ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸಾವಿರ ಹೆಕ್ಟೇರ್‌ ಕಾಡು ನಾಶ: ಮೇಕೆದಾಟು ಯೋಜನೆ ಅವೈಜ್ಞಾನಿಕ; ಟಿ.ವಿ.ರಾಮಚಂದ್ರ

‘ಕುಡಿಯುವ ನೀರಿನ ಸಮಸ್ಯೆ’ ಚಿಂತನ ಮಂಥನ ಕಾರ್ಯಕ್ರಮ
Published 23 ಮಾರ್ಚ್ 2024, 14:24 IST
Last Updated 23 ಮಾರ್ಚ್ 2024, 14:24 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ಯೋಜನೆ ಅವೈಜ್ಞಾನಿಕವಾಗಿದ್ದು, ಯೋಜನೆ ಅನುಷ್ಠಾನಗೊಂಡರೆ 5,000 ಹೆಕ್ಟೇರ್‌ ಕಾಡು ನಾಶವಾಗಲಿದೆ’ ಎಂದು ಪರಿಸರ ವಿಜ್ಞಾನಿ ಟಿ.ವಿ.ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ನೆಲ–ಜಲ ಸಂರಕ್ಷಣಾ ಸಮಿತಿ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಕುಡಿಯುವ ನೀರಿನ ಸಮಸ್ಯೆ’ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬೆಂಗಳೂರಿಗೆ ವರ್ಷಕ್ಕೆ 18 ಟಿಎಂಸಿ ಅಡಿ ನೀರು ಬೇಕು. ಮಳೆ ನೀರು ಸಂಗ್ರಹದ ಮೂಲಕವೇ 15 ಟಿಎಂಸಿ ಅಡಿ ನೀರು ಪೂರೈಸಬಹುದು. ಅದನ್ನು ಬಿಟ್ಟು, ಪರಿಸರಕ್ಕೆ ಹಾನಿ ಮಾಡುವ ಯೋಜನೆ ರೂಪಿಸಲಾಗುತ್ತಿದೆ ಎಂದರು.

‘5,000 ಹೆಕ್ಟೇರ್‌ ಅಂದರೆ 100 ಟಿಎಂಸಿ ಅಡಿ ನೀರು ಇಂಗಿಸುವ ಪ್ರದೇಶ. ಅದನ್ನು ನಾಶಪಡಿಸಿ, ಅಣೆಕಟ್ಟು ಕಟ್ಟಿ 65 ಟಿಎಂಸಿ ಅಡಿ ನೀರು ಸಂಗ್ರಹಿಸುವುದಾಗಿ ಹೇಳುವುದರಲ್ಲಿ ಅರ್ಥವಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬೆಳ್ಳಂದೂರು ಕೆರೆ ನೀರು ತ್ಯಾಜ್ಯದಿಂದ ತುಂಬಿದೆ. ನಾವು ನೇರವಾಗಿ ಕಲುಷಿತ ನೀರು ಬಳಸದಿರಬಹುದು. ಆದರೆ, ಆ ಕೆರೆಯ ಮೀನು, ಕಲುಷಿತ ನೀರಿನಲ್ಲಿ ಬೆಳೆದ ತರಕಾರಿ ಬಳಸಿದರೂ ತೊಂದರೆಯಾಗುತ್ತದೆ. 15 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಶೇ 1 ಇದ್ದ ಮೂತ್ರ ಪಿಂಡ ಸಮಸ್ಯೆ, ಈಗ ಶೇ 15ಕ್ಕೆ ಏರಿದೆ. ಕ್ಯಾನ್ಸರ್‌ನಲ್ಲಿ ಬೆಂಗಳೂರಿ ನಗರವೇ ಮೊದಲ ಸ್ಥಾನದಲ್ಲಿದೆ. ಇದೆಲ್ಲ ಕಲುಷಿತ ನೀರಿನ ಕೊಡುಗೆ’ ಎಂದು ವಿಶ್ಲೇಷಿಸಿದರು.

‘ಬೆಳ್ಳಂದೂರು ಮತ್ತು ವರ್ತೂರು ಕೆರೆಯನ್ನು ಪುನರುಜ್ಜೀವನಗೊಳಿಸಬೇಕು ಎಂದು ವರದಿ ನೀಡಿದ್ದೆವು. ಈಗ ಪುನರುಜ್ಜೀವನ ಕೆಲಸ ಮುಗಿಯುವ ಮೊದಲೇ ತ್ಯಾಜ್ಯನೀರು ಶುದ್ಧೀಕರಿಸಿ ಕೆರೆಗೆ ಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ. ಇದು ₹ 500 ಕೋಟಿ ಲೂಟಿ ಮಾಡುವ ಯೋಜನೆ’ ಎಂದು ಟೀಕಿಸಿದರು.

ಜಕ್ಕೂರು ಕೆರೆ ಪುನರುಜ್ಜೀವನಗೊಳಿಸಿದ್ದರಿಂದ ಸುತ್ತಲಿನ 300 ಕೊಳವೆಬಾವಿಗಳಲ್ಲಿ ಕಬ್ಬಿಣದ ಅಂಶವಿಲ್ಲದ ನೀರು ಬರುತ್ತಿದೆ. ಸಾರಕ್ಕಿ ಕೆರೆ ಪುನರುಜ್ಜೀವನಗೊಂಡಿದ್ದರಿಂದ ಅಲ್ಲಿನ ವಾತಾವರಣ ಚೆನ್ನಾಗಿದೆ ಎಂದು ವಿವರಿಸಿದರು.

ಕರ್ನಾಟಕ ನೆಲ–ಜಲ ಸಂರಕ್ಷಣಾ ಸಮಿತಿ ಸಂಚಾಲಕ ಕುರುಬೂರು ಶಾಂತಕುಮಾರ್‌ ಅವರು, ‘ಮೇಕೆದಾಟು ಯೋಜನೆ ರೂಪಿಸಲು ಬಿಡುವುದಿಲ್ಲ ಎಂದು ತಮಿಳುನಾಡಿನ ಮುಖ್ಯಮಂತ್ರಿ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಕಾಳಜಿ ಇದ್ದರೆ, ಇದರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಬೇಕು’ ಎಂದರು. 

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕರ್ನಾಟಕ ನೆಲ–ಜಲ ಸಂರಕ್ಷಣಾ ಸಮಿತಿ ಸಂಚಾಲಕ ‘ಮುಖ್ಯಮಂತ್ರಿ’ ಚಂದ್ರು, ಪ್ರತೀಕ್ಷ್‌ ಎನ್ವಿರೋ ಸಲ್ಯೂಷನ್ಸ್‌ ವ್ಯವಸ್ಥಾಪಕ ನಿರ್ದೇಶಕಿ ದಾಕ್ಷಾಯಣಿ ಎಸ್‌. ದಳವಾಯಿ, ರೈತ ಸಂಘದ ರಾಜ್ಯಾಧ್ಯಕ್ಷ ನಾರಾಯಣ ರೆಡ್ಡಿ, ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌, ಶಿಕ್ಷಣ ತಜ್ಞ ನಿರಂಜನಾರಾಧ್ಯ, ಕನ್ನಡ ಚಳವಳಿಗಾರ ಗುರುದೇವ ನಾರಾಯಣ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT