ಮಂಗಳವಾರ, ಸೆಪ್ಟೆಂಬರ್ 28, 2021
24 °C
ರೈತರಿಂದಲೇ ಶಿಲಾನ್ಯಾಸ- – ಎಚ್ಚರಿಕೆ

ಮೇಕೆದಾಟು: ಸರ್ಕಾರ ನಿಲುವು ಸ್ಪಷ್ಟಪಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮೇಕೆದಾಟು ಜಲಾಶಯ ನಿರ್ಮಾಣ ಸಂಬಂಧ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಸರ್ಕಾರದ ಕೈಲಿ ನಿರ್ಮಾಣ ಕಾರ್ಯ ಸಾಧ್ಯವಾಗದೇ ಇದ್ದಲ್ಲಿ ರೈತರೇ ಅಡಿಗಲ್ಲು ಹಾಕುತ್ತೇವೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

‘ಮೇಕೆದಾಟು ಜಲಾಶಯ ನಿರ್ಮಾಣ ಮಾಡುವುದಾಗಿ ಸರ್ಕಾರ ಹೇಳುತ್ತಲೇ ಬಂದಿದೆ. ಆದರೆ ಯಾವಾಗ ಚಾಲನೆ ನೀಡಲಾಗುವುದು ಹಾಗೂ ಯಾವಾಗ ಯೋಜನೆ ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತಿಲ್ಲ. ಇದೇ ನಿರ್ಲಕ್ಷ್ಯ ಧೋರಣೆ ಮುಂದುವರಿದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ರೈತರು ಬಂದು ನಾವೇ ಅಡಿಗಲ್ಲು ಹಾಕುತ್ತೇವೆ. ಸದ್ಯದಲ್ಲೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ತಮಿಳುನಾಡಿನಲ್ಲಿ ಕಾವೇರಿ ನದಿ ನೀರು, ಮೇಕೆದಾಟು ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ವಿರುದ್ಧ ಸತ್ಯಾಗ್ರಹ ನಡೆಸಿರುವುದು ಸಹ ರಾಜಕೀಯ ಕಾರಣಕ್ಕೆ. ಹೀಗಾಗಿ ನಾವು ಪ್ರತಿಯಾಗಿ ಪ್ರತಿಭಟಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ತಮಿಳುನಾಡಿನ ಖ್ಯಾತೆಗಳಿಗೆ ನಾವು ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ ಎಂದರು.

ಅಣ್ಣಾಮಲೈ ಪ್ರತಿಭಟನೆಯ ವಿಚಾರದಲ್ಲಿ ತಾನು ಭಾರತೀಯ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸಿ.ಟಿ. ರವಿ ಅವರ ಹೇಳಿಕೆ ಮೂರ್ಖತನದ್ದು. ಮೊದಲು ನಮ್ಮ ತಾಯಿಯನ್ನು ಅಮ್ಮ ಅನ್ನುತ್ತೇವೆ, ತದನಂತರವಷ್ಟೇ ಬೇರೆಯವರಿಗೆ ಆ ಗೌರವ ಎಂದು ಹೇಳಿದರು.

ಕಾವೇರಿ ನ್ಯಾಯಮಂಡಳಿ, ಸುಪ್ರೀಂ ಕೋರ್ಟಿ ತೀರ್ಪಿನಂತೆ ತಮಿಳುನಾಡಿಗೆ ಸಿಗಬೇಕಾದ ಪ್ರಮಾಣದಷ್ಟು ನೀರು ಸಿಗಲಿದೆ. ನೀರು ಸಿಗದಿದ್ದ ಪಕ್ಷದಲ್ಲಿ ಮಾತ್ರ ಆ ರಾಜ್ಯ ಕಾವೇರಿ ನಿರ್ವಹಣಾ ಮಂಡಳಿಗೆ ಮೊರೆ ಹೋಗಬಹುದು. ಇದಿಷ್ಟೇ ಆ ರಾಜ್ಯದ ಹಕ್ಕು. ಜಲಾಶಯ ನಿರ್ಮಾಣದ ವಿಚಾರದಲ್ಲಿ ಆಕ್ಷೇಪಣೆ ವ್ಯಕ್ತಪಡಿಸುವ ಹಕ್ಕು ಆ ರಾಜ್ಯಕ್ಕೆ ಇಲ್ಲ ಎಂದು ಹೇಳಿದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಚಂದ್ರಶೇಖರ್, ಪ್ರಮುಖರಾದ ಬೈರೇಗೌಡ, ರಮೇಶ್, ಅನಂತರಾಮ ಪ್ರಸಾದ್, ಗೋವಿಂದರಾಜು, ಸೀಬಕಟ್ಟೆ ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು