ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಧ್ಯಮಗಳ ಜತೆ ಹೆಚ್ಚು ಮಾತು ಬೇಡ: ಡಿಜಿ ತಾಕೀತು

ಜಿಲ್ಲೆ, ಕಮಿಷನರೇಟ್ ಪೊಲೀಸ್ ಅಧಿಕಾರಿಗಳಿಗೆ ಸೂಚನೆ
Last Updated 29 ಜೂನ್ 2018, 19:05 IST
ಅಕ್ಷರ ಗಾತ್ರ

ಬೆಂಗಳೂರು: ‘ಇಂದಿನ ಮಾಧ್ಯಮಗಳು ಪ್ರಕರಣಗಳನ್ನು ವೈಭವೀಕರಿಸುತ್ತಿವೆ. ಅಂಥ ಮಾಧ್ಯಮಗಳ ಜತೆ ಹೆಚ್ಚು ಮಾತನಾಡಬೇಡಿ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಪೊಲೀಸ್‌ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ‘ತನಿಖೆಯ ಸಂಪೂರ್ಣ ಮಾಹಿತಿಯನ್ನು ಮಾಧ್ಯಮಗಳಿಗ ನೀಡುವ ಅಗತ್ಯವಿಲ್ಲ. ಜನರ ಜಾಗೃತಿಗೆ ಬೇಕಾಗುವಷ್ಟು ಮಾಹಿತಿಯನ್ನಷ್ಟೇ ನೀಡಿ’ ಎಂದಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಅಪರಾಧಗಳ ಬಗ್ಗೆಯೇ ಮಾಧ್ಯಮಗಳು ಹೆಚ್ಚು ವರದಿ ಮಾಡುತ್ತಿವೆ. ಅದಕ್ಕೆ ಪ್ರತಿಕ್ರಿಯೆಯಾಗಿ ಅಧಿಕಾರಿಗಳ ಹೇಳಿಕೆಗಳನ್ನು ಬಳಸಿಕೊಳ್ಳುತ್ತಿವೆ. ಕೆಲ ಪ್ರಕರಣಗಳಲ್ಲಂತೂ ಅಧಿಕಾರಿಗಳ ಹೇಳಿಕೆಯನ್ನೇ ಆಧರಿಸಿ ಅರ್ಧ ಅಥವಾ ಒಂದು ಗಂಟೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದು ತನಿಖೆ ಮೇಲೆ ಪರಿಣಾಮ ಬೀರುತ್ತಿದೆ. ಇನ್ನು ಮುಂದೆ ಯಾರೊಬ್ಬರೂ ಹೆಚ್ಚು ಸಮಯದವರೆಗೆ ಮಾತನಾಡಬಾರದು ಎಂದು ಡಿಜಿ– ಐಪಿ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕಾರಿ ಹೇಳಿದರು.

‘ಮಕ್ಕಳ ಹಾಗೂ ಮಹಿಳೆಯರ ಮೇಲಿನ ಅಪರಾಧಗಳು ಮತ್ತು ಗಂಭೀರ ಪ್ರಕರಣಗಳಲ್ಲಿ ಮಾಹಿತಿಯನ್ನು ಗೌಪ್ಯವಾಗಿಡುವುದು ಅಧಿಕಾರಿಯ ಕರ್ತವ್ಯ. ಈ ಸಂಬಂಧ ಸುಪ್ರೀಂ ಕೋರ್ಟ್‌ ಹಲವು ಆದೇಶಗಳನ್ನು ನೀಡಿದೆ. ಅದನ್ನು ಪಾಲಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಸುತ್ತೋಲೆಯಲ್ಲಿ ಹೇಳಿರುವುದಾಗಿ ಅಧಿಕಾರಿಯೊಬ್ಬರು ವಿವರಿಸಿದರು.

ಕಿಡಿ ಕಾರಿದ್ದರು: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ. ಮಾಧ್ಯಮದವರು ಸುತ್ತೋಲೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ಹೋದಾಗ, ಅವರ ವಿರುದ್ಧವೇ ನೀಲಮಣಿ ರಾಜು ಹರಿಹಾಯ್ದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT