಂದು ವ್ಯಾಪಾರಸ್ಥರು ಒತ್ತಾಯಿಸುತ್ತಾರೆ.
ಮಾರುಕಟ್ಟೆಗೆ ಆವಕ ತರುವ ರೈತರಿಗೆ ರಾತ್ರಿ ವಾಸ್ತವ್ಯಕ್ಕೆ ‘ರೈತ ಭವನ’ ನಿರ್ಮಿಸಲಾಗಿದ್ದರೂ ನಿರ್ವಹಣೆ ಕೈಗೊಂಡಿಲ್ಲ. ಕೆಲವು ಕೊಠಡಿಗಳ ಕಿಟಕಿಯ ಗಾಜುಗಳು ಒಡೆದಿವೆ. ಭವನದ ಸುತ್ತಲೂ ಹತ್ತಾರು ವರ್ಷದಿಂದ 15ಕ್ಕೂ ಹೆಚ್ಚು ಹಳೆಯ ವಾಹನ ನಿಲುಗಡೆ ಮಾಡಲಾಗಿದೆ. ಹೆದ್ದಾರಿ ಬದಿಯಲ್ಲೇ ಇರುವ ಭವನ ಕೊಂಪೆಯಂತೆ ಕಾಣಿಸುತ್ತಿದೆ.
- ‘ಸೌಕರ್ಯವಿದೆ: ಇಲ್ಲೇ ಅವಕಾಶ ಕಲ್ಪಿಸಿ’
ಯಶವಂತಪುರ ಎಪಿಎಂಸಿ ನಗರದ ಹೃದಯಭಾಗದಲ್ಲಿದೆ. ರೈಲು ನಿಲ್ದಾಣ ಮೆಟ್ರೊ ರೈಲು ಸಂಪರ್ಕ ರಾಷ್ಟ್ರೀಯ ಹೆದ್ದಾರಿ ಸೇರಿ ಸಾಕಷ್ಟು ಸೌಕರ್ಯಗಳಿವಿದೆ. ಇದರಿಂದ ವಹಿವಾಟು ಸುಗಮವಾಗಿ ನಡೆಯುತ್ತಿದೆ. 90ಕ್ಕೂ ಹೆಚ್ಚು ಕೃಷಿ ಉತ್ಪನ್ನಗಳು ವಹಿವಾಟು ನಡೆಯುತ್ತಿದ್ದು ರಾಜ್ಯದ ಎಲ್ಲ ರೈತರಿಗೆ ಅನುಕೂಲವಾಗುತ್ತಿದೆ. ಈರುಳ್ಳಿ ಬೆಳ್ಳುಳ್ಳಿ ಆಲೂಗಡ್ಡೆ ಶುಂಠಿ ಪದಾರ್ಥಗಳ ವಹಿವಾಟನ್ನು ದಾಸನಪುರಕ್ಕೆ ಸ್ಥಳಾಂತರಿಸಲು ಮುಂದಾಗಿರುವುದು ಸರಿಯಲ್ಲ. ಯಶವಂತಪುರದಲ್ಲಿ ಮಳಿಗೆ ಇಲ್ಲದವರಿಗೆ ದಾಸನಪುರದಲ್ಲಿ ಮಳಿಗೆ ಕಲ್ಪಿಸಲಿ. ಯಶವಂತಪುರದಲ್ಲಿ ಮಳಿಗೆ ಪಡೆದವರು ಹಾಗೂ ಬಾಡಿಗೆದಾರರಿಗೆ ಇಲ್ಲೇ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಿ ಎಂಬುದು ಸಂಘದ ಒತ್ತಾಯ ಎಂದು ಸಂಘದ ಅಧ್ಯಕ್ಷ ಸಿ.ಉದಯಶಂಕರ್ ಹೇಳಿದರು. ವಾಹನ ದಟ್ಟಣೆ ಕಾರಣ ನೀಡಿ ಸ್ಥಳಾಂತರ ಮಾಡಲಾಗುತ್ತಿದೆ. ಆದರೆ ಕೋವಿಡ್ ಬಳಿಕ ದಟ್ಟಣೆ ಸಮಸ್ಯೆಯೇ ಆಗುತ್ತಿಲ್ಲ. ಹೊರ ರಾಜ್ಯದಿಂದ ಬಂದ ಲಾರಿಗಳು ಸುಗಮವಾಗಿ ತೆರಳುತ್ತಿವೆ. ಸರ್ಕಾರವು ಬೇಕಿದ್ದರೆ ಹೊಸದಾಗಿ ನಾಲ್ಕು ಮಾರುಕಟ್ಟೆ ನಿರ್ಮಿಸಲಿ. ಮೂಲ ವ್ಯಾಪಾರಿಗಳನ್ನು ಇಲ್ಲೇ ಬಿಡಲಿ ಎಂದೂ ಮನವಿ ಮಾಡಿದರು.
ಬಹುಮಹಡಿ ಪಾರ್ಕಿಂಗ್ ಕಟ್ಟಡ: ಬಳಕೆಗೆ ಅಲಭ್ಯ
ಬಹುಮಹಡಿ (8 ಅಂತಸ್ತು) ಪಾರ್ಕಿಂಗ್ ಕಟ್ಟಡ ನಿರ್ಮಿಸಿದ್ದರೂ ಅದು ಬಳಕೆಗೆ ಲಭ್ಯವಾಗಿಲ್ಲ. ಪಾರ್ಕಿಂಗ್ ಕಟ್ಟಡದ ಬದಲಿಗೆ ಮಾರುಕಟ್ಟೆಗೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದ್ದೆವು. ಮನವಿ ಲೆಕ್ಕಿಸದೇ ಅಂದಾಜು ₹ 104 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಅದೂ ಉಪಯೋಗಕ್ಕೆ ಬರುತ್ತಿಲ್ಲ. ಉದ್ಘಾಟನೆಯನ್ನೂ ನಡೆಸಿಲ್ಲ. ಬೀಗ ಹಾಕಲಾಗಿದೆ. ಎಲ್ಲ ಉತ್ಪನ್ನಗಳ ವಹಿವಾಟು ದಾಸನಪುರಕ್ಕೆ ಸ್ಥಳಾಂತರಿಸಿದರೆ ಮಾತ್ರ ನಾವೂ ಅಲ್ಲಿಗೆ ತೆರಳಲು ಸಿದ್ಧವಿದ್ದೇವೆ ಎಂದು ಭಾಸ್ಕರ್ ಟ್ರೇಡರ್ಸ್‌ನ ತೆಂಗಿನಕಾಯಿ ವ್ಯಾಪಾರಿ ಪುಟ್ಟಸ್ವಾಮಿ ಹೇಳುತ್ತಾರೆ.
ಮಾರುಕಟ್ಟೆ ಸಮಸ್ಯೆಯ ಸುತ್ತ...
ದರ ಹೆಚ್ಚಿಸುವಂತೆ ಮನವಿ ಕಳೆದ 20 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ನಿತ್ಯ ಲಾರಿಯಿಂದ ಚೀಲಗಳನ್ನು ಇಳಿಸುವುದು ಹಾಗೂ ತುಂಬುವುದು ಮಾಡುತ್ತೇನೆ. ಪ್ರತಿ ಚೀಲಕ್ಕೆ ₹ 6 ನೀಡಲಾಗುತ್ತಿದೆ. ಅದನ್ನು ₹ 10ಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದ್ದೇವೆ. – ಮರಿಯಪ್ಪನ್ ಕೂಲಿ ಕಾರ್ಮಿಕ ಜೀವನ ದುಬಾರಿ ರಾಜಧಾನಿಯಲ್ಲಿ ಜೀವನ ನಿರ್ವಹಣೆ ಕಷ್ಟ. ದುಡಿಮೆ ಸಾಲುತ್ತಿಲ್ಲ. ಕಾರ್ಮಿಕರಿಗೆ ಸರ್ಕಾರವು ವಿಶೇಷ ಯೋಜನೆ ರೂಪಿಸಬೇಕು. – ಸುರೇಂದ್ರ ಕಾರ್ಮಿಕ ದೂಳಿನಿಂದ ಕಾಯಿಲೆ 15 ವರ್ಷಗಳಿಂದ ಎಪಿಎಂಸಿ ಆವರಣದ ಮಳಿಗೆಯ ಎದುರು ರೈತರು ತಂದ ಆಲೂಗಡ್ಡೆ ಶುಂಠಿ ಈರುಳ್ಳಿ ಬೆಳ್ಳುಳ್ಳಿ ರಾಶಿ ಮಾಡುವ ಕೆಲಸ ಮಾಡುತ್ತೇನೆ. ಈ ಕೆಲಸಕ್ಕೆ ರೈತರು ಹಾಗೂ ವರ್ತಕರು ಒಂದಷ್ಟು ಈರುಳ್ಳಿ ನೀಡುತ್ತಾರೆ. ಅದನ್ನೇ ಮಾರಾಟ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಆವರಣದಲ್ಲಿ ದೂಳು ಸಮಸ್ಯೆಯಿದೆ. ಕಸ ವಿಲೇವಾರಿ ಆಗುತ್ತಿಲ್ಲ. – ವೀರಮ್ಮ ಕಾರ್ಮಿಕ ಮಹಿಳೆ ರಸ್ತೆಯ ಮೇಲೆ ತ್ಯಾಜ್ಯದ ನೀರು ಎಪಿಎಂಸಿ ಆವರಣದಲ್ಲಿ ಚರಂಡಿ ವ್ಯವಸ್ಥೆ ಸರಿಯಿಲ್ಲ. ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿದೆ. ಇದರಿಂದ ಶೌಚಾಲಯದ ನೀರು ರಸ್ತೆಗಳ ಮೇಲೆಯೇ ಹರಿಯುತ್ತಿದೆ. ರೈತರು ಕಾರ್ಮಿಕರು ಹಾಗೂ ವರ್ತಕರು ಮೂಗು ಮುಚ್ಚಿಕೊಂಡು ಓಡಾಟ ನಡೆಸುವ ಪರಿಸ್ಥಿತಿಯಿದೆ. – ಮುದ್ದಮ್ಮ ನಂದಿನಿ ಲೇಔಟ್ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.