ಸೋಮವಾರ, ಜನವರಿ 24, 2022
20 °C

ನಟಿ ಶ್ರುತಿ ಹರಿಹರನ್‌ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ: ಬಿ ರಿಪೋರ್ಟ್ ಸಲ್ಲಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನಟಿ ಶ್ರುತಿ ಹರಿಹರನ್

ಬೆಂಗಳೂರು: ನಟಿ ಶ್ರುತಿ ಹರಿಹರನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆ ಪೂರ್ಣಗೊಳಿಸಿರುವ ಕಬ್ಬನ್ ಪಾರ್ಕ್ ಪೊಲೀಸರು, ನ್ಯಾಯಾಲಯಕ್ಕೆ ‘ಬಿ–ರಿಪೋರ್ಟ್’ ಸಲ್ಲಿಸಿರುವುದಾಗಿ ಗೊತ್ತಾಗಿದೆ.

ಶ್ರುತಿ ಅವರು ನೀಡಿದ್ದ ದೂರು ಆಧರಿಸಿ ಸಂಜ್ಞೆ ಮೂಲಕ ಮಹಿಳೆ ಗೌರವಕ್ಕೆ ಧಕ್ಕೆ (354,509) ಲೈಂಗಿಕ ಕಿರುಕುಳ (ಐಪಿಸಿ 354ಎ) ಹಾಗೂ ಜೀವಬೆದರಿಕೆ (ಐಪಿಸಿ 506) ಆರೋಪದಡಿ 2018ರಲ್ಲಿ ಪ್ರಕರಣ ದಾಖಲಾಗಿತ್ತು.

‘ವಿಸ್ಮಯ’ ಸಿನಿಮಾ ಚಿತ್ರೀಕರಣದ ವೇಳೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾಗುತ್ತಿತ್ತು. ಆರೋಪಕ್ಕೆ ಸಂಬಂಧ ಪಟ್ಟಂತೆ ಅರ್ಜುನ್ ಸರ್ಜಾ ಹಾಗೂ ಹಲವರನ್ನು ವಿಚಾರಣೆ ನಡೆಸಲಾಗಿತ್ತು. ಆರೋಪ ಸಾಬೀತುಪಡಿಸುವ
ಯಾವುದೇ ಪುರಾವೆಗಳು ಸಿಗದಿದ್ದರಿಂದ ಪೊಲೀಸರು, ನ್ಯಾಯಾಲಯಕ್ಕೆ ಬಿ–ರಿಪೋರ್ಟ್ ಸಲ್ಲಿಸಿರುವುದಾಗಿ ತಿಳಿದುಬಂದಿದೆ. 

₹ 3.45 ಲಕ್ಷ ಮೌಲ್ಯ ಚಿನ್ನಾಭರಣ ಜಪ್ತಿ: ಆರೋಪಿ ಬಂಧನ

ಬೆಂಗಳೂರು: ಸರ ಕಳವು ಹಾಗೂ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಯೋಗೇಶ್ ಎಂಬಾತನನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

'ಆರೋಪಿ ಯೋಗೇಶ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 3.45 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದ ದೂರುದಾರರು, ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಪ್ರವಾಸಕ್ಕೆಂದು ಮಡಿಕೇರಿಗೆ ನ. 3ರಂದು ಹೋಗಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ತಿಳಿದುಕೊಂಡ ಆರೋಪಿ, ರಾತ್ರಿ ವೇಳೆ ಬೀಗ ಮುರಿದು ಒಳನುಗ್ಗಿದ್ದ. ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ಕದ್ದುಕೊಂಡು ಪರಾರಿಯಾಗಿದ್ದ.’

‘ಕಬ್ಬಿಣದ ಗೇಟ್‌ ಬೀಗ ಮುರಿದಿದ್ದನ್ನು ಗಮನಿಸಿದ್ದ ಪಕ್ಕದ ಮನೆಯವರು, ದೂರುದಾರರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮನೆಗೆ ಬಂದು ಪರಿಶೀಲಿಸಿದಾಗ, ಕಳ್ಳತನವಾಗಿದ್ದು ಗೊತ್ತಾಗಿತ್ತು. ಈ ಬಗ್ಗೆ ಪ್ರಕರಣವೂ ದಾಖಲಾಗಿತ್ತು’ ಎಂದೂ ತಿಳಿಸಿದರು.

‘ಪುರಾವೆಗಳನ್ನು ಆಧರಿಸಿ ಆರೋಪಿ ಯೋಗೇಶ್‌ನನ್ನು ಬಂಧಿಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡ. ಗಿರಿನಗರ ಹಾಗೂ ಹುಳಿಮಾವು ಠಾಣೆ ವ್ಯಾಪ್ತಿಯಲ್ಲೂ ಆರೋಪಿ ಕೃತ್ಯ ಎಸಗಿರುವುದಾಗಿ ತಿಳಿಯಿತು’ ಎಂದೂ ವಿವರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು