ಬುಧವಾರ, ಮೇ 18, 2022
25 °C

ಬದುಕು ಪ್ರೀತಿಸುವ ಕೃತಿಗಳು ಹೆಚ್ಚು ಬರಲಿ: ಲೇಖಕಿ ಡಾ.ವಸುಂಧರಾ ಭೂಪತಿ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮನುಷ್ಯ ಸಂಬಂಧಗಳು ಹದಗೆಡುತ್ತಿರುವ ಪ್ರಸ್ತುತ ಕಾಲದಲ್ಲಿ ಪಂಪ ಮಹಾಕವಿಯ 'ಮನುಜ ಕುಲಂ, ತಾನೊಂದೆ ವಲಂ' ಎಂಬ ಮಾತು ಬದುಕಿನ ದಾರಿದೀಪವಾಗಬೇಕು’ ಎಂದು ಲೇಖಕಿ ಡಾ.ವಸುಂಧರಾ ಭೂಪತಿ ಅಭಿಪ್ರಾಯಪಟ್ಟರು.

ಬೆನಕ ಬುಕ್ಸ್ ಬ್ಯಾಂಕ್ ಯಳಗಲ್ಲು (ಕೋಡೂರು) ಹಾಗೂ ಬೆಂಗಳೂರಿನ ‘ಪ್ರಾಫಿಟ್ ಪ್ಲಸ್’ ಮಾಸಪತ್ರಿಕೆ ಸಹಯೋಗದಲ್ಲಿ ಭಾನುವಾರ ಲೇಖಕಿ ಸುಧಾ ಶರ್ಮಾ ಚವತ್ತಿ ಅವರ ‘ನಮ್ಮೊಳಗೆ ನಾವು’, ಪತ್ರಕರ್ತೆ ಮಾಲತಿ ಭಟ್ ಅವರ ‘ದೀಪದ ಮಲ್ಲಿಯರು’, ಕವಯಿತ್ರಿ ಶೋಭಾ ಹೆಗಡೆ ಅವರ ‘ಅವಳೆಂಬ ಸುಗಂಧ’ ಹಾಗೂ ಬರಹಗಾರ್ತಿ ಸಿ.ಚಿತ್ರ ಅವರ ‘ಅನಾಮಿಕಳ ಅಂತರಂಗ’ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಮತ್ತು ಕುಟುಂಬಗಳು ವಿಘಟನೆಗೊಳ್ಳುತ್ತಿರುವ ಸಂದರ್ಭದಲ್ಲಿ ಸೌಹಾರ್ದ ಮುಖ್ಯ. ಸಾಮರಸ್ಯಕ್ಕೆ ಧಕ್ಕೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ಬದುಕಿನ ಪ್ರೀತಿ ಹೆಚ್ಚಿಸುವ ರೀತಿಯಲ್ಲಿ ಈ ನಾಲ್ಕು ಕೃತಿಗಳು ರಚನೆಯಾಗಿವೆ’ ಎಂದು ವಿಶ್ಲೇಷಿಸಿದರು.

'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ ಸುತ್ತಲಿನವಿದ್ಯಮಾನಗಳಗಿಂತಲೂ ನಮ್ಮೊಳಗೆ ನಾವು ಮಾತನಾಡುವ ಅಗತ್ಯವಿದೆ. ಎಲ್ಲವೂ ನಮ್ಮದು ಎನ್ನುವುದು ಒಳ್ಳೆಯದು. ಆದರೆ, ಅದು ಸಕಾರಣಕ್ಕೆ ಇರಬೇಕು. ಹಿಂದೆ ಕೂಡು ಕುಟುಂಬಗಳಿದ್ದವು. ಅತ್ಯಂತ ಸಹನೆ, ಸಹಕಾರ, ಸಹಬಾಳ್ವೆ ಕಲಿಸುತ್ತಿದ್ದವು. ವ್ಯಕ್ತಿಯ ಕೋಪ-ತಾಪ-ಅವಸರಗಳನ್ನು ನಿಯಂತ್ರಿಸುತ್ತಿದ್ದವು. ಹೀಗಾಗಿ, ಈ ವ್ಯವಸ್ಥೆ ಮಹತ್ವ ಪಡೆದಿತ್ತು. ಇಂದು ಪರಿಸ್ಥಿತಿ ಬದಲಾಗಿದೆ’ ಎಂದರು.

ಆಪ್ತಸಮಾಲೋಚಕಿ ಡಾ. ಶಾಂತಾ ನಾಗರಾಜ್, ‘ಖಿನ್ನತೆಯಿಂದ ಬಳಲುವವರ ಸಂಖ್ಯೆ ಇಂದು ಹೆಚ್ಚಾಗುತ್ತಿದೆ. ದೇಶದಲ್ಲಿ ಸುಮಾರು 30 ಕೋಟಿ ಮಂದಿ ವಿವಿಧ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ಇವರು ಮಾನಸಿಕ ರೋಗಿಗಳಲ್ಲ. ಪ್ರತಿ ಮೂವರಲ್ಲಿ ಒಬ್ಬರಿಗೆ ಭಾವನೆಗಳ ಅಭಿವ್ಯಕ್ತಿ ಸಾಧ್ಯವಾಗುವುದಿಲ್ಲ. ಇಂದು ಜನಸಂಖ್ಯೆಗೆ ಅಗತ್ಯವಿರುವಷ್ಟು ಮನೋವೈದ್ಯರಿಲ್ಲ. 10 ಸಾವಿರ ಮಂದಿಗೆ ಒಬ್ಬ ಮನೋವೈದ್ಯರಿದ್ದಾರೆ’ ಎಂದು ವಿವರಿಸಿದರು.

ಲೇಖಕಿ ಭುವನೇಶ್ವರಿ ಹೆಗಡೆ, ‘ಸ್ತ್ರೀವಾದವನ್ನು ಕೇಂದ್ರೀಕರಿಸಿ ಮಾನವೀಯತೆಯನ್ನು ವಿಜೃಂಭಿಸುವ ಬರಹಗಳನ್ನು ಈ ನಾಲ್ಕು ಪುಸ್ತಕಗಳಲ್ಲಿ ಕಾಣಬಹುದು’ ಎಂದರು.

ಕೃತಿಗಳ ಲೇಖಕಿಯರಾದ ಸುಧಾ ಶರ್ಮಾ ಚವತ್ತಿ, ಶೋಭಾ ಹೆಗಡೆ, ಸಿ. ಚಿತ್ರ ಹಾಗೂ ಮಾಲತಿ ಭಟ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು