ಶುಕ್ರವಾರ, ಫೆಬ್ರವರಿ 26, 2021
20 °C

ಗಲಭೆಗೆ ಸಂಚು: ಶಂಕಿತ ಉಗ್ರ ಮೆಹಬೂಬ್ ಪಾಷಾ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಮತೀಯ ಗಲಭೆ ಹುಟ್ಟುಹಾಕಲು ಹಾಗೂ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರ ಮೆಹಬೂಬ್ ಪಾಷಾನನ್ನು ಸಿಸಿಬಿ ಮತ್ತು ರಾಜ್ಯ ಗುಪ್ತದಳ ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ವಶಕ್ಕೆ ಪಡೆದಿದೆ.

ತಮಿಳುನಾಡಿನ ಪೊಲೀಸರು ಬೆಂಗಳೂರಿನಲ್ಲಿ ಮೂವರು ಶಂಕಿತ ಉಗ್ರರನ್ನು ಇತ್ತೀಚೆಗೆ ಬಂಧಿಸುತ್ತಿದ್ದಂತೆ ಮೆಹಬೂಬ್ ಪಾಷಾ ಹಾಗೂ ಆತನ 16 ಸಹಚರರು ತಲೆಮರೆಸಿಕೊಂಡಿದ್ದರು. ಅವರೆಲ್ಲರ ವಿರುದ್ಧ ಸುದ್ದುಗುಂಟೆಪಾಳ್ಯ ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್‌ ದಾಖಲಾಗಿದೆ.

ಇದನ್ನೂ ಓದಿ: ಕಾರ್ಯಾಚರಣೆ ತೀವ್ರಗೊಂಡ ಬೆನ್ನಲ್ಲೇ ಅಡಗುತಾಣ ಬದಲಾಯಿಸುತ್ತಿದ್ದಾರೆ ಜಿಹಾದಿಗಳು

ಶಿವಮೊಗ್ಗ, ರಾಮನಗರ, ಕೋಲಾರ ಹಾಗೂ ಬೆಂಗಳೂರಿನಲ್ಲಿ ಪಾಷಾ ಮತ್ತು ಆತನ ಸಹಚರರು ತಲೆಮರೆಸಿಕೊಂಡು ಓಡಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಆರೋಪಿಗಳ ಬಂಧನಕ್ಕೆ ರಚಿಸಲಾಗಿದ್ದ ಸಿಸಿಬಿ ಪೊಲೀಸರ ತಂಡ, ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಹಾಗೂ ಗುಪ್ತದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪಾಷಾನನ್ನು ವಶಕ್ಕೆ ಪಡೆದಿದ್ದಾರೆ. ಅಜ್ಞಾತ ಸ್ಥಳದಲ್ಲಿ ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆ ಇಸ್ಲಾಮಿಕ್‌ ಸ್ಟೇಟ್‌ (ಐಎಸ್) ಜೊತೆ ನಂಟು ಹೊಂದಿದ್ದ ಪಾಷಾನ ಪತ್ತೆಗೆ ಕೆಲವು ದಿನಗಳಿಂದ ತೀವ್ರ ಶೋಧ ನಡೆದಿತ್ತು. ಬೆಂಗಳೂರು ಜಿಹಾದಿ ತಂಡದ ನೇತೃತ್ವವನ್ನು ಪಾಷಾ ವಹಿಸಿದ್ದ ಎನ್ನಲಾಗಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿ ‌‘ಅಲ್ ಹಿಂದ್‘ ಟ್ರಸ್ಟ್ ಸ್ಥಾಪಿಸಿ ಜಿಹಾದಿ ಸಂಘಟನೆ ಕಟ್ಟಲು ಈತ ಮುಂದಾಗಿದ್ದ. ಅಲ್ಲದೆ, ಇದೇ ಟ್ರಸ್ಟ್‌ ಹೆಸರಿನಲ್ಲಿ  ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆತಾಲ್ಲೂಕಿನಲ್ಲಿ ಜಮೀನು ಖರೀದಿಗೆ ಯೋಜನೆ ಹಾಕಿದ್ದ ಎಂಬ ವಿಷಯವೂ ಗೊತ್ತಾಗಿದೆ. ತಮಿಳುನಾಡಿನ ಕ್ಯೂ ಬ್ರಾಂಚ್ ಪೊಲೀಸರು ಮತ್ತು ಸಿಸಿಬಿ ಕಾರ್ಯಚರಣೆ ವೇಳೆ ಪರಾರಿಯಾಗಿದ್ದ ಮೆಹಬೂಬ್ ‌ಪಾಷಾನನ್ನು ಬುಧವಾರ ರಾತ್ರಿಯೇ ವಶಕ್ಕೆ ಪಡೆಯಲಾಗಿತ್ತು ಎಂದೂ ಹೇಳಲಾಗಿದೆ.

ಇದನ್ನೂ ಓದಿ: ಶಂಕಿತ ಮೆಹಬೂಬ್ ಪಾಷಾ ‘ಐಎಸ್‌ ಸದಸ್ಯ’

‘ಬೆಂಗಳೂರು ಗುರಪ್ಪನಪಾಳ್ಯದಲ್ಲಿ ನೆಲೆಸಿದ್ದ ಮೆಹಬೂಬ್ ಪಾಷಾ, ಐಎಸ್ (ಇಸ್ಲಾಮಿಕ್‌ ಸ್ಟೇಟ್‌) ಉಗ್ರ ಸಂಘಟನೆಯ
ನಂಟು ಹೊಂದಿದ್ದಾನೆ. ಗುರಪ್ಪನಪಾಳ್ಯದಲ್ಲಿರುವ ತನ್ನ ಮನೆಯಲ್ಲೇ ಸಹಚರರ ಸಭೆ ನಡೆಸಿ, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಉಗ್ರ ಚಟುವಟಿಕೆ ನಡೆಸಲು ಸಂಚು ರೂಪಿಸಿದ್ದ’ ಎಂದು ಆತನ ವಿರುದ್ಧ ದಾಖಲಾದ ಎಫ್‌ಐಆರ್‌ನಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್‌ ಪ್ರಸ್ತಾಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು