ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವಿದ್ಯಾರ್ಥಿಗಳಿಗೆ ಜೈಲುಗಳಲ್ಲಿ ಇಂಟರ್ನ್‌ಶಿಪ್‌: ಮನವಿ

Last Updated 17 ಡಿಸೆಂಬರ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ’ಸರ್ಕಾರಿ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್‌ ವಿದ್ಯಾರ್ಥಿಗಳು ರಾಜ್ಯದ ಕಾರಾಗೃಹಗಳಲ್ಲಿ ಇಂಟರ್ನ್‌
ಶಿಪ್‌ ಕೋರ್ಸ್‌ ಪೂರೈಸಲು ಅನುವು ಮಾಡಿಕೊಡಬೇಕು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿಕೊಳ್ಳಲಾಗಿದೆ’ ಎಂದು ಕಾರಾಗೃಹ ಇಲಾಖೆ ಹೈಕೋರ್ಟ್‌ಗೆ ತಿಳಿಸಿದೆ.

ಜೈಲುಗಳಲ್ಲಿನ ವ್ಯವಸ್ಥೆ ಹಾಗೂ ಸುಧಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್‌ ಎಸ್‌.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಕರ್ನಾಟಕ ಕಾರಾಗೃಹ ನಿಯಮ–1974 ಹಾಗೂ ಕೈಪಿಡಿ–1978ರ ಅನುಸಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿದರು.

‘ರಾಜ್ಯದಲ್ಲಿನ ಕಾರಾಗೃಹಗಳಿಗೆ 7 ಮುಖ್ಯ ವೈದ್ಯಕೀಯ ಅಧಿಕಾರಿಗಳ ಹುದ್ದೆ ಮಂಜೂರಾಗಿದ್ದು ಅಷ್ಟೂ ಹುದ್ದೆಗಳು ಖಾಲಿ ಇವೆ. ವೈದ್ಯಕೀಯ ಅಧಿಕಾರಿಗಳಲ್ಲಿ ಮಂಜೂರಾಗಿರುವ ಸಂಖ್ಯೆ 20. ಅವುಗಳಲ್ಲಿ 15 ಖಾಲಿ ಇವೆ. ಇಬ್ಬರು ಮನೋವೈದ್ಯರು ಕಾರ್ಯ ನಿರ್ವಹಿಸುತ್ತಿದ್ದು 6 ಹುದ್ದೆಗಳು ಖಾಲಿ ಇವೆ. ಒಬ್ಬ ಕ್ಲಿನಿಕಲ್‌ ಮನೋವೈದ್ಯರು, ಮಂಜೂರಾ
ಗಿದ್ದು ಆ ಹುದ್ದೆ ಖಾಲಿ ಇದೆ. 2019ರ ಡಿ.1ಕ್ಕೆ ಅನುಗುಣವಾಗಿ ಈ ಅಂಕಿ ಅಂಶ ನೀಡಲಾಗಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

‘24 ಸ್ಟಾಫ್‌ ನರ್ಸ್‌ ಹುದ್ದೆಗಳು ಖಾಲಿ ಇವೆ. ಐವರು ಪುರುಷ ನರ್ಸ್‌ಗಳಲ್ಲಿ ಒಬ್ಬರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. 3 ಕಿರಿಯ ಲ್ಯಾಬ್‌ ಟೆಕ್ನಿಷಿಯನ್, 7 ಫಾರ್ಮಾಸಿಸ್ಟ್‌ ಹಾಗೂ 1 ಎಕ್ಸ್‌ ರೇ ಟೆಕ್ನಿಷಿಯನ್‌ ಹುದ್ದೆ ಖಾಲಿ ಇವೆ. ಮನೋವಿಜ್ಞಾನಿ, ಸಾಮಾಜಿಕ ಕಾರ್ಯಕರ್ತ ಅಥವಾ ಆಪ್ತ ಸಲಹೆಗಾರರ ಮಂಜೂರಾದ ಸಂಖ್ಯೆ 21 ಇದ್ದು ಅಷ್ಟೂ ಹುದ್ದೆಗಳು ಖಾಲಿ ಇವೆ’ ಎಂದು ವಿವರಿಸಲಾಗಿದೆ.

ಜೈಲುಗಳಲ್ಲಿ ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಕೈದಿಗಳನ್ನು ಇರಿಸುವುದು, ಜೈಲು ಸಿಬ್ಬಂದಿ ನೇಮಕಾತಿ, ಅಲ್ಲಿನ ವ್ಯವಸ್ಥೆ ಹಾಗೂ ಮೂಲಸೌಕರ್ಯಗಳು ಕುರಿತು ಆಯಾ ರಾಜ್ಯ ಸರ್ಕಾರಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಮತ್ತು ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು 2018ರ ಮೇ 8ರಂದು ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದಂತೆ ಈ ಅರ್ಜಿ ದಾಖಲಿಸಿಕೊಳ್ಳಲಾಗಿದೆ.

‘ರಾಜ್ಯದ ಕೇಂದ್ರ, ಜಿಲ್ಲಾ ಹಾಗೂ ತಾಲ್ಲೂಕು ಕಾರಾಗೃಹಗಳಲ್ಲಿನ ಮಾನಸಿಕ ಆರೋಗ್ಯ ಕಾಯ್ದೆ-2017ರ ನಿಯಮಗಳ ಸಮರ್ಪಕ ಅನುಷ್ಠಾನಕ್ಕೆ ಕಾಲಮಿತಿ ಹಾಕಿಕೊಳ್ಳಬೇಕು. ಕೈದಿಗಳ ಸಂದರ್ಶನಕ್ಕೆ ಕಲ್ಪಿಸಿರುವ ವ್ಯವಸ್ಥೆಯ ಕುರಿತ ಫೋಟೊಗಳನ್ನು ಕೋರ್ಟ್‌ಗೆ ಸಲ್ಲಿಸಬೇಕು’ ಎಂದು ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT